ಕೊಪ್ಪಳ: ಜಿಲ್ಲೆಗೆ ಘೋಷಣೆಯಾದ ಉಡಾನ್ ಯೋಜನೆ ಅನುಷ್ಠಾನ ಮಾಡುವ ಕುರಿತಂತೆ ನಾಗರಿಕ ವಲಯ, ಜನಪ್ರತಿನಿಧಿಗಳ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಬಲ್ಡೋಟಾ ಕಂಪನಿಯೂ ಶೀಘ್ರದಲ್ಲೇ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಿರುವ ಮಾಹಿತಿ ಲಭ್ಯವಾಗಿದೆ. ಆದರೆ ಕೆಲ ಷರತ್ತು ವಿ ಧಿಸಿಬೇಕು, ಬೇಡಿಕೆಗಳ ಕುರಿತಂತೆಯೂ ಜಿಲ್ಲಾಧಿಕಾರಿಯೊಂದಿಗೆ ಸಮಾಲೋಚನೆ ನಡೆಸಿದೆ.
ಕೇಂದ್ರ ಸರ್ಕಾರ ಜಿಲ್ಲೆಗೆ 2ನೇ ಹಂತದಲ್ಲಿ ಉಡಾನ್ ಯೋಜನೆ ಘೋಷಿಸಿ ಎರಡು ವರ್ಷ ಗತಿಸಿದೆ. ಆದರೆ ಇಲ್ಲಿವರೆಗೂ ಯೋಜನೆ ಅನುಷ್ಠಾನಗೊಂಡಿರಲಿಲ್ಲ. ಜಿಂದಾಲ್ ಬಳಿ ವಿಮಾನ ನಿಲ್ದಾಣ ಇರುವುದು, ಹುಬ್ಬಳ್ಳಿಯು ಕೊಪ್ಪಳ ಜಿಲ್ಲೆಗೆ 100 ಕಿ.ಮೀ. ದೂರದಲ್ಲಿ ಇರುವ ನೆಪ ಹೇಳಿಕೊಂಡೇ ಬಲ್ಡೋಟಾ ಕಂಪನಿ ಕಾಲಹರಣ ಮಾಡಿತ್ತು. ಜಿಲ್ಲೆಯ ಪ್ರಮುಖರು ಈಚೆಗೆ ಜಿಲ್ಲಾಧಿಕಾರಿ ಜತೆ ಸಭೆ ನಡೆಸಿ, ಸರ್ಕಾರದ ಮಟ್ಟದಲ್ಲಿ ಒತ್ತಡ ಹೇರಲು ಹಾಗೂ ಯೋಜನೆ ವಿಳಂಬಕ್ಕೆ ಕಾರಣವೇನು ಎನ್ನುವ ಕುರಿತು ಸುದೀರ್ಘ ಸಮಾಲೋಚನೆ ನಡೆಸಿದ್ದರು. ಆಗ ಜಿಲ್ಲಾಧಿಕಾರಿಗಳು, ಕಂಪನಿ ಮುಖ್ಯಸ್ಥರೊಂದಿಗೆ ಚರ್ಚಿಸಿ ಕಂಪನಿಯಿಂದ ಯಾವ ನಿರ್ಧಾರ ಬರಲಿದೆ. ಅದರ ಸಾಧಕ-ಬಾಧಕಗಳೇನು ಎನ್ನುವುದನ್ನು ತಿಳಿದು ಮುಂದಿನ ನಿರ್ಧಾರ ಕೈಗೊಳ್ಳುವ ಮಾತನ್ನಾಡಿದ್ದರು. ಜಿಲ್ಲೆಯ ಪ್ರಮುಖರೊಂದಿಗೆ ಜಿಲ್ಲಾಧಿಕಾರಿ ಸಭೆ ನಡೆಸಿದ ಬಳಿಕ ಕಂಪನಿ ಮುಖ್ಯಸ್ಥರ ಜೊತೆ ಮಾತನಾಡಿದ್ದಾರೆ.
ಸಾರ್ವಜನಿಕ ಸೇವೆಗೆ ಸ್ಪಂದನೆ: ಉಡಾನ್ ಯೋಜನೆ ಆರಂಭವಾದರೆ ಬಲ್ಡೋಟಾ ಕಂಪನಿಯು ವಿಮಾನ ನಿಲ್ದಾಣದ ಸೇವೆಯನ್ನು ನಾಗರಿಕ ಸೇವೆಗೆ ಅರ್ಪಿಸಬೇಕಿದೆ. ವಿಮಾನಗಳ ಹಾರಾಟವೂ ನಡೆಯಲಿದೆ. ಇದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಉಡಾನ್‌ಗೆ ತಕ್ಕಂತೆ ರನ್‌ವೇ ನಿರ್ಮಾಣ ಮಾಡುವುದು, ಮೆಡಿಕಲ್ ವ್ಯವಸ್ಥೆ, ವಿಮಾನ ನಿಲ್ದಾಣದ ವಿಸ್ತರಣೆ ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸುವುದು, ಪ್ರಯಾಣಿಕರಿಗೆ ವಿಶ್ರಾಂತಿ ಕೊಠಡಿಗಳು ಸೇರಿದಂತೆ ಸಾರಿಗೆ ವ್ಯವಸ್ಥೆಯ ಆರ್ಥಿಕ ವೆಚ್ಚ ನೋಡಿಕೊಳ್ಳುವುದು ಯಾರ ಜವಾಬ್ದಾರಿಯಾಗಲಿದೆ ಎನ್ನುವ ಪ್ರಶ್ನೆಯನ್ನು ಜಿಲ್ಲಾಧಿಕಾರಿ ಮುಂದಿಟ್ಟಿದೆ. ಅಲ್ಲದೇ, ಮಾ. 15ರೊಳಗಾಗಿ ಬಲ್ಡೋಟಾ ಕಂಪನಿಯಿಂದ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಿದೆ.
ಸರ್ಕಾರದ ಮೂಲಕ ಒತ್ತಡ: ಜಿಲ್ಲೆಯ ಪ್ರಮುಖರು ಸಭೆ ನಡೆಸಿ ಉಡಾನ್ ಯೋಜನೆ ಜಾರಿಗೆ ಒತ್ತಾಯಿಸಿದ ಬೆನ್ನಲ್ಲೇ ಸಂಸದ ಸಂಗಣ್ಣ ಕರಡಿ ಸೇರಿದಂತೆ ಇತರೆ ಶಾಸಕರು ಸಿಎಂ ಅವರನ್ನು ಭೇಟಿ ಮಾಡಿ ಯೋಜನೆ ಜಾರಿಗೆ ಮನವಿ ಮಾಡುವ ಜೊತೆಗೆ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರದ ಮಟ್ಟದಲ್ಲಿ ಒತ್ತಡ ಹೇರುತ್ತಿದ್ದಾರೆ. ಸಿಎಂ ಸಹಿತ ಕಂಪನಿ ಜೊತೆ ಸಮಾಲೋಚನೆ ಮಾಡುವುದಾಗಿ ತಿಳಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಯೋಜನೆ ಜಾರಿಗೆ ಪಕ್ಷಾತೀತ ಹೋರಾಟ: ವಿಮಾನ ನಿಲ್ದಾಣವಾದರೆ ಅಭಿವೃದ್ಧಿಗೂ ವೇಗ ದೊರೆಯಲಿದೆ. ಜಿಲ್ಲೆಯಲ್ಲಿ ಯೋಜನೆ ಜಾರಿಗೆ ಪಕ್ಷಾತೀತ ಹೋರಾಟಕ್ಕೂ ವೇದಿಕೆ ರೂಪಗೊಂಡಿದ್ದು, ಕೊಪ್ಪಳ-ಗಂಗಾವತಿಯಲ್ಲೂ ಪ್ರಮುಖರು ಸಭೆ ನಡೆಸಿದ್ದಾರೆ. ಜೊತೆಗೆ ಹೋರಾಟಕ್ಕೂ ಸಿದ್ಧವೆಂದಿದ್ದಾರೆ. ಬಲ್ಡೋಟಾ ಕಂಪನಿ ಒಪ್ಪಿದರೆ ಸರಿ, ಇಲ್ಲದಿದ್ದರೆ ಹೊಸದಾಗಿಯೇ ಸರ್ಕಾರದಿಂದಲೇ ಜಮೀನು ಸ್ವಾ ಧೀನ ಮಾಡಿ ವಿಮಾನ ನಿಲ್ದಾಣ ನಿರ್ಮಿಸುವ ಕುರಿತಂತೆ ಒಮ್ಮತದ ಒತ್ತಾಯ ಮಾಡಿದ್ದಾರೆ.
ಒಟ್ಟಿನಲ್ಲಿ ಜಿಲ್ಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಸರ್ವರೂ ಧ್ವನಿಗೂಡಿಸಿದ್ದು, ರಾಜ್ಯ ಸರ್ಕಾರವೂ ಶೀಘ್ರದಲ್ಲೇ ಕಂಪನಿಯೊಂದಿಗೆ ಸಮಾಲೋಚಿಸಿ ಕಂಪನಿಯ ಬೇಕು, ಬೇಡಿಕೆಗಳ ಬಗ್ಗೆ ಸ್ಪಂದಿಸಿ, ಅನುದಾನ ಘೋಷಣೆ ಮಾಡಿದರೆ ಮಾತ್ರ ಜಿಲ್ಲೆಯಲ್ಲಿ ಅಂದುಕೊಂಡಂತೆ ವಿಮಾನ ಹಾರಾಟ ನಡೆಯಲಿದೆ.
ದತ್ತು ಕಮ್ಮಾರ