ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸೋಮೇಶ್ವರ ಪ್ರದೇಶದ ಉಚ್ಚಿಲ-ಬಟ್ಟಪಾಡಿ ಸಮುದ್ರ ತೀರದಲ್ಲಿ ಸಮುದ್ರ ಕೊರೆತ ತಡೆಗೆ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ತಿಳಿಸಿದ್ದಾರೆ.
ವಿಧಾನಪರಿಷತ್ತಿನಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಪ್ರತಾಪ ಸಿಂಹ ನಾಯಕ್ ಪರವಾಗಿ ಭಾರತಿ ಶೆಟ್ಟಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಮುದ್ರ ಕೊರೆತಕ್ಕೆ ಶಾಶ್ಚತ ಪರಿಹಾರ ಕಂಡುಕೊಳ್ಳಲು ಕ್ರಮಕೈಗೊಳ್ಳಲಾಗುತ್ತಿದೆ. ಇದರ ನಡುವೆ ತಾತ್ಕಾಲಿಕ ಪರಿಹಾರಕ್ಕಾಗಿ 5 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ ಎಂದರು.
ಇದಕ್ಕೂ ಮೊದಲು ವಿಷಯ ಪ್ರಸ್ತಾಪಿಸಿದ ಭಾರತಿಶೆಟ್ಟಿ, ಇದು ಉಚ್ಚಿಲ-ಬಟ್ಟಪಾಡಿ ನಡುವಿನ 4 ಕಿ.ಮೀ ವ್ಯಾಪ್ತಿಯಲ್ಲಿ ವಾಸ ಮಾಡುತ್ತಿರುವ ಮೀನುಗಾರರ ಕುಟುಂಬಗಳ ಬದುಕಿನ ಪ್ರಶ್ನೆಯಾಗಿದೆ. ಮಳೆಗಾಲದಲ್ಲಿ ಸಮುದ್ರ ಕೊರೆತ ಸಂಭವಿಸಿ ಅವರ ಮನೆ, ರಸ್ತೆ, ಕೊಚ್ಚಿ ಹೋಗಿದೆ. ಈ ಬಗ್ಗೆ ಮನವಿ ಸಲ್ಲಿಸಲಾಗಿದೆ. ಅದರೂ ಪರಿಹಾರ ಸಿಕ್ಕಿಲ್ಲ.
ಸೋಮೇಶ್ವರ ಕಡೆ 6 ಬರ್ಮ್ ಹಾಗೂ ಬಟ್ಟಪಾಡಿ ಕಡೆ 4 ಬರ್ಮ್ ಹಾಕಲಾಗಿದೆ. ಇದರ ಮಧ್ಯೆ 2-3 ಕಿ.ಮೀ ವ್ಯಾಪ್ತಿಯಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ಕುಟುಂಬಗಳು ವಾಸ ಮಾಡುತ್ತಿವೆ ಅವರನ್ನು ರಕ್ಷಿಸುವ ಕೆಲಸ ಸರ್ಕಾರ ಮಾಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಸಚಿವರು, 2021ನೇ ಸಾಲಿನಲ್ಲಿ ಮಳೆಗಾಲದಲ್ಲಿ ಸಂಭವಿಸಿದ ಭೀಕರ ಸಮುದ್ರ ಕೊರೆತದಿಂದ ಬಟ್ಟಪಾಡಿಯ ಸಂಪರ್ಕ ರಸ್ತೆಯ ಸುಮಾರು 350 ಮೀ ಉದ್ದಕ್ಕೆ ಪೂರ್ಣ ಕೊಚ್ಚಿ ಹೋಗಿದ್ದು, ಸುಮಾರು 300 ಮೀ ಉದ್ದದ ಉಳಿದ ಭಾಗಕ್ಕೆ ಭಾಗಶ: ಹಾನಿಯಾಗಿದ್ದು, ರಸ್ತೆಯ ಭಾಗಕ್ಕೆ ಅಂದಾಜು 1.20 ಕೋಟಿ ನಷ್ಟವಾಗಿದೆ.
ತಡೆಗೋಡೆ ನಿರ್ಮಾಣಕ್ಕೆ ಹೆಚ್ಚುವರಿ ಅನುದಾನದ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಒಪ್ಪಿಲ್ಲ. ಆದರೆ, ರಾಜ್ಯ ವಿಪತ್ತು ಪರಿಹಾರ ನಿಧಿ (ಎಸ್‌ಡಿಆರ್‌ಎಫ್)ಯಡಿ 5 ಕೋಟಿ ಮಂಜೂರಾಗಿದ್ದು, ಆದ್ಯತೆಯ ಮೇಲೆ 650 ಮೀ ಉದ್ದಕ್ಕೆ ರಸ್ತೆ ಪುನರ್ ನಿರ್ಮಿಸಲು ಮತ್ತು 75 ಮೀ ಉದ್ದಕ್ಕೆ ಸಂರಕ್ಷಣಾ ಕಾಮಗಾರಿ ಕೈಗೊಳ್ಳಲು ಟೆಂಡರ್ ಕರೆಯಲಾಗಿದೆ ಎಂದರು.
ಅದೇ ರೀತಿ ಕಾಸರಗೋಡಿನ ನೆಲ್ಲಿಕುನ್ನಿಯಲ್ಲಿ “ಸೀ ವೇವ್ ಬ್ರೇಕರ್’ ನಿರ್ಮಾಣ ಮಾಡಲಾಗಿದೆ. ಇದೇ ಮಾದರಿಯಲ್ಲಿ ಬೆಟ್ಟಪಾಡಿಯಲ್ಲಿ ಪ್ರಾಯೋಗಿಕವಾಗಿ ಮಾಡಲು ಮುಖ್ಯಮಂತ್ರಿಯವರು ಸೂಚನೆ ನೀಡಿದ್ದಾರೆ. ಇದರ 1 ಕಿ.ಮೀ ನಿರ್ಮಾಣಕ್ಕೆ 25 ಕೋಟಿ ರೂ. ಆಗುತ್ತದೆ ಎಂದು ಸಚಿವ ಅಂಗಾರ ಮಾಹಿತಿ ನೀಡಿದರು.