ನವದೆಹಲಿ: ದೇಶಾದ್ಯಂತ ನ್ಯೂಸ್18 ಸುದ್ದಿ ವಾಹಿನಿ ನಡೆಸಿದ ಸಮೀಕ್ಷೆಯ ಪ್ರಕಾರ, ಶೇ.67.2ರಷ್ಟು ಮುಸ್ಲಿಂ ಮಹಿಳೆಯರು ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಸಮಾನ ನಾಗರಿಕ ಸಂಹಿತೆ(ಯುಸಿಸಿ)ಯನ್ನು ಬೆಂಬಲಿಸಿದ್ದಾರೆ.
ದೇಶದ 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 8,035 ಮುಸ್ಲಿಂ ಮಹಿಳೆಯರನ್ನು 884 ವರದಿಗಾರರು ಸಂದರ್ಶನ ನಡೆಸಿದ್ದಾರೆ. ಅನಕ್ಷರಸ್ಥರಿಂದ ಹಿಡಿದ ಸ್ನಾತಕೋತ್ತರ ಪದವೀಧಾರರ ವರೆಗೂ ಸಮಾಜದ ವಿವಿಧ ಸ್ತರಗಳ 18ರಿಂದ 65 ವರ್ಷದ ಮುಸ್ಲಿಂ ಮಹಿಳೆಯರು ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು.
ಮದುವೆ, ವಿಚ್ಛೇದನ, ಉತ್ತರಾಧಿಕಾರ, ದತ್ತು, ಜೀವನಾಂಶ ಸೇರಿದಂತೆ ಎಲ್ಲಾ ಧಾರ್ಮಿಕ ಸಮುದಾಯಗಳಿಗೆ ಅನ್ವಯವಾಗುವಂತೆ ಒಂದೇ ಕಾನೂನು ಜಾರಿಯು ಸಮಾನ ನಾಗರಿಕ ಸಂಹಿತೆಯ ಮೂಲ ಉದ್ದೇಶವಾಗಿದೆ. ಆದರೆ ಯುಸಿಸಿ ಜಾರಿಯನ್ನು ಅಖೀಲ ಭಾರತೀಯ ಮುಸ್ಲಿಂ ವೈಯಕ್ತಿಕ ನ್ಯಾಯಮಂಡಳಿ ಬಲವಾಗಿ ಖಂಡಿಸಿದೆ.
ಸಮೀಕ್ಷೆಯಲ್ಲಿ, ಮದುವೆ, ವಿಚ್ಛೇದನ, ಉತ್ತರಾಧಿಕಾರ, ದತ್ತು, ಜೀವನಾಂಶ ಸೇರಿದಂತೆ ವೈಯಕ್ತಿಕ ವಿಚಾರದಲ್ಲಿ ಎಲ್ಲಾ ಭಾರತೀಯರಿಗೆ ಒಂದೇ ಕಾನೂನು ಜಾರಿಗೆ ನೀವು ಬೆಂಬಲಿಸುವಿರಾ ಎಂದು ಕೇಳಲಾದ ಪ್ರಶ್ನೆಗೆ, ಸಮೀಕ್ಷೆಯಲ್ಲಿ ಭಾಗವಹಿಸಿದವರ ಪೈಕಿ, 5403 ಮುಸ್ಲಿಂ ಮಹಿಳೆಯರು(ಶೇ.67.2) ಹೌದು ಎಂದು ಉತ್ತರ ನೀಡಿದ್ದಾರೆ. ಅದೇ ರೀತಿ 2,039 ಮಂದಿ(ಶೇ.25.4) ಇಲ್ಲ ಎಂದು ಹೇಳಿದ್ದಾರೆ. 593 ಮಹಿಳೆಯರು(ಶೇ.7.4) ಗೊತ್ತಿಲ್ಲ ಅಥವಾ ಹೇಳಲು ಆಗುವುದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಮದುವೆಗೆ 21 ವರ್ಷ ಸೂಕ್ತ:
ಇದೇ ವೇಳೆ, ಪುರುಷ ಮತ್ತು ಮಹಿಳೆಯರಿಗೆ ಮದುವೆಗೆ ಕಾನೂನುಬದ್ಧ ವಯಸ್ಸು 21 ವರ್ಷ ಸೂಕ್ತ ಎಂಬುದಕ್ಕೆ ಶೇ.78.7ರಷ್ಟು(6,320) ಮುಸ್ಲಿಂ ಮಹಿಳೆಯರು ಬೆಂಬಲಿಸಿದ್ದಾರೆ. ಶೇ.16.6ರಷ್ಟು(1,337) ಮಂದಿ ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ. ಉಳಿದ ಶೇ.4.7ರಷ್ಟು(378) ಮಹಿಳೆಯರು ಗೊತ್ತಿಲ್ಲ ಅಥವಾ ಹೇಳಲು ಆಗುವುದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಯುಸಿಸಿಗೆ ಮುಸ್ಲಿಂ ಮಹಿಳೆಯರ ಬೆಂಬಲ
67.2% ಹೌದು
25.4% ಇಲ್ಲ
7.4% ಗೊತ್ತಿಲ್ಲ ಅಥವಾ ಹೇಳಲು ಆಗುವುದಿಲ್ಲ