Advertisement

ಉತ್ತರಾಖಂಡದಲ್ಲಿ UCC ಪರೀಕ್ಷೆ? ಮುಂಗಾರು ಅಧಿವೇಶನದಲ್ಲಿ ಸಂಹಿತೆಯಿಲ್ಲ?

12:02 AM Jul 06, 2023 | Team Udayavani |

ಡೆಹ್ರಾಡೂನ್‌: ಏಕರೂಪ ನಾಗರಿಕ ಸಂಹಿತೆಯನ್ನು ಅನುಷ್ಠಾನಗೊಳಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಸಜ್ಜಾಗಿದೆ. ಆದರೆ ಈ ಬಾರಿಯ ಮುಂಗಾರು ಸಂಸತ್‌ ಅಧಿವೇಶನದಲ್ಲಿ ಈ ಮಸೂದೆ ಮಂಡನೆಯಾಗುವ ಸಾಧ್ಯತೆಯಿಲ್ಲ.

Advertisement

ಅದರ ಬದಲು ಉತ್ತರಾಖಂಡ ರಾಜ್ಯದಲ್ಲಿ ಮೊದಲಿಗೆ ಯುಸಿಸಿ ಪರೀಕ್ಷಾರ್ಥ ಅನುಷ್ಠಾನವನ್ನು ಕೈಗೊಳ್ಳಲಿದೆ. ಇಲ್ಲಿ ನಾಗರಿಕರ ಪ್ರತಿಕ್ರಿಯೆ ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳಲು ಬಿಜೆಪಿ ಹೈಕಮಾಂಡ್‌ ಹೆಚ್ಚಿನ ಗಮನಹರಿಸುತ್ತಿದೆ. ಈ ಪರೀಕ್ಷೆಗೆ ಬಿಜೆಪಿ ಆಡಳಿತಾರೂಢ ರಾಜ್ಯವೇ ಆದಲ್ಲಿ ಮತ್ತಷ್ಟು ಉತ್ತಮವೆಂಬುದು ತಜ್ಞರ ಅಭಿಪ್ರಾಯ.
ಇದಕ್ಕೆ ಪುಷ್ಟಿ ನೀಡುವಂತೆ ಉತ್ತರಾಖಂಡ ಸಿಎಂ ಪುಷ್ಕರ್‌ಸಿಂಗ್‌ ಧಾಮಿ ಕೂಡ ಹೊಸದಿಲ್ಲಿಯಲ್ಲಿದ್ದು, ರಾಜ್ಯದಲ್ಲಿ ಯುಸಿಸಿ ಅನುಷ್ಠಾನದ ಬಗ್ಗೆ ಉತ್ಸುಕರಾಗಿದ್ದಾರೆ. ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಜತೆಗೂ ಮಾತುಕತೆ ನಡೆಸುತ್ತಿದ್ದಾರೆಂದು ಮೂಲಗಳು ಮಾಧ್ಯಮ ಸಂಸ್ಥೆಯೊಂದಕ್ಕೆ ಸ್ಪಷ್ಟಪಡಿಸಿವೆ. ಈ ಹಿನ್ನೆಲೆ ಯುಸಿಸಿ ಮೊದಲಿಗೆ ಅನುಷ್ಠಾನಗೊಳ್ಳುವುದು ಉತ್ತಾರಾಖಂಡಲ್ಲೇ ಎಂಬುದು ಬಹುತೇಕ ಖಚಿತವಾದಂತಾಗಿದೆ.

ಭಾರತದ ಸಂವಿಧಾನದಲ್ಲಿ ಯುಸಿಸಿ ಉಲ್ಲೇಖವಿದ್ದರೂ, ಅದರ ಜಾರಿಯನ್ನು ಸಂವಿಧಾನ ಸಂಸ್ಥಾಪಕರು ಕಡ್ಡಾಯಗೊಳಿಸಿಲ್ಲ. ಹೀಗಿರುವಾಗ ಯುಸಿಸಿ ಹೆಸರಿನಲ್ಲಿ ವೈಯಕ್ತಿಕ ಕಾನೂನುಗಳ ಪೆಟ್ಟಿಗೆ (ಪಂಡೋರಾ ಬಾಕ್ಸ್‌)ಯನ್ನು ತೆರೆದು, ಸಮಾಜವನ್ನು ವಿಭಜಿಸುವ, ದೇಶದಲ್ಲಿರುವ ಸಾಮರಸ್ಯ, ವೈವಿಧ್ಯತೆಯನ್ನು ಹಾಳುಗೆಡವಬೇಡಿ ಎಂದು ಮಾನ್ಯ ಪ್ರಧಾನಮಂತ್ರಿ ಹಾಗೂ ಕಾನೂನು ಸಂಸ್ಥೆಗಳು ಹಾಗೂ ರಾಜಕೀಯ ಮುಖಂಡರಿಗೆ ನಾನು ಮನವಿ ಮಾಡುತ್ತೇನೆ
ವೀರಪ್ಪ ಮೊಲಿ, ಕಾಂಗ್ರೆಸ್‌ ಹಿರಿಯ ನಾಯಕ/ ಮಾಜಿ ಕಾನೂನು ಸಚಿವ

ಸಂಸತ್‌ ಚಳಿಗಾಲದ ಕಲಾಪದಲ್ಲಿ ಮಂಡನೆ?

ಯುಸಿಸಿ ಅನುಷ್ಠಾನದ ಕುರಿತು 22ನೇ ಕಾನೂನು ಆಯೋಗವು ಜನಾಭಿಪ್ರಾಯ ಸಂಗ್ರಹಕ್ಕೆ ಮುಂದಾಗಿತ್ತು. ಶೀಘ್ರವೇ ಈ ಕುರಿತು ಶಿಫಾರಸು ಕೂಡ ನೀಡಲಿದೆ. ಶಿಫಾರಸುಗಳು ಯುಸಿಸಿ ಜಾರಿಗೆ ಅನುಕೂಲಕರವಾಗಿದ್ದರೆ, ಚಳಿಗಾಲದ ಅಧಿವೇಶನದಲ್ಲಿಯೇ ಮಸೂದೆ ಮಂಡಿಸಲು ಯೋಜಿಸಲಾಗಿದೆ. ಲೋಕಸಭೆಯಲ್ಲಿ ಬಹುಮತದೊಂದಿಗೆ ಮಸೂದೆಗೆ ಅನುಮೋದನೆ ದೊರೆತರೂ ರಾಜ್ಯಸಭೆಯಲ್ಲಿ ಸವಾಲುಗಳು ಎದುರಾಗಬಹುದು. ಈ ಹಿನ್ನೆಲೆಯಲ್ಲಿ ಬಿಜೆಪಿ ತುಸು ಚಿಂತನೆ ನಡೆಸಿದೆ.

Advertisement

ಸಿಪಿಐ (ಎಂ) ವಿರುದ್ಧ ಕಾಂಗ್ರೆಸ್‌ ಸಿಡಿಮಿಡಿ
ಯುಸಿಸಿ ವಿಚಾರವಾಗಿ ಕೇರಳದಲ್ಲಿ ಎಡಪಕ್ಷಗಳ ನಡುವೆಯೇ ಭಿನ್ನಮತ ಎದುರಾಗಿದೆ. ಆಡಳಿತಾರೂಢ ಸಿಪಿಐ (ಎಂ) ಎಡಪಕ್ಷಗಳ ನಿಲುವು ಧಿಕ್ಕರಿಸಿ, ಯುಸಿಸಿಗೆ ಬೆಂಬಲವಾಗಿದೆ ಎಂದು ಕಾಂಗ್ರೆಸ್‌ ನೇತೃತ್ವದ ವಿಪಕ್ಷಗಳ ಒಕ್ಕೂಟ ಯುನೈಟೆಡ್‌ ಡೆಮೊಕ್ರಾಟಿಕ್‌ ಫ್ರಂಟ್‌ ಆರೋಪಿಸಿದೆ. ಕೇರಳದ ಪ್ರಥಮ ಮುಖ್ಯಮಂತ್ರಿ ನಂಬೂದಿರಿಪಾಡ್‌ ಅವರು 1957ರಲ್ಲೇ ಯುಸಿಸಿಯನ್ನು ಬೆಂಬಲಿಸಿದ್ದರು. ಇಂದಿಗೂ ಸಿಪಿಐ ಅದೇ ನಿಲುವನ್ನು ಪಾಲಿಸುತ್ತಿದೆ. ಆದರೆ ಬಹಿರಂಗಪಡಿಸುತ್ತಿಲ್ಲ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next