Advertisement

ವಾರದೊಳಗೆ ಓಲಾ- ಉಬರ್‌ ವಾಹನ ಚಾಲಕರ ಸಮಸ್ಯೆ ಪರಿಹಾರ

12:07 PM Jan 31, 2017 | |

ಬೆಂಗಳೂರು: ಆ್ಯಪ್‌ ಆಧಾರಿತ ವಾಹನಗಳ ಚಾಲಕರು ಎದುರಿಸುತ್ತಿರುವ ಸಮಸ್ಯೆಗಳನ್ನು ವಾರದಲ್ಲಿ ಬಗೆಹರಿಸಲಾಗುವುದು ಎಂದು ಓಲಾ ಮತ್ತು ಉಬರ್‌ ಕಂಪೆನಿಗಳು ಭರವಸೆ ನೀಡಿವೆ.  ನಗರದ ಸಾರಿಗೆ ಇಲಾಖೆ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಸಾರಿಗೆ ಆಯುಕ್ತ ಎಂ.ಕೆ.ಅಯ್ಯಪ್ಪ ಹಾಗೂ ಜಂಟಿ ಆಯುಕ್ತ ಜ್ಞಾನೇಂದ್ರಕುಮಾರ್‌ ನೇತೃತ್ವದಲ್ಲಿ ಓಲಾ-ಉಬರ್‌ನೊಂದಿಗೆ ಜೋಡಣೆ ಮಾಡಿಕೊಂಡ ವಾಹನಗಳ ಚಾಲಕರ ಸಂಧಾನ ಸಭೆಯಲ್ಲಿ ಕಂಪೆನಿಗಳ ಅಧಿಕಾರಿಗಳು ಈ ಭರವಸೆ ನೀಡಿದರು. 

Advertisement

ವಿನಾಕಾರಣ ದಂಡ ವಿಧಿಸುವುದು, ನಿತ್ಯ 18 ಟ್ರಿಪ್‌ ಕಡ್ಡಾಯ, ಕಂಪೆನಿಗೆ ಕರಾರು ಪತ್ರ ಮಾಡಿಕೊಂಡವರಿಗೆ ಆದ್ಯತೆ ನೀಡುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ಆ್ಯಪ್‌ ಆಧಾರಿತ ವಾಹನಗಳ ಚಾಲಕರು ಹಾಗೂ ಮಾಲೀಕರು ಎದುರಿಸುತ್ತಿದ್ದಾರೆ. ಈ ಸಂಬಂಧ ಹಲವು ಬಾರಿ ಪ್ರತಿಭಟನೆ ನಡೆಸಿದ್ದರು. ಈಚೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಕೂಡ ಮಾಡಿದ್ದರು. 

ಸಚಿವರ ಸೂಚನೆ ಮೇರೆಗೆ ಸಾರಿಗೆ ಅಧಿಕಾರಿಗಳು ಆ್ಯಪ್‌ ಆಧಾರಿತ ಕಂಪೆನಿಗಳು ಮತ್ತು ಅವರೊಂದಿಗೆ ಭಾಗೀದಾರರಾದ ಟ್ಯಾಕ್ಸಿ ಚಾಲಕರು ಹಾಗೂ ಮಾಲೀಕರ ಸಭೆ ಕರೆದಿದ್ದರು. ಅಲ್ಲಿ ವಾರದ ಅಂತರದಲ್ಲಿ ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಕಂಪೆನಿಗಳು ಹೇಳಿದವು. ಇದಕ್ಕೆ ಪ್ರತಿಕ್ರಿಸಿದ ಚಾಲಕರು ವಾರದಲ್ಲಿ ಬಗೆಹರಿಯದಿದ್ದರೆ, ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು. 

ಶೇರ್‌ ಕ್ಯಾಬ್‌ ಇಲ್ಲ-ಆಯುಕ್ತ: ಆ್ಯಪ್‌ ಆಧಾರಿತ ವಾಹನಗಳು ಯಾವುದೇ ಕಾರಣಕ್ಕೂ “ಶೇರ್‌ ಕ್ಯಾಬ್‌’ಗಳ ಕಾರ್ಯಾಚರಣೆ ಮಾಡುವಂತಿಲ್ಲ ಎಂದು ಸಾರಿಗೆ ಆಯುಕ್ತ ಎಂ.ಕೆ.ಅಯ್ಯಪ್ಪ ಓಲಾ ಮತ್ತು ಉಬರ್‌ ಕಂಪೆನಿಗಳಿಗೆ ಸೂಚಿಸಿದ್ದಾರೆ. ಹಾಗೊಂದು ವೇಳೆ ಈ ವ್ಯವಸ್ಥೆ ಆರಂಭಿಸುವುದಾದರೆ, “ಸೂಕ್ತ ಕಾರಣಗಳೊಂದಿಗೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಬೇಕು. ನಂತರ ಸರ್ಕಾರದ ಅನುಮತಿ ಪಡೆದು ಮುಂದುವರಿಸತಕ್ಕದ್ದು’ ಎಂದು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next