ಹೊಸದಿಲ್ಲಿ: ನಿಮ್ಮ ಹೆಸರಿನ ಜತೆಗೆ ಯಾವುದೇ ಉಪನಾಮ (ಸರ್‌ನೇಮ್)ಗಳಿಲ್ಲವೇ? ನೀವು ಏಕನಾಮ(ಸಿಂಗಲ್ ನೇಮ್)ವನ್ನು ಮಾತ್ರ ಹೊಂದಿದ್ದೀರಾ? ಹಾಗಿದ್ದರೆ ನಿಮಗೆ ಯುಎಇ (ಸಂಯುಕ್ತ ಅರಬ್ ಒಕ್ಕೂಟ)ಗೆ ಭೇಟಿ ನೀಡಲು ಸಾಧ್ಯವಾಗದು!
ಹೌದು ಯಾವುದೇ ಸರ್‌ನೇಮ್ ಇಲ್ಲದ “ಹೆಸರು’ ಮಾತ್ರ ಹೊಂದಿರುವ ವ್ಯಕ್ತಿಗಳಿಗೆ ನಮ್ಮ ದೇಶಕ್ಕೆ ಪ್ರವೇಶವಿಲ್ಲ ಎಂಬ ಹೊಸ ನಿಯವುವನ್ನು ಯುಎಇ ಜಾರಿಗೆ ತಂದಿದೆ.
ನ.21ರಿಂದಲೇ ಅನ್ವಯವಾಗುವಂತೆ ಪ್ರವೇಶ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಏರ್‌ಇಂಡಿಯಾ, ಏರ್‌ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಇಂಡಿಗೋ ವಿಮಾನಯಾನ ಸಂಸ್ಥೆಗಳು ಸುತ್ತೋಲೆಯನ್ನೂ ಹೊರಡಿಸಿವೆ.
ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಈ ನಿಯಮ ಅನ್ವಯವಾಗುತ್ತದೆ. ನೀವು ಏಕನಾಮ ಹೊಂದಿರುವವರಾದರೆ ಉದಾಹರಣೆಗೆ ಪಾಸ್‌ಪೋರ್ಟ್‌ನಲ್ಲಿ ನಿಮ್ಮ ಹೆಸರು “ನವೀನ್’ ಎಂದಷ್ಟೇ ಇದ್ದರೆ, ನಿಮಗೆ ಪ್ರವೇಶ ಸಿಗುವುದಿಲ್ಲ. ನಿಮ್ಮ ಹೆಸರಿನ ಜೊತೆಗೆ ಉಪನಾಮಗಳಿದ್ದರೆ (ಉದಾ : ನವೀನ್ ರಾಮಪ್ಪ, ಬೆಂಗಳೂರು) ನೀವು ಯಾವುದೇ ಸಮಸ್ಯೆಯಿಲ್ಲದೇ ಯುಎಇಗೆ ಎಂಟ್ರಿ ಪಡೆಯಬಹುದು.
ಈ ನಿಯಮವು ವಿಸಿಟಿಂಗ್ ವೀಸಾ, ವೀಸಾ ಆನ್ ಅರೈವಲ್, ಉದ್ಯೋಗ ವೀಸಾ ಮತ್ತು ತಾತ್ಕಾಲಿಕ ವೀಸಾ ಹೊಂದಿರುವವರಿಗೆ ಅನ್ವಯವಾಗುತ್ತದೆ. ಯುಎಇ ರೆಸಿಡೆಂಟ್ ಕಾರ್ಡ್ ಹೊಂದಿರುವವರಿಗೆ ಇದು ಅನ್ವಯವಾಗುವುದಿಲ್ಲ.