ಅಬುಧಾಬಿ: ಯೆಮೆನ್ ನ ಹೌತಿ ಬಂಡುಕೋರರು ರಾಜಧಾನಿ ಅಬುಧಾಬಿಯನ್ನು ಗುರಿಯಾಗಿರಿಸಿಕೊಂಡು ಹಾರಿಸಿದ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಡೆ ಹಿಡಿದು ಹೊಡೆದುರುಳಿಸಲಾಗಿದೆ ಎಂದು ಯುಎಇ ರಕ್ಷಣಾ ಸಚಿವಾಲಯ ಸೋಮವಾರ (ಜನವರಿ 24) ತಿಳಿಸಿದೆ.
ಇದನ್ನೂ ಓದಿ:ಸಿದ್ದರಾಮಯ್ಯ ಕಾಲದ ಹಗರಣ ಪ್ರಶ್ನೆಗೆ ಎಚ್ ಡಿಕೆ ಸಿದ್ದತೆ: ಮತ್ತೆ ಅರ್ಕಾವತಿ ಸದ್ದು?
ಯೆಮೆನ್ ಬಂಡುಕೋರರ ದಾಳಿಗೆ ಯುಎಇ ಗಡಿಯಲ್ಲಿ ಇಬ್ಬರು ಭಾರತೀಯರು, ಒರ್ವ ಪಾಕಿಸ್ತಾನಿ ಪ್ರಜೆ ಸೇರಿದಂತೆ ಮೂವರು ಸಾವನ್ನಪ್ಪಿದ್ದು, ಈ ದಾಳಿಯ ಹೊಣೆಯನ್ನು ಯೆಮೆನ್ ಬಂಡುಕೋರರು ಹೊತ್ತಕೊಂಡ ಬಳಿಕ ಈ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ.
ಸೋಮವಾರ ಹೌತಿ ಬಂಡುಕೋರರು ನಡೆಸಿದ ದಾಳಿಯಲ್ಲಿ ಯಾವುದೇ ಸಾವು, ನೋವು ಸಂಭವಿಸಿಲ್ಲ. ಬಂಡುಕೋರರು ಗುರಿಯಾಗಿರಿಸಿಕೊಂಡು ಹಾರಿಸಿದ ಕ್ಷಿಪಣಿಯನ್ನು ಹೊಡೆದುರುಳಿಸಿದ್ದು, ಕ್ಷಿಪಣಿಯ ಅವಶೇಷಗಳು ಅಬುಧಾಬಿ ಸುತ್ತಮುತ್ತಲಿನ ಪ್ರದೇಶದಲ್ಲಿ ಕೆಳಕ್ಕೆ ಬಿದ್ದಿರುವುದಾಗಿ ವರದಿ ವಿವರಿಸಿದೆ.
ಹೌತಿ ಬಂಡುಕೋರರ ಎಲ್ಲಾ ರೀತಿಯ ದಾಳಿಗಳನ್ನು ಎದುರಿಸಲು ಯುಎಇ ಸಿದ್ಧವಾಗಿದೆ ಎಂದು ಸಚಿವಾಲಯ ಬಿಡುಗಡೆಗೊಳಿಸಿರುವ ಹೇಳಿಕೆಯಲ್ಲಿ ತಿಳಿಸಿದ್ದು, ದೇಶವನ್ನು ಎಲ್ಲಾ ರೀತಿಯ ದಾಳಿಗಳಿಂದ ರಕ್ಷಿಸಲು ಸೇನೆ ಎಲ್ಲಾ ವಿಧದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ಡಬ್ಲ್ಲುಎಎಂ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಯುಎಇ ಕುರಿತ ಅಧಿಕೃತ ಸುದ್ದಿಯನ್ನು ಮಾತ್ರ ಜನರು ನಂಬಬೇಕಾಗಿದ್ದು, ಊಹಾಪೋಹದ ವರದಿಗೆ ಕಿವಿಗೊಡಬಾರದೆಂದು ಸಚಿವಾಲಯ ಮನವಿ ಮಾಡಿಕೊಂಡಿದೆ.
ಕಳೆದ ಶುಕ್ರವಾರ ಯೆಮೆನ್ ನ ಉತ್ತರಪ್ರಾಂತ್ಯದ ಸದ್ದಾದಲ್ಲಿರುವ ತಾತ್ಕಾಲಿಕ ಬಂಧನ ಕೇಂದ್ರದ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ 60 ಮಂದಿ ಸಾವನ್ನಪ್ಪಿದ್ದರು. ಮಂಗಳವಾರ ಹೌತಿ ಬಂಡುಕೋರರ ಹಿಡಿತದಲ್ಲಿರುವ ಸನಾದಲ್ಲಿ ನಡೆದ ಕಾರ್ಯಾಚರಣೆಯಲ್ಲಿ 20 ಮಂದಿ ಸಾವನ್ನಪ್ಪಿದ್ದರು ಎಂದು ವರದಿ ತಿಳಿಸಿದೆ.