ಮಂಗಳೂರು: ಮಂಗಳೂರಿನಿಂದ ತೆರಳುವ ಹಜ್ ಯತ್ರಾರ್ಥಿಗಳಿಗೆ ಮುಂದಿನ ವರ್ಷದಿಂದ ಮತ್ತೆ ನೇರ ವಿಮಾನ ಸೌಲಭ್ಯವನ್ನು ಪುನರಾರಂಭಿಸಲು ಕೇಂದ್ರ ಸರಕಾರದೊಂದಿಗೆ ಮಾತುಕತೆ ನಡೆಸ ಲಾಗುವುದು ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ತಿಳಿಸಿದರು.
ಜಪ್ಪಿನಮೊಗರು ಯೇನಪೊಯ ಶಾಲೆಯಲ್ಲಿ ಮಂಗಳವಾರ ದ.ಕ. ಮತ್ತುಉಡುಪಿ ಜಿಲ್ಲೆಯ ಹಜ್ ಯಾತ್ರಾರ್ಥಿ ಗಳಿಗೆ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
2014ರಿಂದ 2020ರ ತನಕ ಮಂಗಳೂರಿನಿಂದಲೇ ಹಜ್‌ಗೆ ನೇರ ವಿಮಾನ ಇತ್ತು. ಕೊರೋನಾದ ಬಳಿಕ ಸ್ಥಗಿತಗೊಂಡಿದೆ. ಹಜ್‌ಗೆ ಹೋಗುವವರು ಬೆಂಗಳೂರಿಗೆ ಹೋಗಿ ಅಲ್ಲಿಂದ ವಿಮಾನದ ಮೂಲಕ ತೆರಳಬೇಕಾಗಿದೆ. ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸಂಪರ್ಕ ಸೌಲಭ್ಯ ಇರುವಾಗ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಿಂದ ಹಜ್‌ಗೆ ಯಾತ್ರಾರ್ಥಿಗಳಿಗೆ ತುಂಬಾ ಅನುಕೂಲವಾಗುತ್ತಿತ್ತು. ಮುಂದಿನ ವರ್ಷ ರಾಜ್ಯಮತ್ತು ಜಿಲ್ಲಾ ಹಜ್ ಸಮಿತಿಯ ನೇತೃ ತ್ವದಲ್ಲಿ ಕೇಂದ್ರಕ್ಕೆ ಮನವಿ ಸಲ್ಲಿಸಿ, ಕೇಂದ್ರ ಸರಕಾರದ ಹಜ್ ಮತ್ತು ವಿಮಾನಯಾನ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಲಾಗುವುದು ಎಂದರು.
ಯೇನಪೊಯ ವಿ.ವಿ. ಕುಲಪತಿ ಡಾ| ವೈ. ಅಬ್ದುಲ್ ಕುಂಞಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ರಾಜ್ಯ ಹಜ್ ಸಮಿತಿಯ ಸದಸ್ಯ ಸಯ್ಯಿದ್ ಅಶ್ರಫ್ ತಂಙಳ್ ಅಸ್ಸಖಾಫ್‌ಮದನಿ ಆದೂರು ದುವಾ ನಿರ್ವಹಿಸಿ ದರು. ಜಿಲ್ಲಾ ವಕ್ಫ್ ಸಮಿತಿ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಉಪಾಧ್ಯಕ್ಷ ಡಾ| ಎ.ಕೆ. ಜಮಾಲ್, ಬಿಸಿಸಿಐ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ, ದ.ಕ. ಮತ್ತು ಉಡುಪಿ ಮುಸ್ಲಿಂ ಸೆಂಟ್ರಲ್ ಪ್ರಧಾನ ಕಾರ್ಯದರ್ಶಿ ಹಾಜಿ ಮೊಹಮ್ಮದ್ ಹನೀಫ್, ಪ್ರಮುಖರಾದ ಬಿ.ಎಸ್ ಬಶೀರ್, ಸಿ.ಎಚ್. ಉಳ್ಳಾಲ, ಹನೀಫ್ ಹಾಜಿ ಗೋಳ್ತಮಜಲು, ರಿಯಾಝ್ ಬಂದರು, ರಾಜ್ಯ ಹಜ್ ಸಮಿತಿಯ ಅಧಿಕಾರಿ ಅಕ್ರಂ, ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕರ್ ಉಪಸ್ಥಿತರಿದ್ದರು.
ದ.ಕ.1,044, ಉಡುಪಿ ಜಿಲ್ಲೆಯ 79 ಮಂದಿಗೆ ಲಸಿಕೆ ಹಾಕಲಾಯಿತು.