ಮಂಗಳೂರು: ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರಿಗೆ ಕೋವಿಡ್-19 ಸೋಂಕು ದೃಢವಾಗಿದ್ದು, ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದ ಕಾರಣ ಮಾಜಿ ಸಚಿವ, ಉಳ್ಳಾಲ ಶಾಸಕ ಯು ಟಿ ಖಾದರ್ ಅವರು ಸ್ವಯಂ ಕ್ವಾರಂಟೈನ್ ನಲ್ಲಿರಲು ನಿರ್ಧರಿಸಿದ್ದಾರೆ.
ಈ ಮೂಲಕ ಟ್ವೀಟ್ ಮಾಡಿರುವ ಯು ಟಿ ಖಾದರ್ ಅವರು, ಐವನ್ ಡಿಸೋಜಾ ಜೊತೆಗೆ ಪ್ರಾಥಮಿಕ ಸಂಪರ್ಕಿತದಲ್ಲಿದ್ದವರು ಕೆಮ್ಮು ಜ್ವರ ಮುಂತಾದ ಲಕ್ಷಣ ಕಂಡು ಬಂದಲ್ಲಿ ತಕ್ಷಣ ಪರೀಕ್ಷೆಗೆ ಒಳಗಾಗುವಂತೆ ಮನವಿ ಮಾಡಿದ್ದಾರೆ.
ಕ್ವಾರಂಟೈನ್ ನಲ್ಲಿರುವ ಕಾರಣ ಇಂದು ನಿಗದಿಯಾಗಿದ್ದ ಜನ ಸಮಾನ್ಯರ ಭೇಟಿ, ಕ್ಷೇತ್ರದ ಅಭಿವೃದ್ದಿ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆಗಿನ ಸಭೆ, ಕ್ಷೇತ್ರದಲ್ಲಿ ನಿಗದಿಯಾಗಿದ್ದ ವಿವಿಧ ಕಾರ್ಯಕ್ರಮಗಳು ಮುಂದೂಡಲ್ಪಟ್ಟಿದ್ದೆ. ಜನ ಸಾಮಾನ್ಯರ ಸೇವೆಗೆ ದೂರವಾಣಿ ಮೂಲಕ ಲಭ್ಯವಿದ್ದು ಅಗತ್ಯವಿದ್ದಲ್ಲಿ ನೇರವಾಗಿ ದೂರವಾಣಿ ಮೂಲಕ ನನ್ನನ್ನು ಎಂದಿನಂತೆ ಸಂಪರ್ಕಿಸಬಹುದಾಗಿದೆ ಎಂದು ಮಾಜಿ ಸಚಿವರು ಹೇಳಿದ್ದಾರೆ.
ಮಾಜಿ ಎಂಎಲ್ ಸಿ ಐವನ್ ಡಿಸೋಜಾ ಮತ್ತು ಅವರ ಪತ್ನಿಗೆ ಕೋವಿಡ್-19 ಸೋಂಕು ತಾಗಿರುವುದು ಶನಿವಾರ ಸಂಜೆ ದೃಢವಾಗಿತ್ತು. ಆದರೆ ವರದಿ ಬರುವ ಮೊದಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಮಂಗಳೂರು ಭೇಟಿಯ ವೇಳೆ ಐವನ್ ಡಿಸೋಜಾ ಅವರು ಕಾಂಗ್ರೆಸ್ ನಾಯಕರೊಂದಿಗೆ ಕಾಣಿಸಿಕೊಂಡಿದ್ದರು. ಇದು ಕಾಂಗ್ರೆಸ್ ನಾಯಕರ ಆತಂಕಕ್ಕೆ ಕಾರಣವಾಗಿದೆ.