ವಾರಾಣಸಿ: “ಕೊರೊನಾ 2ನೇ ಅಲೆಯನ್ನು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರಕಾರ ಸಮರ್ಥವಾಗಿ ನಿಭಾಯಿಸಿದೆ. ಆರೋಗ್ಯ ಇಲಾಖೆಯ ಸೌಲಭ್ಯಗಳ ಕೊರತೆಯನ್ನು ಸರಿಪಡಿಸಿ, ವೈದ್ಯಕೀಯ ಸಿಬಂದಿಯಲ್ಲಿ ಆತ್ಮಸ್ಥೈರ್ಯ ತುಂಬಿಸಿ, ಕ್ಲಿಷ್ಟ ಪರಿಸ್ಥಿತಿಯಲ್ಲೂ ಕೊರೊನಾವನ್ನು ಕಟ್ಟಿಹಾಕುವಲ್ಲಿ ಉತ್ತರ ಪ್ರದೇಶ ಸರಕಾರ ಯಶಸ್ವಿಯಾಗಿರುವುದು ಶ್ಲಾಘ ನೀಯ’ ಎಂದು ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದ್ದಾರೆ.
ಕೊರೊನಾ 2ನೇ ಅಲೆಯ ಲಾಕ್‌ಡೌನ್ ಮುಗಿದ ಅನಂತರ ಇದೇ ಮೊದಲ ಬಾರಿಗೆ ತಮ್ಮ ಲೋಕಸಭಾ ಕ್ಷೇತ್ರವಾದ ವಾರಾಣಸಿಗೆ ಗುರುವಾರ ಭೇಟಿ ನೀಡಿದ ಪ್ರಧಾನಿ ಮೋದಿ, 1,500 ಕೋಟಿ ರೂ.ಗಳ ವಿವಿಧ ಯೋಜನೆಗಳಿಗೆ ಚಾಲನೆ ಹಾಗೂ ಶಿಲಾ ನ್ಯಾಸ ನೆರವೇರಿಸಿ ಮಾತನಾಡಿದರು.
ಅನಂತರ ತಮ್ಮ ಮಾತುಗಳನ್ನು ಸಾಮಾಜಿಕ ಭದ್ರತೆಯತ್ತ ಹೊರಳಿಸಿದ ಮೋದಿ, “ಈ ಹಿಂದೆ ಉತ್ತರ ಪ್ರದೇಶ ಮಾಫಿಯಾ ಹಾಗೂ ಉಗ್ರವಾದಿಗಳ ರಾಜ್ಯವಾಗಿತ್ತು. ಅವೆಲ್ಲವನ್ನು ಯೋಗಿ ಸರಕಾರ ನಿರ್ಮೂಲನೆ ಮಾಡಿದೆ. ನಮ್ಮ ಅಕ್ಕ- ತಂಗಿಯ ಮೇಲೆ, ಹೆಣ್ಣು ಮಕ್ಕಳ ಮೇಲೆ ಕೆಟ್ಟ ದೃಷ್ಟಿ ಬೀರುವವರು ಈಗ ಹತ್ತು ಬಾರಿ ಯೋಚಿಸುವಂತಾಗಿದೆ’ ಎಂದರು.
ಕಾಶಿ “ವೈದ್ಯಕೀಯ ಚಿಕಿತ್ಸಾ ಸ್ವರ್ಗ’!: ಕಾಶಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಬಗ್ಗೆ ಮೆಚ್ಚುಗೆ ಸೂಚಿಸಿದರು. ಇದಲ್ಲದೆ, 8,000 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳು ಈ ಕ್ಷೇತ್ರದಲ್ಲಿ ಪ್ರಗತಿಯಲ್ಲಿವೆ” ಎಂದರು.
ಕಾಮಗಾರಿಗಳಿಗೆ ಚಾಲನೆ: ಬನಾರಸ್ ಹಿಂದೂ ವಿವಿಯಲ್ಲಿ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಸೌಲಭ್ಯ ನಿರ್ಮಾಣ, ಗೊದೌಲಿಯಾದಲ್ಲಿ ಹಲವು ಹಂತಗಳ ಪಾರ್ಕಿಂಗ್ ಸೌಲಭ್ಯ ಕಾಮಗಾರಿ, ಗಂಗಾ ನದಿಯಲ್ಲಿ ರೊ-ರೊ ಮಾದರಿಯ ಮಿನಿ ಹಡಗುಗಳ ಸಂಚಾರ ಕಾಮಗಾರಿ, ವಾರಾಣಸಿ- ಗಾಜಿಯಾಬಾದ್ ಹೈವೇನಲ್ಲಿ 3 ಲೇನ್‌ಗಳ ಮೇಲ್ಸೇತುವೆ ಸೇರಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.
ರುದ್ರಾಕ್ಷಿ ಲೋಕಾರ್ಪಣೆ :
ಜಪಾನ್ ಸಹಯೋಗದೊಂದಿಗೆ ನಿರ್ಮಿಸಲಾಗಿರುವ “ರುದ್ರಾಕ್ಷಿ’ ಅಂತಾರಾಷ್ಟ್ರೀಯ ಸಹಕಾರ ಮತ್ತು ಸಮಾವೇಶ ಕೇಂದ್ರವನ್ನು ಮೋದಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಜಪಾನ್ ದೇಶ ಭಾರತದ ವಿಶ್ವಾಸಾರ್ಹ ಸ್ನೇಹಿತ ಎಂದು ಶ್ಲಾಘಿಸಿದರು. ವಿಶ್ವದ ಮಹೋನ್ನತ ವಿದ್ಯಾಪೀಠಗಳಲ್ಲಿ ಒಂದು ಎಂದು ಹೆಸರುವಾಸಿಯಾಗಿರುವ ಕಾಶಿ ಹೆಸರಾಂತ ಸಾಹಿತಿಗಳು ಹಾಗೂ ಕಲಾವಿದರನ್ನೊಳಗೊಂಡಿದೆ. ಈ ಕ್ಷೇತ್ರದಲ್ಲಿ ಈ ವಿದ್ವಾಂಸರು ತಮ್ಮ ಕಲೆಯನ್ನು ಪ್ರಸ್ತುತಪಡಿಸಲು ಅಂತಾರಾಷ್ಟ್ರೀಯ ಮಟ್ಟದ ಸೌಕರ್ಯಗಳಿರಲಿಲ್ಲ. ಈ ನಿಟ್ಟಿನಲ್ಲಿ ಈ ಕೇಂದ್ರ ಪ್ರತಿಭಾ ಪ್ರದರ್ಶನದ ವೇದಿಕೆಯಾಗಲಿದೆ ಎಂದರು. ವಾರಾಣಸಿ ಜಗತ್ತಿನ ಪ್ರಮುಖ ಕೇಂದ್ರವಾಗಿ ಬದಲಾಗಲಿದೆ ಎಂದರು.