ನಟ ಯೋಗಿ ಅಭಿನಯದ ಒಂದೆರೆಡು ಸಿನಿಮಾಗಳು ಈಗ ಬಿಡುಗಡೆಗೆ ಸಜ್ಜಾಗಿವೆ. ಆ ಸಾಲಿಗೆ ಈಗ ದಯಾಳ್ ಪದ್ಮನಾಭ್ ನಿರ್ದೇಶನದ “ಒಂಬತ್ತನೇ ದಿಕ್ಕು’ ಕೂಡ ಇದೆ. ಇದೀಗ ಚಿತ್ರಕ್ಕೆ ಸೆನ್ಸಾರ್‌ನಿಂದ ಯಾವುದೇ ಕಟ್ಸ್ ಇಲ್ಲದೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಅಲ್ಲದೇ ಸರ್ಕಾರದ ಅನುಮತಿ, ಹಾಗೂ ಚಿತ್ರಮಂದಿರಗಳ ಆರಂಭ ನೋಡಿಕೊಂಡು ಬಿಡುಗಡೆ ಮಾಡುವ ಉತ್ಸಾಹದಲ್ಲಿದೆ ಚಿತ್ರತಂಡ.
ಸುಮಾರು 40 ದಿನಗಳ ಕಾಲ ಬೆಂಗಳೂರು, ಶ್ರೀರಂಗಪಟ್ಟಣದಲ್ಲಿ ಚಿತ್ರೀಕರಣಗೊಂಡಿರುವ ಸಿನಿಮಾದಲ್ಲಿ ಟ್ರಾವೆಲ್ ಏಜೆಂಟ್ ಆಗಿ ಯೋಗಿ ಕಾಣಿಸಿಕೊಂಡಿದ್ದು, ಸಾಮಾನ್ಯ ಹುಡುಗಿಯ ಪಾತ್ರದಲ್ಲಿಅದಿತಿ ಪ್ರಭುದೇವ ನಟಿಸಿದ್ದಾರೆ. ಉಳಿದಂತೆ ಸಂಪತ್‍ಕುಮಾರ್, ಆಶೋಕ್ , ಶೃತಿ ನಾಯಕ್, ಯತಿರಾಜ್, ಮಧುಸೂಧನ್ ಮುಂತಾದವರು ನಟಿಸಿದ್ದು, ವಿಶೇಷ ಪಾತ್ರದಲ್ಲಿ ಸಾಯಿಕುಮಾರ್ ಕಾಣಿಸಿಕೊಂಡಿದ್ದಾರೆ.
ಇನ್ನು ಈ ಚಿತ್ರಕ್ಕೆ ಡಿ ಪಿಕ್ಚರ್ಸ್ ನ ದಯಾಳ್ ಪದ್ಮನಾಭನ್, ಜಿ. ಸಿನಿಮಾಸ್‍ನ ಗುರು ದೇಶಪಾಂಡೆ ಮತ್ತು ಚೆನ್ನೈ ಮೂಲದ ಕೆ9 ಸ್ಟುಡಿಯೋ ಸೇರಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆ, ಪ್ರೀತಿ ಮೋಹನ್ ಸಂಕಲನ, ವಿಕ್ರಂ ಮೋರ್ ಸಾಹಸ ಮತ್ತು ಅಭಿಷೇಕ್ ಎಸ್.ಎನ್. ಸಂಭಾಷಣೆ ಚಿತ್ರಕ್ಕಿದೆ.
ಅಲ್ಲದೇ ಈ ಸಿನಿಮಾ ಬಳಿಕ ಯೋಗಿ ಅಭಿನಯದ ಮತ್ತೊಂದು ಬಿಗ್ ಸಿನಿಮಾಗೆ ರೆಡಿಯಾಗುತ್ತಿದ್ದಾರೆ. ಹೌದು, ತಮ್ಮದೇ ಬ್ಯಾನರ್‌ನಲ್ಲಿ “ಕಂಸ’ ಎಂಬ ಚಿತ್ರದಲ್ಲಿ ನಟಿಸುವ ಬಗ್ಗೆ ಈಗಾಗಲೇ ಸುದ್ದಿಯೂ ಆಗಿದೆ. ಆದರೆ, ಆ ಚಿತ್ರ ಸೆಟ್ಟೇರುವ ಮುನ್ನವೇ ಯೋಗಿ ಅವರು, ಮತ್ತೊಂದು ಹೊಸ ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆ ಚಿತ್ರವನ್ನು ನಿರ್ಮಾಪಕ ಎನ್.ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ.
ಇನ್ನು, ಅನಂತ್‌ರಾಜು ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಅದೊಂದು ಪಕ್ಕಾ ದೇಸಿ ಕಥೆ. ಅದರಲ್ಲೂ ಈಗಿನ ಮಾಡರ್ನ್ ಹುಡುಗರ ಲವ್‌ಸ್ಟೋರಿ ಇಲ್ಲಿರಲಿದೆ. ನಾಲ್ವರು ಹುಡುಗರು ಹುಡುಗಿಯೊಬ್ಬಳ ಹಿಂದೆ ಹೋದಾಗ, ಏನೆಲ್ಲಾ ಆಗುತ್ತೆ ಅನ್ನೋದು ಒನ್‌ಲೈನ್. ಆ ಹುಡುಗರ ಬದುಕಲ್ಲಿ ಹುಡುಗಿ ಎಂಟ್ರಿ ಕೊಟ್ಟಾಗ, ಹೇಗೆಲ್ಲಾ ಬದಲಾಗುತ್ತಾರೆ ಎಂಬುದನ್ನು ಹಾಸ್ಯದ ರೂಪದಲ್ಲಿ ಹೇಳುವ ಪ್ರಯತ್ನ ಮಾಡಲಿದ್ದಾರೆ ನಿರ್ದೇಶಕರು.