ಹೊಸದಿಲ್ಲಿ: ಸ್ಪೇನ್‌ನಲ್ಲಿ ನಡೆಯುತ್ತಿರುವ ಅಂಡರ್-23 ವಿಶ್ವ ಕುಸ್ತಿ ಸ್ಪರ್ಧೆಯ ಗ್ರೀಕೊ ರೋಮನ್ ವಿಭಾಗದಲ್ಲಿ ಭಾರತದ ಸಾಜನ್ ಭನ್ವಾಲಾ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಪದಕ ಕಂಚಿನದ್ದಾದರೂ ಇದು ವಿಶ್ವ ಕುಸ್ತಿ ಗ್ರೀಕೊ ರೋಮನ್ ವಿಭಾಗದಲ್ಲಿ ಭಾರತಕ್ಕೆ ಒಲಿದ ಮೊದಲ ಪದಕ ಎಂಬುದು ಉಲ್ಲೇಖನೀಯ.
ಬುಧವಾರದ ಪ್ಲೇ ಆಫ್ ಪಂದ್ಯದಲ್ಲಿ ಸಾಜನ್ ಭನ್ವಾಲಾ ಉಕ್ರೇನ್‌ನ ಡಿಮಿಟ್ರೊ ವಾಸೆಟ್‌ಸ್ಕಿ ಅವರನ್ನು ಸೋಲಿಸಿದರು. ಭನ್ವಾಲಾ ಮೊದಲ ಸುತ್ತಿನಲ್ಲಿ ಲಿಥುವೇನಿಯಾದ ಐಸ್ಟಿಸ್ ಲಿಯುಗ್ಮಿನಾಸ್ ವಿರುದ್ಧ ಗೆದ್ದು ಬಂದರು. ಆದರೆ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಮಾಲ್ಡೋವಾದ ಅಲೆಕ್ಸಾಂಡ್ರಿನ್ ಗುಟು ವಿರುದ್ಧ ಸೋತರು.
ಗುಟು ಫೈನಲ್ ಪ್ರವೇಶಿದ್ದರಿಂದ ಭನ್ವಾಲಾ ಪದಕ ಸ್ಪರ್ಧೆಯಲ್ಲಿ ಉಳಿದುಕೊಂಡರು. ರೆಪಿಶೇಜ್ ಸುತ್ತಿನಲ್ಲಿ ಕಜಾಕ್‌ಸ್ಥಾನದ ರದುಲ್ ಝುನಿಸ್ ಅವರನ್ನು 9-6ರಿಂದ ಮಣಿಸಿ ಕಂಚಿನ ಸ್ಪರ್ಧೆಯಲ್ಲಿ ಕಾಣಿಸಿಕೊಂಡರು.
ಭಾರತದ ಮತ್ತೋರ್ವ ಕುಸ್ತಿಪಟು ವಿಕಾಸ್ (72 ಕೆಜಿ), ಸುಮಿತ್ (67 ಕೆಜಿ) ಕೂಡ ರೆಪಿಶೇಜ್ ಸುತ್ತಿನಲ್ಲಿ ಕಂಚಿನ ಪದಕಕ್ಕೆ ಹೋರಾಡಲಿದ್ದಾರೆ. ಆದರೆ 67 ಕೆಜಿ ವಿಭಾಗದಲ್ಲಿ ಆಶು ಪದಕ ಸ್ಪರ್ಧೆಯಿಂದ ಹೊರಬಿದ್ದರು.
ಈ ಸ್ಪರ್ಧೆಗಾಗಿ ಭಾರತದ ಕೇವಲ 6 ಗ್ರೀಕೊ ರೋಮನ್ ಸ್ಪರ್ಧಿಗಳಿಗಷ್ಟೇ ಸ್ಪೇನ್‌ಗೆ ತೆರಳಲು ಸಾಧ್ಯವಾಗಿದೆ. ಉಳಿದ 21 ಸ್ಪರ್ಧಿಗಳ ವೀಸಾವನ್ನು ಸ್ಪೇನ್ ರಾಯಭಾರ ಕಚೇರಿ ತಿರಸ್ಕರಿಸಿದೆ.