Advertisement

U-19 ಸೂಪರ್‌ ಸಿಕ್ಸ್‌ : ಭಾರತಕ್ಕೆ ಕಿವೀಸ್‌ ಎದುರಾಳಿ

11:19 PM Jan 29, 2024 | Team Udayavani |

ಬ್ಲೋಮ್‌ಫಾಂಟೀನ್‌: ಅಂಡರ್‌-19 ವಿಶ್ವಕಪ್‌ ಪಂದ್ಯಾವಳಿಯ ಲೀಗ್‌ ಹಂತದಲ್ಲಿ ಮೂರೂ ಪಂದ್ಯಗಳನ್ನು ಗೆದ್ದಿರುವ ಹಾಲಿ ಚಾಂಪಿಯನ್‌ ಭಾರತ, ಮಂಗಳವಾರ ಮೊದಲ ಸೂಪರ್‌ ಸಿಕ್ಸ್‌ ಪಂದ್ಯವಾಡಲಿದೆ. ಎದುರಾಳಿ ನ್ಯೂಜಿಲ್ಯಾಂಡ್‌.
“ಎ’ ವಿಭಾಗದ ಲೀಡರ್‌ ಎನಿಸಿರುವ ಉದಯ್‌ ಸಹಾರಣ್‌ ಪಡೆ ತನ್ನ ನೆಚ್ಚಿನ ತಾಣವಾದ ಬ್ಲೋಮ್‌ಫಾಂಟೀನ್‌ನಲ್ಲಿ ಈ ಪಂದ್ಯವನ್ನು ಆಡಲಿದೆ. ಮೂರೂ ಲೀಗ್‌ ಪಂದ್ಯಗಳನ್ನು ಭಾರತ ಇಲ್ಲೇ ಆಡಿತ್ತು. ಆದರೆ ನ್ಯೂಜಿಲ್ಯಾಂಡ್‌ ಈಸ್ಟ್‌ ಲಂಡನ್‌ನಿಂದ ನೂತನ ತಾಣಕ್ಕೆ ಆಗಮಿಸಿದೆ.

Advertisement

ಲೀಗ್‌ ಹಂತದಲ್ಲಿ ಭಾರತಕ್ಕೆ ಎದುರಾದ ಬಾಂಗ್ಲಾದೇಶ, ಐರ್ಲೆಂಡ್‌ ಮತ್ತು ಯುಎಸ್‌ಎ ಅಷ್ಟೇನೂ ಬಲಾಡ್ಯ ತಂಡಗಳಾಗಿರಲಿಲ್ಲ. ಸೂಪರ್‌ ಸಿಕ್ಸ್‌ ಹಂತದಿಂದ ಸ್ಪರ್ಧೆ ತೀವ್ರಗೊಳ್ಳ ಲಿದೆ. 5 ಬಾರಿಯ ಚಾಂಪಿಯನ್‌ ಆಗಿರುವ “ಬಾಯ್ಸ ಇನ್‌ ಬ್ಲೂಸ್‌’ ಲೀಗ್‌ ಹಂತದ ಲಯವನ್ನು ಕಾಯ್ದುಕೊಳ್ಳಬೇಕಿದೆ.

ಆದರ್ಶ್‌ ಸಿಂಗ್‌, ಅರ್ಶಿನ್‌ ಕುಲಕರ್ಣಿ, ಮುಶೀರ್‌ ಖಾನ್‌, ನಾಯಕ ಉದಯ್‌ ಸಹಾರಣ್‌ ಅವರೆಲ್ಲ ಬ್ಯಾಟಿಂಗ್‌ ವಿಭಾಗದಲ್ಲಿ ಈಗಾಗಲೇ ಉಜ್ವಲ ಫಾರ್ಮ್ ಪ್ರದರ್ಶಿಸಿದ್ದಾರೆ. ಬೌಲಿಂಗ್‌ ವಿಭಾಗದಲ್ಲಿ ಎಡಗೈ ಪೇಸರ್‌ ನಮನ್‌ ತಿವಾರಿ ಘಾತಕವಾಗಿ ಪರಿಣಮಿಸಿದ್ದಾರೆ. ಬಾಂಗ್ಲಾ ವಿರುದ್ಧ ವಿಕೆಟ್‌ಲೆಸ್‌ ಎನಿಸಿದರೂ ಅನಂತರದ 2 ಪಂದ್ಯಗಳಲ್ಲಿ ತಲಾ 4 ವಿಕೆಟ್‌ ಹಾರಿಸಿದ್ದನ್ನು ಮರೆಯುವಂತಿಲ್ಲ. ಎಡಗೈ ಸ್ಪಿನ್ನರ್‌ ಸೌಮ್ಯ ಪಾಂಡೆ ಕೂಡ ಪರಿಣಾಮಕಾರಿ ದಾಳಿ ಸಂಘಟಿಸಿದ್ದಾರೆ.

ಕಿವೀಸ್‌ ಬ್ಯಾಟಿಂಗ್‌ ದೌರ್ಬಲ್ಯ
ನ್ಯೂಜಿಲ್ಯಾಂಡ್‌ “ಡಿ’ ವಿಭಾಗದ ದ್ವಿತೀಯ ಸ್ಥಾನಿಯಾಗಿದೆ. ಅಫ್ಘಾನಿಸ್ಥಾನ ವಿರುದ್ಧ ಕೇವಲ 91 ರನ್‌ ಬೆನ್ನಟ್ಟುವಾಗ 9 ವಿಕೆಟ್‌ಗಳನ್ನು ಉದುರಿಸಿಕೊಂಡಿತ್ತು. ಹಾಗೆಯೇ ಪಾಕಿಸ್ಥಾನ ವಿರುದ್ಧ 140ಕ್ಕೆ ಕುಸಿದು 10 ವಿಕೆಟ್‌ ಸೋಲಿಗೆ ತುತ್ತಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next