Advertisement

ಜ್ವರ ಕಾರಣಗಳು ವಿಧಗಳು ಮತ್ತು ಮುನ್ನೆಚ್ಚರಿಕೆ

10:07 PM Jan 01, 2022 | Team Udayavani |

ದೇಹದ ಉಷ್ಣತೆಯು ಸಹಜಕ್ಕಿಂತ ಹೆಚ್ಚಿದ್ದಾಗ ಅದನ್ನು ಜ್ವರ ಎಂಬುದಾಗಿ ಕರೆಯುತ್ತೇವೆ. ದೇಹದ ಸಹಜ ಉಷ್ಣತೆಯು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಿದ್ದು, 97 ಡಿಗ್ರಿ ಫ್ಯಾರನ್‌ಹೀಟ್‌ನಿಂದ 99 ಡಿಗ್ರಿ ಫ್ಯಾರನ್‌ಹೀಟ್‌ವರೆಗೂ ಇರಬಹುದಾಗಿದೆ. ಚಳಿಗಾಲದಲ್ಲಿ ಎಲ್ಲರೂ ಅನುಭವಿಸುವ ಒಂದು ಸಾಮಾನ್ಯ ಲಕ್ಷಣ ಇದು. ಆದರೆ ಕೊರೊನಾ ಸಾಂಕ್ರಾಮಿಕವು ಸುತ್ತಮುತ್ತೆಲ್ಲ ಇರುವಾಗ ಜ್ವರ ಬರುವುದು ಭಯ, ಗಲಿಬಿಲಿಗಳಿಗೆ ಕಾರಣವಾಗಬಹುದಾಗಿದೆ.

Advertisement

ಸಾಮಾನ್ಯವಾಗಿ ಸೋಂಕನ್ನು ಉಂಟುಮಾಡುವ ಸೂಕ್ಷ್ಮಜೀವಿಗಳು ನಮ್ಮ ದೇಹವನ್ನು ಪ್ರವೇಶಿಸಿದಾಗ ನಮ್ಮ ದೇಹದಲ್ಲಿ ಇರುವ ರೋಗ ನಿರೋಧಕ ವ್ಯವಸ್ಥೆ ಮತ್ತು ಸೂಕ್ಷ್ಮಜೀವಿಗಳ ನಡುವೆ ಜೀವರಾಸಾಯನಿಕ ಕ್ರಿಯೆ-ಪ್ರತಿಕ್ರಿಯೆಗಳ ಸರಣಿ ನಡೆಯಲು ಆರಂಭವಾಗುತ್ತದೆ. ಇದರಿಂದ ಪೈರೊಜೆನ್‌ ಎನ್ನುವ ಒಂದು ಬಗೆಯ ರಾಸಾಯನಿಕ ಬಿಡುಗಡೆಯಾಗುತ್ತದೆ. ಈ ರಾಸಾಯನಿಕವು ನಮ್ಮ ದೇಹದ ಉಷ್ಣತೆಯನ್ನು ನಿಭಾಯಿಸುವ ವ್ಯವಸ್ಥೆಯನ್ನು ನಿಯಂತ್ರಿಸುವ ಮಿದುಳಿನ ಭಾಗವಾದ ಹೈಪೊಥಾಲಮಸ್‌ ಮೇಲೆ ಪ್ರಭಾವ ಬೀರುತ್ತದೆ. ಇದರಿಂದಾಗಿ ದೇಹದ ಉಷ್ಣತೆ ನಿಯಂತ್ರಣ ವ್ಯವಸ್ಥೆ ಪರಿವರ್ತನೆಗೊಂದು ಜ್ವರ ಉಂಟಾಗುತ್ತದೆ. ಹೀಗಾಗಿ ಜ್ವರ ಎಂದರೆ ಸೂಕ್ಷ್ಮಜೀವಿಗಳ ವಿರುದ್ಧ ದೇಹವು ಹೋರಾಡಲು ಪ್ರಯತ್ನಿಸುತ್ತಿದೆ ಎಂಬುದರ ಸೂಚನೆ ಎಂದು ಅರ್ಥ ಮಾಡಿಕೊಳ್ಳಬಹುದು.

ಜ್ವರ ಉಂಟಾದಾಗ ಅಸ್ವಸ್ಥತೆ, ಹಸಿವಾಗದೆ ಇರುವುದು, ನಡುಕ, ದಣಿವು ಮತ್ತು ಸಂಬಂಧಪಟ್ಟ ಇನ್ನೂ ಅನೇಕ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಜ್ವರವನ್ನು ಬೇಗನೆ ಪತ್ತೆ ಮಾಡುವುದರಿಂದ ರಕ್ಷಣಗಳ ಮೇಲೆ ನಿಗಾ ಇರಿಸುವುದು ಮತ್ತು ಚಿಕಿತ್ಸೆಯನ್ನು ಆದಷ್ಟು ಬೇಗನೆ ಪಡೆಯುವುದಕ್ಕೆ ಸಹಾಯವಾಗುತ್ತದೆ.

ಜ್ವರಕ್ಕೆ ಸಾಮಾನ್ಯ ಕಾರಣಗಳು
– ಉಷ್ಣ ವಲಯದ ಕಾಯಿಲೆಗಳು
– ಡೆಂಗ್ಯೂ
– ಮಲೇರಿಯಾ
– ಬ್ಯಾಕ್ಟೀರಿಯಾ, ಫ‌ಂಗಸ್‌ ಮತ್ತು ವೈರಸ್‌ಗಳಿಂದ ಸೋಂಕುಗಳು
-ದೇಹದ ಯಾವುದೇ ಅಂಗದಲ್ಲಿ ಸೋಂಕು ಉಂಟಾಗಬಹುದು
– ಶ್ವಾಸಕೋಶದ ಸೋಂಕು – ನ್ಯುಮೋನಿಯಾ
– ಮೂತ್ರಾಂಗ ವ್ಯೂಹದ ಸೋಂಕುಗಳು
– ಟಾನ್ಸಿಲ್‌/ ಸೈನಸೈಟಿಸ್‌
– ಗ್ಯಾಸ್ಟ್ರೊ ಎಂಟರೈಟಿಸ್‌
– ಮಿದುಳಿನ ಸೋಂಕು – ಮೆನಿಂಜಿಟಿಸ್‌
– ಚರ್ಮ ಮತ್ತು ಮೃದು ಅಂಗಾಂಶ ಸೋಂಕುಗಳು ಇತ್ಯಾದಿ
– ದೀರ್ಘ‌ಕಾಲಿಕ ಕಾಯಿಲೆಗಳಿಂದ ಕೂಡ ಜ್ವರ ಉಂಟಾಗಬಹುದು
– ಉದಾ.: ರುಮಟಾಯ್ಡ ಆಥೆùìಟಿಸ್‌
– ಸಿಸ್ಟೆಮಿಕ್‌ ಲ್ಯೂಪಸ್‌ ಎರಿಟಮಾಟೋಸಸ್‌ (ಎಸ್‌ಎಲ್‌ಇ)
– ಕೆಲವು ಗಡ್ಡೆಗಳು/ ಕ್ಯಾನ್ಸರ್‌ಗಳು ಕೂಡ ಜ್ವರವನ್ನು ಉಂಟುಮಾಡಬಹುದು
– ಬಿಸಿಲಾಘಾತ
– ಕೆಲವು ಔಷಧಗಳು
– ಕೆಲವು ಲಸಿಕೆಗಳನ್ನು ಪಡೆದ ಬಳಿಕವೂ ಜ್ವರ ಉಂಟಾಗಬಹುದು
– ದೇಹದ ಯಾವುದೇ ಭಾಗದಲ್ಲಿ ರಕ್ತ ಹೆಪ್ಪುಗಟ್ಟುವುದು
ಪ್ರಸ್ತುತ ಪರಿಸ್ಥಿತಿಯಲ್ಲಿ ಜ್ವರ ಬಂದರೆ ಅದನ್ನು ನಿರ್ಲಕ್ಷಿಸಬಾರದು. ನಿಮಗೆ ಜ್ವರ ಉಂಟಾದರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಅಥವಾ ಹತ್ತಿರದ ವೈದ್ಯರಲ್ಲಿಗೆ ತೆರಳಿ ಆರೈಕೆ ಪಡೆಯಿರಿ.

Advertisement

ಕೆಳಗೆ ಹೆಸರಿಸಲಾದ ಗುಂಪುಗಳಿಗೆ ಸೇರುವವರು ಹೆಚ್ಚು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಜ್ವರದ ಯಾವುದೇ ಲಕ್ಷಣಗಳನ್ನು ನಿರ್ಲಕ್ಷಿಸಬಾರದು.
– ಶಿಶುಗಳು
– ಹಿರಿಯ ನಾಗರಿಕರು
– ಮಧುಮೇಹ, ಹೃದ್ರೋಗ ಹೊಂದಿರುವವರು
– ಶ್ವಾಸಾಂಗ ಕಾಯಿಲೆಗಳಿರುವವರು
– ದೀರ್ಘ‌ಕಾಲಿಕ ವೈದ್ಯಕೀಯ ಅನಾರೋಗ್ಯ ಹೊಂದಿರುವವರು
– ಕ್ಯಾನ್ಸರ್‌ ಹೊಂದಿರುವವರು
– ಕಿಮೊಥೆರಪಿಗೆ ಒಳಗಾಗುತ್ತಿರುವವರು
– ಡಯಾಲಿಸಿಸ್‌ಗೆ ಒಳಗಾಗುತ್ತಿರುವವರು
– ಸಿಕೆಡಿ, ಸಿಎಲ್‌ಡಿಯಂತಹ ಯಾವುದೇ ದೀರ್ಘ‌ಕಾಲಿಕ ಅನಾರೋಗ್ಯದಿಂದ ಬಳಲುತ್ತಿರುವವರು
– ಅಂಗಾಂಗ ಕಸಿ ಚಿಕಿತ್ಸೆಗೆ ಒಳಗಾಗಿರುವವರು
– ಸ್ಟೀರಾಯ್ಡಗಳ ಸಹಿತ ಯಾವುದೇ ಇಮ್ಯುನೊಸಪ್ರಸೆಂಟ್‌ ಔಷಧ ಚಿಕಿತ್ಸೆಯಲ್ಲಿರುವವರು
ಜ್ವರಕ್ಕಾಗಿ ನೀವು ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆದುಕೊಂಡ ಬಳಿಕ ಅವರ ಸಲಹೆ, ಶಿಫಾರಸುಗಳನ್ನು ಪಾಲಿಸಿರಿ ಮತ್ತು ಅವರು ಶಿಫಾರಸು ಮಾಡಿರುವಂತೆ ಔಷಧಗಳನ್ನು ತೆಗೆದುಕೊಳ್ಳಿರಿ.
– ಲಕ್ಷಣಗಳು ಕಡಿಮೆಯಾಗದೆ ಹಾಗೆಯೇ ಉಳಿದುಕೊಂಡಿದ್ದರೆ, ಪುನರಾವರ್ತನೆಯಾಗುತ್ತಿದ್ದರೆ, ಉಲ್ಬಣಿಸಿದ್ದರೆ ಅಥವಾ ಯಾವುದಾದರೂ ಹೊಸ ಲಕ್ಷಣ ನಿಮ್ಮ ಗಮನಕ್ಕೆ ಬಂದಿದ್ದರೆ ಮರಳಿ ವೈದ್ಯರ ಜತೆಗೆ ಸಮಾಲೋಚನೆ ನಡೆಸಿ. ಆದರೆ ಧೂಮಪಾನ ಅಥವಾ ಮದ್ಯಪಾನ ಮಾಡಬೇಡಿ.

ಚರ್ಮದಲ್ಲಿ ದದ್ದುಗಳು, ಉಸಿರಾಡಲು ಕಷ್ಟವಾಗುವುದು, ವಾಂತಿ, ಹಸಿವು ನಷ್ಟವಾಗುವುದು, ಹೃದಯ ಬಡಿತ ವೇಗವಾಗಿರುವುದು ಇತ್ಯಾದಿ ಹೊಸ ಲಕ್ಷಣಗಳು ಕಂಡುಬಂದರೆ ರೋಗಿಯನ್ನು ತತ್‌ಕ್ಷಣ ಆಸ್ಪತ್ರೆಯ ಎಮರ್ಜೆನ್ಸಿ ವಿಭಾಗಕ್ಕೆ ಕರೆದೊಯ್ಯಿರಿ.

ಜ್ವರಕ್ಕಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವಾಗ ವೈದ್ಯರ ಸಲಹೆಯ ಪ್ರಕಾರ ಸಾಕಷ್ಟು ದ್ರವಾಹಾಸ ಸೇವಿಸಬೇಕು. ಹಗುರವಾದ ಹತ್ತಿಯ ಬಟ್ಟೆಗಳನ್ನು ದರಿಸಿ. ಚೆನ್ನಾಗಿ ಗಾಳಿ ಬೆಳಕು ಆಡುವ ಕೊಠಡಿಯಲ್ಲಿರಿ ಮತ್ತು ವೈದ್ಯರ ಸಲಹೆಯಂತೆ ಆರೋಗ್ಯಯುತ ಪೌಷ್ಟಿಕವಾದ ಆಹಾರ ಸೇವಿಸಿ.

ಜ್ವರದಿಂದ ಬಳಲುತ್ತಿರುವವರಿಗೆ ಮನೆಯಲ್ಲಿ ಆರೈಕೆ ಒದಗಿಸುವವರು ಕೂಡ ಸಮರ್ಪಕವಾದ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಪ್ರಸ್ತುತ ಪರಿಸ್ಥಿತಿಯಲ್ಲಿ ಮಾಸ್ಕ್ ಧರಿಸುವುದು, ಕೈಗಳನ್ನು ಆಗಾಗ ತೊಳೆದುಕೊಳ್ಳುವುದು, ಕೈಗಳನ್ನು ಸ್ಯಾನಿಟೈಸ್‌ ಮಾಡಿಕೊಳ್ಳುವುದು ಸೋಂಕಿನಿಂದ ರಕ್ಷಿಸಿಕೊಳ್ಳುವುದಕ್ಕೆ ಅತ್ಯಗತ್ಯ. ಸರಿಯಾದ ಕ್ರಮದಲ್ಲಿ ಮಾಸ್ಕ್ ಧರಿಸುವುದು ಮತ್ತು ಕೈಗಳನ್ನು ತೊಳೆದುಕೊಳ್ಳುವುದನ್ನು ಮಕ್ಕಳಿಗೂ ಕಲಿಸಿ.

ಸೊಳ್ಳೆ ಕಡಿತದಿಂದ ಪಾರಾಗಲು ಮತ್ತು ಅವುಗಳಿಂದ ಹರಡುವ ಜ್ವರಗಳು ಬಾರದಂತೆ ತಡೆಯಲು ಸೊಳ್ಳೆಪರದೆ ಉಪಯೋಗಿಸಿ ಮತ್ತು ಪೂರ್ಣ ತೋಳಿನ ಅಂಗಿಯಂತಹ ಮೈಮುಚ್ಚುವ ಉಡುಗೆ ಧರಿಸಿ.

ನೆನಪಿಡಿ: ಕಾಯಿಲೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಅತ್ಯುತ್ತಮ ಮಾರ್ಗ; ಕಾಲ ಮಿಂಚಿ ಹೋಗುವ ಮುನ್ನ ಎಚ್ಚೆತ್ತುಕೊಳ್ಳುವುದು ಅತೀ ಶ್ರೇಷ್ಠ.

-ಡಾ| ಹರೂನ್‌ ಎಚ್‌.
ಕನ್ಸಲ್ಟಂಟ್‌ ಇಂಟರ್ನಲ್‌ ಮೆಡಿಸಿನ್‌,
ಕೆಎಂಸಿ ಆಸ್ಪತ್ರೆ, ಮಂಗಳೂರು

 

Advertisement

Udayavani is now on Telegram. Click here to join our channel and stay updated with the latest news.

Next