Advertisement

ತ್ಯಾವರೆಕೊಪ್ಪದಲ್ಲಿ ತಲೆ ಎತ್ಲಲಿದೆ ಚಿತ್ತಾಕರ್ಷಕ ಚಿಟ್ಟೆ ಪಾರ್ಕ್‌

10:56 AM Jun 14, 2022 | Team Udayavani |

ಶಿವಮೊಗ್ಗ: ಬಣ್ಣ ಬಣ್ಣದ ಚಿಟ್ಟೆಗಳೆಂದರೆ ಯಾರಿಗೆ ತಾನೇ ಇಷ್ಟವಾಗಲ್ಲ. ಅಂತಹ ವಿವಿಧ ಬಣ್ಣದ ಚಿತ್ತಾರವಿರುವ ಚಿಟ್ಟೆಗಳನ್ನು ನೋಡುವುದೇ ಒಂದು ಖುಷಿ. ಕಣ್ಮನ ಸೆಳೆಯುವ ಇಂತಹ ಬಗೆ ಬಗೆಯ ಚಿಟ್ಟೆಗಳ ಪಾರ್ಕ್‌ ರಾಜ್ಯದಲ್ಲಿ ಬೆರಳೆಣಿಕೆಯಲ್ಲಿವೆ. ಆ ಸಾಲಿಗೆ ಇನ್ನು ಕೆಲವೇ ತಿಂಗಳಲ್ಲಿ ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ ಚಿಟ್ಟೆ ಪಾರ್ಕ್‌ ಕೂಡ ಸೇರಲಿದೆ.

Advertisement

ತ್ಯಾವರೆಕೊಪ್ಪ ಹುಲಿ-ಸಿಂಹಧಾಮ ರಾಜ್ಯದ ಪ್ರಮುಖ ಪ್ರವಾಸಿ ಕೇಂದ್ರ. ಇಲ್ಲಿರುವ ಮೃಗಾಲಯದಲ್ಲಿ ನೂರಾರು ಪ್ರಾಣಿ-ಪಕ್ಷಿಗಳಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಉತ್ತಮ ಕ್ಯಾಂಟೀನ್‌, ಮಕ್ಕಳ ಪಾರ್ಕ್‌ ಎಲ್ಲವೂ ಇದೆ. ಇತ್ತೀಚೆಗೆ ಪ್ರಾಣಿಗಳ ವೀಕ್ಷಣೆಗೆ ಗಾಜಿನ ಗ್ಯಾಲರಿ ಮಾಡಲಾಗಿದೆ. ಇದು ಪ್ರವಾಸಿಗರಿಗೆ ಹೊಸ ಅನುಭವ ನೀಡುತ್ತಿದೆ. ವೀಕೆಂಡ್‌ಗಳಲ್ಲಿ ಸಾವಿರಾರು ಜನ ಭೇಟಿ ಕೊಡುತ್ತಾರೆ. ಇಂತಹ ತಾಣವನ್ನು ಇನ್ನಷ್ಟು ಆಕರ್ಷಣೀಯವಾಗಿಸಲು ಚಿಟ್ಟೆ ಪಾರ್ಕ್‌ ನಿರ್ಮಾಣಕ್ಕೆ ಮುಂದಾಗಲಾಗಿದೆ.

ಪ್ರಕೃತಿಯ ಸಮತೋಲನದಲ್ಲಿ ಚಿಟ್ಟೆಗಳ ಪಾತ್ರ ಪ್ರಮುಖವಾಗಿದೆ. ಇವು ಅತ್ಯಂತ ಸೂಕ್ಷ್ಮ ಜೀವಿಗಳು. ಇದೇ ಕಾರಣಕ್ಕೆ ಎಲ್ಲೆಂದರಲ್ಲಿ ಚಿಟ್ಟೆ ಪಾರ್ಕ್‌ ಸ್ಥಾಪಿಸಲು ಸಾಧ್ಯವಾಗುವುದಿಲ್ಲ. ಸೂರ್ಯನ ಬೆಳಕು ಮತ್ತು ಗಾಳಿ ವ್ಯವಸ್ಥೆ ಉತ್ತಮವಾಗಿರಬೇಕು. ಚಿಟ್ಟೆಗಳನ್ನು ಆಕರ್ಷಿಸುವ ಸಸ್ಯಗಳಿರಬೇಕು. ಇದೆಲ್ಲ ವನ್ನೂ ಸೂಕ್ಷ್ಮವಾಗಿ ಅವಲೋಕಿಸಿ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲಿ ಚಿಟ್ಟೆ ಪಾರ್ಕ್‌ ಸಿದ್ಧಪಡಿಸಲಾಗುತ್ತಿದೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಕಾರವಾರದ ಗೋಟೆಗಾಳಿಯಲ್ಲಿ ಚಿಟ್ಟೆ ಪಾರ್ಕ್‌ಗಳನ್ನು ಕಾಣಬಹುದು. ಗೋಟೆಗಾಳಿಯಲ್ಲಿ ನೈಸರ್ಗಿಕ ಪ್ರದೇಶದಲ್ಲಿ ಚಿಟ್ಟೆಯನ್ನು ಆಕರ್ಷಿಸುವ ಸಲುವಾಗಿ ಗಿಡಗಳನ್ನು ಬೆಳೆಸಲಾಗಿದೆ. ಬನ್ನೇರುಘಟ್ಟದಲ್ಲಿ ಒಳಾಂಗಣ ಪಾರ್ಕ್‌ ನಲ್ಲಿ ನಿರ್ಮಿಸಲಾಗಿದೆ. ಶಿವಮೊಗ್ಗದಲ್ಲೂ ಸಹ ಓಪನ್‌ ಪಾರ್ಕ್‌ನಲ್ಲಿ ಚಿಟ್ಟೆಗಳನ್ನು ಕಾಣಬಹುದು. ಇದಕ್ಕಾಗಿ ಕ್ಯಾಂಟೀನ್‌ ಪಕ್ಕದ ಜಾಗವನ್ನು ಆಯ್ಕೆ ಮಾಡಿಕೊಳ್ಳ ಲಾಗಿದೆ. ಈಗಾಗಲೇ ಗಿಡಗಳನ್ನು ನೆಟ್ಟು
ಪೋಷಿಸಲಾಗುತ್ತಿದ್ದು ಅವು ಚಿಗುರಿ ಹೂವು ಬಿಡಲು ಎರಡ್ಮೂರು ತಿಂಗಳು ಬೇಕು.

ಸರ್ವೇ ನಂತರ ಪಾರ್ಕ್‌: ಚಿಟ್ಟೆ ಪಾರ್ಕ್‌ ಆರಂಭಕ್ಕೂ ಮುನ್ನ ಮೃಗಾಲಯದಲ್ಲಿ ಯಾವ ಜಾತಿ ಚಿಟ್ಟೆಗಳಿವೆ ಎಂದು ಸರ್ವೇ ಮಾಡಲಾಗಿದೆ. ಸುಮಾರು 25ಕ್ಕೂ ಹೆಚ್ಚು ಜಾತಿಯ ಚಿಟ್ಟೆಗಳು ಕಂಡುಬಂದಿವೆ. ಅವುಗಳನ್ನೆಲ್ಲ ಒಂದೆಡೆ ಸೆಳೆದು ಪ್ರವಾಸಿಗರಿಗೆ ಮಾಹಿತಿ, ಮನರಂಜನೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಎಲ್ಲ ಅಂದುಕೊಂಡಂತೆ ಆದರೆ ಇನ್ನು ಕೆಲವೇ ತಿಂಗಳಲ್ಲಿ ತ್ಯಾವರೆಕೊಪ್ಪ ಹುಲಿ-ಸಿಂಹಧಾಮ ಬಣ್ಣ ಬಣ್ಣದ ಚಿಟ್ಟೆಗಳಿಂದಲೂ ಮತ್ತಷ್ಟು ಜನರನ್ನು ಆಕರ್ಷಿಸಲಿದೆ.

Advertisement

ವಿವಿಧ ಜಾತಿ ಗಿಡ
ಉದ್ದೇಶಿತ ಚಿಟ್ಟೆ ಉದ್ಯಾನದಲ್ಲಿ ಈಗಾಗಲೇ ಕೂಫಿಯಾ, ಪೆಂಟೋಸ್‌, ಹೈಬಿಸ್ಕಸ್‌, ಇಕ್ಸೋರ್‌, ನಂದಿ ಬಟ್ಲು ಸೇರಿ ಅನೇಕ ಹೂವುಗಳನ್ನು ಬಿಡುವ ಗಿಡಗಳನ್ನು ನೆಡಲಾಗಿದೆ. ಈ ಸಸ್ಯಗಳು, ಇವುಗಳಲ್ಲಿ ಬಿಡುವ ಹೂವುಗಳು ಮತ್ತು ಅವುಗಳ ಮಕರಂದ ಚಿಟ್ಟೆಗಳಿಗೆ ಪಂಚ ಪ್ರಾಣ. ಇದೇ ಕಾರಣಕ್ಕೆ ಇಂತಹ ಸಸ್ಯಗಳನ್ನು ಬೆಳೆಸಲಾಗುತ್ತಿದೆ. ಚಿಟ್ಟೆಗಳಷ್ಟೇ ಅಲ್ಲದೆ ದುಂಬಿಗಳು ಸಹ ಮಕರಂದ ಹೀರಲು ಬೇಕಾದ ಗಿಡಗಳನ್ನು ಬೆಳೆಸಲಾಗುತ್ತಿದೆ.

ಮಾಹಿತಿ ಬೋರ್ಡ್‌
ಬಗೆಬಗೆಯ ಚಿಟ್ಟೆಗಳನ್ನು ನೋಡುವುದಷ್ಟೇ ಅಲ್ಲದೇ ಅದರ ಮಾಹಿತಿಯನ್ನು ಕೊಡುವ ಪ್ರಯತ್ನ ನಡೆಸಲಾಗುತ್ತಿದೆ. ಚಿಟ್ಟೆಗಳ ಜಾತಿ, ಹುಟ್ಟು, ಜೀವನಕ್ರಮ, ಆಹಾರ, ಪ್ರಕೃತಿಗೆ ಅವುಗಳ ಕೊಡುಗೆ ಸೇರಿದ ಅನೇಕ ಮಾಹಿತಿಗಳು ಅದರಲ್ಲಿ ಇರಲಿದೆ.

ಕ್ಯಾಂಟೀನ್‌ ಪಕ್ಕದ ಜಾಗವನ್ನು ಚಿಟ್ಟೆಗಳ ಪಾರ್ಕ್‌ ಆಗಿ ಬದಲಾಯಿಸುತ್ತಿರುವುದು ಉತ್ತಮ. ಮೊದಲು ನಿರುಪಯುಕ್ತ ವಸ್ತುಗಳನ್ನು ಹಾಕಿ ಅಂದಗೆಟ್ಟಿತ್ತು. ಇನ್ಮುಂದೆ ಈ ತಾಣ ಕಲರ್‌ಫುಲ್‌ ಆಗಲಿದೆ.
● ಪ್ರವೀಣ್‌, ಪ್ರವಾಸಿಗ

ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next