ನವದೆಹಲಿ: ಕೆಲವೊಮ್ಮೆ ನ್ಯಾಯಾಲಗಳಿಂದ ಆಸಕ್ತಿಕರ ಪ್ರಕರಣಗಳು ವರದಿಯಾಗುತ್ತಿರುತ್ತದೆ. ತಮಾಷೆಯ ಕಳ್ಳತನದ ಪ್ರಕರಣಗಳು ಅಥವಾ ವಿಲಕ್ಷಣ ಕೌಟುಂಬಿಕ ಕಲಹಗಳು ಸೇರಿವೆ. ಆದರೆ ಹಲವಾರು ಪ್ರಕರಣಗಳು ನ್ಯಾಯಾಲಯೇತರವಾಗಿ ಇತ್ಯರ್ಥವಾಗುವುದನ್ನು ಕಾಣುತ್ತೇವೆ. ಅಂತಹ ಒಂದು ವಿಶಿಷ್ಟ ಪ್ರಕರಣ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ:ತೇರದಾಳ ಮತಕ್ಷೇತ್ರಕ್ಕೆ ಸಿದ್ದು ಸವದಿ ಅಭ್ಯರ್ಥಿ – ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ
ಇದು ಇಬ್ಬರು ಮಹಿಳೆಯರ ಮುದ್ದಿನ ಗಂಡನ ಪ್ರಕರಣ!
2018ರಲ್ಲಿ ಸೀಮಾ ಎಂಬ 28ರ ಹರೆಯದ ಯುವತಿ ಹರ್ಯಾಣದ ಗುರುಗ್ರಾಮ್ ನಲ್ಲಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾತನನ್ನು ವಿವಾಹವಾಗಿದ್ದಳು. ಒಟ್ಟಿಗೆ ವಾಸವಾಗಿದ್ದ ದಂಪತಿಗೆ ಗಂಡು ಮಗು ಜನಿಸುತ್ತದೆ. 2020ರಲ್ಲಿ ಕೋವಿಡ್ ಪರಿಣಾಮ ಕೇಂದ್ರ ಸರ್ಕಾರ ಲಾಕ್ ಡೌನ್ ಘೋಷಿಸಿತ್ತು. ಆ ಸಂದರ್ಭದಲ್ಲಿ ಸೀಮಾಳನ್ನು ಆಕೆಯ ತವರಾದ ಗ್ವಾಲಿಯರ್ ಗೆ ಬಿಟ್ಟುಬಂದಿದ್ದ. ಆದರೆ ಎರಡು ವರ್ಷಗಳ ಕಾಲ ಪತಿ ಆಕೆಯನ್ನು ವಾಪಸ್ ಕರೆದುಕೊಂಡು ಬಂದಿಲ್ಲ.
ಕೋವಿಡ್ ಸಮಯದಲ್ಲಿ ಪತಿ ತನ್ನ ಕಚೇರಿಯಲ್ಲಿನ ಸಹೋದ್ಯೋಗಿಯೊಬ್ಬಳ ಜತೆ ಅಫೇರ್ ಇಟ್ಟುಕೊಂಡಿದ್ದ. ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದರು. ಕೊನೆಗೆ ಇಬ್ಬರೂ ವಿವಾಹವಾಗಿದ್ದರು. ಹೀಗೆ ಎರಡನೇ ಪತ್ನಿಗೂ ಹೆಣ್ಣು ಮಗು ಹುಟ್ಟಿತ್ತು. ಅಂತೂ ಪತಿ ಎರಡನೇ ವಿವಾಹವಾದ ವಿಷಯ ಸೀಮಾಗೂ ತಲುಪಿತ್ತು. ಆಕೆ ತಕ್ಷಣವೇ ಗುರುಗ್ರಾಮ್ ಗೆ ಬಂದು, ಪತಿ ಜತೆ ಜಗಳವಾಡಿ, ಗ್ವಾಲಿಯರ್ ಗೆ ವಾಪಸ್ ಆಗಿದ್ದಳು. ಎರಡನೇ ವಿವಾಹವಾದ ಪತಿಯ ವಿರುದ್ಧ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಲು ಸೀಮಾ ನಿರ್ಧರಿಸಿದ್ದಳು.
ತನ್ನ ಮೇಲೆ ಮೊದಲ ಪತ್ನಿ ಕೇಸ್ ದಾಖಲಿಸುತ್ತಾಳೆಂಬ ವಿಷಯ ತಿಳಿದ ಮೇಲೆ ಆಕೆಯ ಮನವೊಲಿಸಲು ಸಾಕಷ್ಟು ಕಸರತ್ತು ನಡೆಸಿದ್ದ. ಅಷ್ಟೇ ಅಲ್ಲ ಮಗನ ಭವಿಷ್ಯಕ್ಕಾಗಿ ಜೀವನಾಂಶ ನೀಡಲು ತುಂಬಾ ಕಷ್ಟವಾಗುತ್ತದೆ ಎಂದು ಮನವರಿಕೆ ಮಾಡಲು ಯತ್ನಿಸಿದ್ದ. ಏತನ್ಮಧ್ಯೆ ಪತಿಯ ವಕೀಲ ಹರೀಶ್ ದೀವಾನ್ ಅವರು ಸೀಮಾಗೆ ಇಡೀ ಪರಿಸ್ಥಿತಿ ಕುರಿತು ವಿವರಣೆ ನೀಡಿದ್ದರು. ಬಳಿಕ ಸೀಮಾ ಮತ್ತು ಪತಿಯನ್ನು ಕೌಟುಂಬಿಕ ನ್ಯಾಯಾಲಯಕ್ಕೆ ಕರೆಯಿಸಿ ರಾಜೀ ಸಂಧಾನ ಮಾಡಿಸಿದ್ದರು.
ಫ್ಯಾಮಿಲಿ ಕೋರ್ಟ್ ಹೇಳಿದ್ದೇನು?
ರಾಜೀ ಸಂಧಾನದಲ್ಲಿ, ಪತಿ ವಾರದಲ್ಲಿ ಮೂರು ದಿನ ಸೀಮಾ ಮತ್ತು ಮಗನ ಜತೆ ಕಾಲ ಕಳೆಯಬೇಕು. ಇನ್ನುಳಿದ ಮೂರು ದಿನ ಎರಡನೇ ಪತ್ನಿ ಮತ್ತು ಮಗಳ ಜತೆ ಕಾಲಕಳೆಯಬೇಕು. ಭಾನುವಾರ ಪತಿ ವೈಯಕ್ತಿಕಾಗಿ ಇರಬಹುದಾಗಿದೆ ಎಂದು ತಿಳಿಸಿದೆ. ಇಬ್ಬರು ಪತ್ನಿಯರು ಗುರುಗ್ರಾಮ್ ನಲ್ಲಿ ಪ್ರತ್ಯೇಕವಾಗಿ ಫ್ಲ್ಯಾಟ್ ನಲ್ಲಿ ವಾಸವಾಗಿರುವುದಾಗಿ ವರದಿ ತಿಳಿಸಿದೆ.