Advertisement

ರಾಯಲ್ ಎನ್ ಫೀಲ್ಡ್ ಸಾಗರೋಲ್ಲಂಘನ ; ವಿದೇಶದಲ್ಲಿ ಮೊದಲ ತಯಾರಿ ಘಟಕ ಸ್ಥಾಪನೆ

05:35 PM Sep 09, 2020 | Hari Prasad |

ಮುಂಬಯಿ: ದೇಶದ ಪ್ರಮುಖ ಬೈಕ್ ಉತ್ಪಾದಕ ಕಂಪೆನಿ ರಾಯಲ್ ಎನ್ ಫೀಲ್ಡ್ ಇದೀಗ ಸಾಗರೋಲ್ಲಂಘನ ಮಾಡಿದೆ.

Advertisement

ದೇಶದಲ್ಲಿ ಹೊಸ ತಲೆಮಾರಿನ ಬೈಕ್ ಪ್ರಿಯರ ಟೇಸ್ಟ್ ಗೆ ಅನುಗುಣವಾಗಿ ಭಾರತದಲ್ಲಿ ಹೊಸ ಮಾದರಿಯ ಎಲೆಕ್ಟ್ರಿಕ್ ಎನ್ ಫೀಲ್ಡ್ ಬೈಕ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಯಶಸ್ಸನ್ನು ಕಂಡಿರುವ ರಾಯಲ್ ಎನ್ ಫೀಲ್ಡ್ ಕಂಪೆನಿ ಇದೀಗ ಭಾರತದಿಂದ ಹೊರ ಭಾಗದಲ್ಲಿ ತನ್ನ ಉತ್ಪಾದನಾ ಘಟಕವನ್ನು ಪ್ರಾರಂಭಿಸುವ ಮೂಲಕ ತನ್ನ ಜೈತಯಾತ್ರೆಯನ್ನು ದೇಶದ ಹೊರಕ್ಕೂ ವಿಸ್ತರಿಸಿಕೊಂಡಂತಾಗಿದೆ.

ತನ್ನ ಬೈಕ್ ಗಳ ಉತ್ಪಾದನಾ ಘಟಕವನ್ನು ಲ್ಯಾಟಿನ್ ಅಮೆರಿಕಾದ ದೇಶವಾಗಿರುವ ಅರ್ಜೆಂಟಿನಾದಲ್ಲಿ ಪ್ರಾರಂಭಿಸುತ್ತಿರುವುದಾಗಿ ಕಂಪೆನಿ ಇಂದು ಘೋಷಿಸಿಕೊಂಡಿದೆ.

ಅಲ್ಲಿನ ಸ್ಥಳೀಯ ಸಂಸ್ಥೆ ಗ್ರೀಪೋ ಸಿಂಪೋ ಜೊತೆಗೂಡಿ ಅರ್ಜೆಂಟಿನಾದಲ್ಲಿ ಈ ಸಾಹಸಕ್ಕೆ ರಾಯಲ್ ಎನ್ ಫೀಲ್ಡ್ ಕಂಪೆನಿ ಕೈ ಹಾಕಿರುವ ಮಾಹಿತಿ ಇದೀಗ ಲಭ್ಯವಾಗಿದೆ.

ರಾಯಲ್ ಎನ್ ಫೀಲ್ಡ್ 2018ರಿಂದಲೇ ಗ್ರೂಪೋ ಸಿಂಪೋ ಜೊತೆ ಭಾಗೀದಾರಿಕೆಯನ್ನು ಹೊಂದಿದ್ದು ಸಿಂಪೋ ಅರ್ಜೆಂಟಿನಾ ದೇಶದಲ್ಲಿ ರಾಯಲ್ ಎನ್ ಫೀಲ್ಡ್ ಬೈಕ್ ಗಳ ಸ್ಥಳೀಯ ಪೂರೈಕೆದಾರರಾಗಿದ್ದಾರೆ.

Advertisement

ದೇಶದ ಅತೀ ಹಳೆಯ ಬೈಕ್ ತಯಾರಿ ಕಂಪೆನಿಗಳಲ್ಲಿ ಒಂದಾಗಿರುವ ಎನ್ ಫೀಲ್ಡ್ ನ ಆಧುನಿಕ ಇತಿಹಾಸದಲ್ಲೇ ಇದೊಂದು ಹೊಸ ಮೈಲುಗಲ್ಲೆಂದೇ ಪರಿಗಣಿಸಲಾಗುತ್ತಿದೆ. ಮತ್ತು ಚೆನ್ನೈನಲ್ಲಿರುವ ಸಂಸ್ಥೆಯ ಬೈಕ್ ತಯಾರಿ ಘಟಕವನ್ನು ಹೊರತುಪಡಿಸಿ ಬೇರೊಂದು ಕಡೆಯಲ್ಲಿ ಎನ್ ಫೀಲ್ಡ್ ಬೈಕ್ ತಯಾರಿ ಘಟಕ ಪ್ರಾರಂಭವಾಗುತ್ತಿರುವುದೂ ಸಹ ಇದೇ ಮೊದಲಾಗಿದೆ.

ಅರ್ಜೆಂಟಿನಾದ ಅಧ್ಯಕ್ಷರಾಗಿರುವ ಅಲ್ಬೆರ್ಟೋ ಫೆರ್ನಾಂಡಿಸ್ ಭಾಗಿಯಾಗಿದ್ದ ಕಾರ್ಯಕ್ರಮದಲ್ಲೇ ರಾಯಲ್ ಎನ್ ಫೀಲ್ಡ್ ಸಂಸ್ಥೆ ಈ ಮಹತ್ವದ ಘೋಷಣೆಯನ್ನು ಮಾಡಿದೆ.

ಅರ್ಜೆಂಟಿನಾದಲ್ಲಿ ರಾಯಲ್ ಎನ್ ಫೀಲ್ಡ್ 2018ರಲ್ಲೇ ತನ್ನ ದ್ವಿಚಕ್ರ ವಾಹನಗಳನ್ನು ಮಾರಾಟವನ್ನು ಪ್ರಾರಂಭಿಸಿತ್ತು. ಅಲ್ಲಿನ ವಿಸೆಂಟ್ ಲೊಫೆಝ್, ಬ್ಯೂನಸ್ ಐರಿಸ್ ಗಳಲ್ಲಿ ಎರಡು ಶೋರೂಂಗಳನ್ನು ಸಂಸ್ಥೆ ತೆರೆದಿತ್ತು. ಬಳಿಕ ಈ ಶೋರೂಂಗಳ ಸಂಖ್ಯೆ ಐದಕ್ಕೇರಿತ್ತು. ಅರ್ಜೆಂಟಿನಾ ದೇಶವು ಲ್ಯಾಟಿನ್ ಅಮೆರಿಕಾದ ದೇಶಗಳಲ್ಲೇ ಬೈಕ್ ಕುರಿತಾಗಿ ಹೆಚ್ಚು ಕ್ರೇಝ್ ಹೊಂದಿರುವ ದೇಶಗಳಲ್ಲಿ ಒಂದಾಗಿದೆ.

ಸದ್ಯಕ್ಕೆ ರಾಯಲ್ ಎನ್ ಫೀಲ್ಡ್ ಲ್ಯಾಟಿನ್ ಅಮೆರಿಕಾದ ವಿವಿಧ ದೇಶಗಳಲ್ಲಿ 31 ಶೋ ರೂಂಗಳನ್ನು ಹಾಗೂ 41 ಇತರೇ ರೂಪದ ಮಾರಾಟ ಕೇಂದ್ರಗಳನ್ನು ಹೊಂದಿರುವ ಹೆಗ್ಗಳಿಕೆಯನ್ನು ಹೊಂದಿದೆ.

ಬ್ಯೂನಸ್ ಐರಿಸ್ ನಲ್ಲಿರುವ ಕಂಪಾನದಲ್ಲಿರುವ ಗ್ರೂಪೋ ಸಿಂಪೋಗೆ ಸೇರಿರುವ ಕೇಂದ್ರದಲ್ಲಿ ರಾಯಲ್ ಎನ್ ಫೀಲ್ಡ್ ಸದ್ಯ ತನ್ನ ಬೈಕ್ ತಯಾರಿ ಘಟಕವನ್ನು ಪ್ರಾರಂಬಿಸಲಿರುವ ಕುರಿತಾಗಿ ಮಾಹಿತಿ ಲಭ್ಯವಾಗಿದೆ.

ಈ ಉತ್ಪಾದನಾ ಘಟಕದಲ್ಲಿ ಹಿಮಾಲಯನ್, ಇಂಟರ್ ಸೆಪ್ಟರ್ 650 ಮತ್ತು ದಿ ಕಾಂಟಿನೆಂಟಲ್  ಜಿಟಿ 650 ಬೈಕುಗಳು ಉತ್ಪಾದನೆಗೊಳ್ಳಲಿದ್ದು ಈ ತಿಂಗಳಿನಿಂದಲೇ ಇಲ್ಲಿ ಈ ಮೂರು ಮಾದರಿಯ ಬೈಕ್ ಗಳ ಉತ್ಪಾದನಾ ಕಾರ್ಯ ಪ್ರಾರಂಭಗೊಳ್ಳಲಿದೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next