“ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ’ ವರ್ಷದುದ್ದಕ್ಕೂ ಯಾವುದೇ ಸಮಯದಲ್ಲೂ ಈ ಹಾಡು ಹೆಚ್ಚಿನ ಅರ್ಥ ಹೊದ್ದು ಎಲ್ಲರಲ್ಲೂ ಹೊಸ ಹುರುಪನ್ನು ಮೂಡಿಸುವುದೇ ಜನವರಿ 1 ಎಂಬ ಆಂಗ್ಲ ವರ್ಷದಂದು. ನಾವು ಅವರಲ್ಲ, ನಮ್ಮ ಹೊಸವರ್ಷ ಯುಗಾದಿ ಎಂದರೆ, ನಾನೇನೂ ತಗಾದೆ ತೆಗೆಯಲಾರೆ, ಅದು ಅವರವರಿಷ್ಟ, ಆದರೆ ಯುಗಾದಿಗೆ ಬೇಂದ್ರೆ ಅಜ್ಜರ “ಯುಗ ಯುಗಾದಿ ಕಳೆದರೂ’ ಸುಪ್ರಸಿದ್ಧ ಕವನವೇ ಶ್ರೇಷ್ಠ ಎಂದಷ್ಟೇ ಹೇಳುತ್ತಾ ಮುಂದೆ ಸಾಗುವೆ.
ಹೊಸತು ಎಂಬುದು ಜನವರಿ ಒಂದರಂದೇ ಹೊಸತನ ಮೂಡಿಸುತ್ತದೆಯೇ ಅಥವಾ ಬೇರೆ ಎಂದಾದರೂ ಸಹ ಮೂಡಿಸುತ್ತದೆಯೇ ಎಂಬುದಕ್ಕೆ ನಮ್ಮಲ್ಲೇ ಉತ್ತರ ಕಂಡುಕೊಳ್ಳಬಹುದು. ಕ್ಯಾಲೆಂಡರ್ ವರ್ಷವಾಗಿ ಜನವರಿ ಒಂದು ಎಂಬುದು ಹೊಸತನವನ್ನು ಮೂಡಿಸುವುದು ಸಹಜ. ಈ ಹೊಸತನವನ್ನು ಸ್ವಾಗತಿಸಲು ನೂರಾರು ಮಾರ್ಗವನ್ನೂ ಜನರ ಅನುಸರಿಸುತ್ತಾರೆ ಎಂಬುದೂ ಅಷ್ಟೇ ಸತ್ಯ. ಈ ನೂರಾರು ಮಾರ್ಗವು ಮನಸ್ಥಿತಿಯ ಮೇಲೆ ಅವಲಂಬಿತ. ಈ ಮನಸ್ಥಿತಿಗಳಾದರೂ ಯಾವುದು?
ಆಶಾವಾದ, ನಿರಾಶಾವಾದ ಮತ್ತು ವಾಸ್ತವಿಕ ಮನಗಳಿಗೆ ವಿವಿಧವಾಗಿ ಕಾಣುತ್ತದೆ ಈ ಹೊಸ ವರ್ಷ. ಆಶಾವಾದ ಮನಗಳು ನಾ ಕಂಡಂತೆ ಅಥವಾ ಅನುಭವಿಸಿದಂತೆ ಎರಡು ಬಗೆಯಾಗಿ ತೋರುತ್ತದೆ. ಕೆಲವರು ಆಶಾವಾದಿಗಳು ಅಂತಾದರೆ ಕೆಲವರು ವಿಪರೀತ ಆಶಾವಾದಿಗಳು. ಒಂದು ಲೆವೆಲ್ ಹೆಚ್ಚು ಎನ್ನಬಹುದಾದಷ್ಟು ಆಶಾವಾದ ಅಥವಾ ಒಂದರ್ಧ ಕೆ.ಜಿ. ಹೆಚ್ಚೇ ಆಶಾವಾದ ಎನ್ನುವಂತೆ. ಬರಲಿರುವ ಹೊಸ ವರ್ಷವು ತಮ್ಮ ಬಾಳಲ್ಲಿ ಹೊಸತೇನನ್ನೂ ತರುತ್ತದೆ ಎಂಬ ನಿರೀಕ್ಷೆಯ ಆಶಾವಾದ.
ತಾವಂದುಕೊಂಡಿರುವ ಕೆಲಸಗಳು ಬರಲಿರುವ ಹೊಸ ವರ್ಷದಲ್ಲಿ ಹೊರ ರೂಪ ಪಡೆಯಲಿದೆ ಎಂಬುದು ಆಶಾವಾದ. ತಮ್ಮ ಸಮಸ್ಯೆಗಳಿಗೆ ಬರಲಿರುವ ಹೊಸ ವರ್ಷವೇ ಪರಿಹಾರ ಎಂಬುದು ಹೆಚ್ಚಿನ ಆಶಾವಾದ. ಏನು ಹೊಸ ವರ್ಷವೋ ಏನೋ? ಅದೇ ಕಚೇರಿ, ಅದೇ ಟೇಬಲ್ಲು, ಅದೇ ಕಡತ, ಅದೇ ಕೆಲಸ ಎಂಬುದು ನಿರಾಶಾವಾದ. ಏನೇನೂ ಬದಲಾವಣೆ ಇಲ್ಲ, ಅದೇ ಸೂರ್ಯ ಅದೇ ಚಂದ್ರ ಎಂಬಷ್ಟು ನಿರ್ಲಿಪ್ತತೆ. ಹೊಸ ವರ್ಷದಲ್ಲೂ ಅದೇ ಮನೆ, ಅದೇ ಅಡುಗೆ ಕೆಲಸ ಎಂಬ ನಿರ್ಭಾವ ಮನೋಭಾವ.
ಜನವರಿ ಒಂದು ಬಂತು ಅಂದ್ರೆ ನನ್ನ ಖಾಯಿಲೆ ತೊಲಗುತ್ತದೆಯೇ? ಅದೇ ಮಾತ್ರೆ, ಅದೇ ಔಷಧ, ಅದೇ ಆಸ್ಪತ್ರೆ ಅಷ್ಟೇ ತಾನೇ? ಹೀಗೆ ಒಬ್ಬೊಬ್ಬರೂ ಅವರವರ ಜೀವನದ ಅನಿವಾರ್ಯಗಳ ದೃಷ್ಟಿಯಲ್ಲೇ ಜೀವನವನ್ನು ನೋಡಿದಾಗ ಅದು ನಿರಾಶಾವಾದವೂ ಆಗುತ್ತದೆ ಅಥವಾ ವಾಸ್ತವಿಕವೂ ಆಗುತ್ತದೆ. ಒಂದರ್ಥದಲ್ಲಿ ವಾಸ್ತವಿಕ ಎಂಬುದು ಆಶಾವಾದ ಮತ್ತು ನಿರಾಶಾವಾದದ ನಡುವೆ ಇದೆ ಎಂಬುದಕ್ಕಿಂತ ನಿರಾಶಾವಾದಕ್ಕೆ ವಾಲುವುದೇ ಹೆಚ್ಚು.
ಈ ಅತೀ ಆಶಾವಾದದ ಮನದ ಆಯಾಮ ಭಿನ್ನ. ಆಶಾವಾದ ಮನವು ನಾನಾ ರೀತಿಯಲ್ಲಿ ಆಶಾವಾದವನ್ನು ನೋಡುತ್ತಾ ಅತೀ ಆಶಯದ ರೆಕ್ಕೆಗಳನ್ನು ಮೂಡಿಸಿಕೊಳ್ಳುತ್ತದೆ. ಕೆಲವೊಮ್ಮೆ ಲೆಕ್ಕಾಚಾರ ಮಾಡಿಕೊಂಡು ತನ್ನಾಶೆ ಹೆಚ್ಚಿಸಿಕೊಳ್ಳುತ್ತದೆ. 2024 ಎಂಬ ವರ್ಷದ ಸಂಖ್ಯೆಗಳನ್ನು ಕೂಡಿಸಿದಾಗ ಎಂಟು ಅಂತ ಬಂತು. 8 ಎಂಬುದು ಸರಿ ಸಂಖ್ಯೆಯೇ ಆದರೂ ಬರೆಯುವಾಗ ಎಲ್ಲಿಂದ ಆರಂಭವೋ ಅಲ್ಲೇ ಅಂತ್ಯ ಹಾಗಾಗಿ ಏರೂ ಇಲ್ಲ, ಇಳಿತವೂ ಇಲ್ಲ ಅಂತ ಅಂದುಕೊಳ್ಳುತ್ತದೆ ಮನ. ಮುಂದಿನ ವರ್ಷವ 2025, ಸಂಖ್ಯೆಗಳನ್ನು ಕೂಡಿಸಿದರೆ 9. ಅಯ್ಯೋ ಹಳ್ಳಕ್ಕೆ ಬೀಳಬಹುದೇ ಎಂಬ ಆತಂಕ. ಬಿದ್ದರೆ ಎಲ್ಲರೂ ಬೀಳ್ತಾರೆ ತಾನೇ ಎಂದು ಮರುಕ್ಷಣವೇ ಸಮಾಧಾನ. ಆದರೆ ಸಂಖ್ಯಾಶಾಸ್ತ್ರದ ಪ್ರಕಾರ ಒಂಬತ್ತು ಎಂಬುದು ವಿಶೇಷ ಸಂಖ್ಯೆ ಹಾಗಾಗಿ ಉತ್ತಮೇ ಆಗೋದು.
ನವಗ್ರಹ, ನವರತ್ನ, ನವರಾತ್ರಿ ಹೀಗೆ ಎಲ್ಲದರಲ್ಲೂ ಒಂಬತ್ತು ಎಂದಿದೆ ಹಾಗಾಗಿ ಈ ವರ್ಷ ತಮ್ಮ ಜೀವನದ ಅತ್ಯಂತ ಶ್ರೇಷ್ಠ ವರ್ಷ ಎಂದೆಲ್ಲ ಮನವು ಲೆಕ್ಕಾಚಾರ ಆರಂಭಿಸಿ ಬಿಡುತ್ತದೆ. ಇಲ್ಲಿನ ನಾಲ್ಕಾರು ಉದಾಹರಣೆಗಳನ್ನು ನೋಡಿದಾಗ “ಅತೀ ಆಶಾವಾದ’ದ ಮನವು ಏಕಂ ವಿಪರೀತ ಆಶಯ ಮೂಡಿಸಿಕೊಳ್ಳಬಹುದು ಅಥವಾ ಅಧ:ಪಾತಾಳಕ್ಕೂ ಇಳಿದುಬಿಡಬಹುದು.
ಯಾವ ಮನವು ಯಾವುದಾದರೇನು, ಮನದ ಮೂಲೆಯಲ್ಲಿ ಒಂದೊಮ್ಮೆಯಾದರೂ ಈ ಜನವರಿ ಒಂದರಿಂದ ತಮ್ಮ ಭವಿಷ್ಯ ಬದಲಾಗಲಿದೆ ಎಂಬ ಆಲೋಚನೆಯು ಮಿಂಚಿ ನಿಲ್ಲಬಹುದು ಅಥವಾ ಮಿಂಚಿ ಮಾಯವಾಗಬಹುದು. ಮನಸ್ಥಿತಿ ಏನೇ ಇದ್ದರೂ ಎಲ್ಲವೂ ಬರಲಿರುವ ಹೊಸ ವರ್ಷದ ಸುತ್ತಲೇ ಸುತ್ತುವುದರಿಂದ ಆ ಹೊಸ ವರ್ಷದ ಹೊಸ ದಿನವು ಹೊಸ ಉಲ್ಲಾಸದ ಸೂರ್ಯನ ಬೆಳಕು ಎಂಬರ್ಥದಲ್ಲಿ “ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ’ ಎಂದು ಹಾಡಿಕೊಂಡೇ ಸಾಗಬಹುದು ಅಲ್ಲವೇ?
ಹೊಸ ವರ್ಷವು ಹೊಸತನ್ನೇ ತರುತ್ತದೆ ಎಂಬ ಆಶಯದಲ್ಲಿ ಏನೂ ತಪ್ಪಿಲ್ಲ. ವಾಸ್ತವಿಕವಾಗಿ ಆಲೋಚಿಸಿದರೆ ಅದೇ ಸೂರ್ಯ ಅದೇ ಚಂದ್ರ, ಅವೇ ನಕ್ಷತ್ರಗಳೂ ನಿಜವೇ. ನಿರಾಶೆಯ ಲೇಪನ ಹೊತ್ತ ಅದೇ ಕಚೇರಿ, ಅದೇ ಮಾತ್ರೆ-ಔಷಧ, ಅದೇ ಅಡುಗೆ ಮನೆ ಕೆಲಸ ಇತ್ಯಾದಿಗಳಲ್ಲೂ ಯಾವ ಅನಿಸಿಕೆಯೂ ತಪ್ಪಿಲ್ಲ. ಪ್ರಮುಖವಾಗಿ, ಹೊಸ ವರ್ಷ ಎಂಬುದು ಕೇವಲ ಕ್ಯಾಲೆಂಡರ್ ಮೇಲಿಲ್ಲ, ಅದು ಮನದಲ್ಲಿ ಇರಬೇಕಿದೆ. ಹೊಸತು ಎಂಬುದು ನಮ್ಮ ಮನಸ್ಸಿನಿಂದ ಹುಟ್ಟಬೇಕಿದೆ. ಹೊಸತು ಎಂಬುದು ಆಶಯ ಎಂಬುದು ಎಷ್ಟು ನಿಜವೋ ಅಷ್ಟೇ ನಿಜ ಹೊಸತು ಎಂಬುದು ಆತಂಕ.
ಒಂದು ಮದುವೆ ಸಂಭ್ರಮವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ಅಲ್ಲಿನ ಪ್ರಮುಖ ವೇದಿಕೆಯಲ್ಲಿ ಇಬ್ಬರೇ ಇದ್ದರೂ ಸುತ್ತಲಿರುವ ಅತೀ ಹತ್ತಿರದ ಬಾಂಧವ್ಯಕ್ಕೂ ಈ ಹೊಸತು ಎಂಬ ಸಂಭ್ರಮವು ಆಶಾದಾಯಕವೂ ಹೌದು, ಆತಂಕವೂ ಹೌದು. ತನ್ನ ಜೀವನದಲ್ಲಿ ಹೆಣ್ಣೊಬ್ಬಳು ಬಂದಿಹಳು ಎಂಬ ಪುಳಕವು ಗಂಡಿನಲ್ಲಿ ಆಶಾದಾಯಕವಾಗಿ ಕಾಣುತ್ತದೆ.
ತನ್ನ ಕನಸಿನ ರಾಜಕುಮಾರಿಯೇ ಈಗ ನನ್ನ ಬಾಳಲ್ಲಿ ಬಂದಿದ್ದಾಳೆ ಎಂಬುದು ಆಶಾದಾಯಕ ಜೀವನದ ನಿರೀಕ್ಷೆಯನ್ನು ಹೊತ್ತಿರುತ್ತದೆ. ಕೆಲವೊಮ್ಮೆ ಮನವು, ಈವರೆಗೆ ತನ್ನ ಜೀವನ ಹೇಗೋ ನಡೆದುಕೊಂಡು ಹೋಗುತ್ತಿತ್ತು ಆದರೆ ಇನ್ನು ಮುಂದೆ ಹೇಗೆ ಎಂಬ ಮನಸ್ಥಿತಿ ಹೊಂದಿದಾಗ ಅದೇ ಪುಳಕವು ಪುಕಪುಕವೂ ಆಗಬಹುದು. ಗಂಡಿಗಿಂತ ಹೆಚ್ಚಾಗಿ ಮದುವೆಯ ವಿಷಯದಲ್ಲಿ ಹೆಣ್ಣಿನ ಭಾವನೆಗಳ ತೂಕ ಹೆಚ್ಚು. ಹೊಸ ಜೀವನ ಎಂಬ ಆನಂದವೂ ಇರುತ್ತದೆ, ಜತೆಗೆ ಹೊಸ ಮನೆ, ಹೊಸ ಜನ, ಹೊಸ ಜೀವನ ಎಂಬ ಆತಂಕವೂ ಇರುತ್ತದೆ.
ಒಂದು ಕಚೇರಿಯ ಸನ್ನಿವೇಶವನ್ನೇ ತೆಗೆದುಕೊಂಡರೆ, ಒಂದು ಹೊಸ ಪ್ರಾಜೆಕ್ಟ್ ಇರಬಹುದು, ಭಡ್ತಿ ಹೊಂದಿಹ ಸನ್ನಿವೇಶದಲ್ಲಿನ ಹೊಸ ಜವಾಬ್ದಾರಿಯೂ ಆಗಿರಬಹುದು. ಹೊಸ ಟೀಂ ಜವಾಬ್ದಾರಿ ಹೊತ್ತಾಗ ಅಲ್ಲೊಂದು ಹೊಸ ಕಲಿಕೆ ಎಂಬ ಆಶಯ ಇರುವುದು ಸಹಜ. ತನ್ನ ಟೀಂನ ಸಹ ಉದ್ಯೋಗಿಗಳು ಹೇಗೆ, ತನ್ನ ಕೈಕೆಳಗೆ ಕೆಲಸ ಮಾಡುವವರು ಕೆಲಸಗಾರರೋ ಅಥವಾ ಮೈಗಳ್ಳರೋ ಎಂಬುದೆಲ್ಲ ಆತಂಕ.
ಹೊಸತಾಗಿ ಆರಂಭಿಸಲಿರುವ ಸ್ವಉದ್ಯೋಗ, ಹೊಸ ವಾಹನ, ಹೊಸ ವಾತಾವರಣದ ಜೀವನ ಹೀಗೆ ಜೀವನದ ಪ್ರತೀ ಹಂತದಲ್ಲೂ ಹೊಸತು ಎಂಬುದು ವಿಶೇಷ ರೂಪತಾಳುತ್ತದೆ. ಹೊಸ ರೂಪ ತಳೆಯುತ್ತಾ ಉತ್ಸಾಹ, ಉಲ್ಲಾಸದ ಜತೆ ನವಿರಾದ ಅಥವಾ ಕೊಂಚ ಹೆಚ್ಚು ಆತಂಕವನ್ನೂ ಮತ್ತು ಸವಾಲನ್ನೂ ಒಡ್ಡುತ್ತದೆ. ಹೊಸತು ಎಂಬುದು ನಮ್ಮಿಂದ ಶುರುವಾದಾಗ ಬದಲಾವಣೆಯೂ ತಂತಾನೇ ಶುರುವಾಗುತ್ತದೆ. ಮೈಮನಗಳು ಆ ಹೊಸತನಕ್ಕೆ ಬೇಗ ಒಗ್ಗಿಕೊಳ್ಳುತ್ತದೆ. ಹೊಸ ವರ್ಷ ಎಂದ ಕೂಡಲೇ ಬದಲಾವಣೆ ಎಂದೇ ಹೇಳಿಕೊಳ್ಳುತ್ತಾ ಕೆಲಸಗಳನ್ನು ಆರಂಭಿಸುವುದು ಬಲು ಸಹಜ.
ಇದು ತಪ್ಪು, ಇದು ಸರಿ ಎಂದು ವಿಮರ್ಶೆ ಮಾಡುವ ಆವಶ್ಯಕತೆ ಇಲ್ಲ. ಉದಾಹರಣೆಗೆ ಹೊಸವರ್ಷದಲ್ಲಿ ಜಿಮ್ ಶುರುಮಾಡುವುದು. ಈ ಹೊಸತು ಎಂಬುದು ನಮ್ಮಲ್ಲೇ ಶುರುವಾಗುತ್ತದೆ ಸರಿ ಆದರೆ ಅದು ಕೇವಲ ಆರಂಭಶೂರತ್ವ ಆದಲ್ಲಿ ಹೆಚ್ಚು ಕಾಲ ಆ ಕೆಲಸ ಮುಂದೆ ಸಾಗುವುದು ಅನುಮಾನ. ಒಂದು ಹೊಸ ಸ್ವಯಂ ಉದ್ಯೋಗವನ್ನೇ ಶುರು ಮಾಡಿದಾಗಲೂ ಅಷ್ಟೇ, ಸಾಕಷ್ಟು ಶ್ರಮವಹಿಸಬೇಕಿದೆ ಎಂಬುದರ ಅರಿವು ಇರಬೇಕು ಆದರೆ ಮುಂದಿನ ವರ್ಷದಲ್ಲಿ ಅಂಬಾನಿಯಾಗಿ ಬಿಡುತ್ತೇನೆ ಎಂಬ ಭೀಕರ ಆಶಾವಾದ ಹೊಂದಿರಬಾರದು ಅಷ್ಟೇ.
ಏನ ಹೇಳ ಹೊರಟೆ ಎಂದರೆ, ಹೊರ ಹೋಗಲಿರುವ ಈ ವರ್ಷ ಶಾಪಗ್ರಸ್ತವಲ್ಲ. ಬರಲಿರುವ ಹೊಸ ವರ್ಷವು ವರಪ್ರದಾಯಕವೂ ಅಲ್ಲ ಆದರೆ ಹಾಗಾಗಲಿ ಎಂಬ ಆಶಯ ಹೊರಲು ಅಡ್ಡಿಯಿಲ್ಲ. ತೀವ್ರವಾಗಿ ಹಳತನ್ನು ಬೈದಾಡುತ್ತಾ, ಹೊಸತನ್ನು ತಲೆಯ ಮೇಲೆ ಕೂರಿಸಿಕೊಳ್ಳುವ ಆವಶ್ಯಕತೆ ಇಲ್ಲ. ಈ ಹಳತು ಒಂದು ವರ್ಷದ ಹಿಂದೆ ಹೊಸತಾಗಿತ್ತು. ಈಗ ಬರಲಿರುವ ಹೊಸತು ಇನ್ನೊಂದು ವರ್ಷದಲ್ಲಿ ಹಳತಾಗುತ್ತದೆ. ಆದರೆ ನಮ್ಮ ಭವಿಷ್ಯ ಹಳತೋ ಅಥವಾ ಹೊಸತೋ ಎಂಬುದು ನಮ್ಮ ಕೈಲಿದೆ. ಬಂದದ್ದೆಲ್ಲ ಬರಲಿ, ಗೋವಿಂದನ ದಯೆಯೊಂದಿರಲಿ ಎನ್ನುತ್ತಾ “ಹೊಸ ವರ್ಷದ ಹೊಸ ಮೊದಲನ್ನು ಹೊತ್ತು ಬರುವ ಬೆಳಕನ್ನು ಹೊಸ ಆಶಯದಿಂದ ಬರಮಾಡಿಕೊಳ್ಳೋಣ, ಒಳಿತಿಗಾಗಿ ಬದಲಾವಣೆ ತಂದುಕೊಳ್ಳೋಣ’.
*ಶ್ರೀನಾಥ್ ಭಲ್ಲೇ, ರಿಚ್ಮಂಡ್