Advertisement

ಎರಡು ವಾರದಲ್ಲಿ ಕಬ್ಬು ಬೆಳೆಗಾರರಿಗೆ ಸಿಹಿಸುದ್ದಿ

07:00 AM Jun 30, 2018 | |

ನವದೆಹಲಿ: ಕಬ್ಬು ಬೆಳೆಗಾರರಿಗೆ ಇನ್ನೆರಡು ವಾರಗಳಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಸಿಹಿಸುದ್ದಿ ನೀಡಲಿದ್ದಾರೆ.

Advertisement

2 ವಾರಗಳಲ್ಲೇ ಕಬ್ಬು ಬೆಂಬಲ ಬೆಲೆ (ಎಫ್ಆರ್‌ಪಿ)ಯನ್ನು ಘೋಷಿಸುತ್ತೇವೆ, ಮಾತ್ರವಲ್ಲ, ಅದರ ಮೊತ್ತವು 2017-18ಕ್ಕಿಂತಲೂ ಹೆಚ್ಚಾಗಿರಲಿದೆ ಎಂದು ಸ್ವತಃ ಮೋದಿಯವರೇ ಹೇಳಿದ್ದಾರೆ.

ಶುಕ್ರವಾರ ದೆಹಲಿಯಲ್ಲಿ ಕರ್ನಾಟಕ ಸೇರಿ ಕಬ್ಬು ಬೆಳೆಯುವ ಪ್ರಮುಖ ರಾಜ್ಯಗಳ 140 ಮಂದಿ ರೈತರೊಂದಿಗೆ ನಡೆಸಿದ ಸಂವಾದದಲ್ಲಿ ಅವರು ಈ ಭರವಸೆ ನೀಡಿದ್ದಾರೆ. ಅಕ್ಟೋಬರ್‌-ಸೆಪ್ಟೆಂಬರ್‌ ಅವಧಿಯ ಕಬ್ಬುಬೆಳೆಗೆ 2 ವಾರಗಳಲ್ಲೇ ನ್ಯಾಯಯುತ ದರವನ್ನು ಘೋಷಿಸುತ್ತೇವೆ ಎಂದಿದ್ದಾರೆ.

2017-18ರ ಸೀಸನ್‌ನಲ್ಲಿ ಪ್ರಸ್ತುತ ಕ್ವಿಂಟಲ್‌ಗೆ 255 ರೂ. ಎಫ್ಆರ್‌ಪಿ ಸಿಗುತ್ತಿದೆ. ಮುಂದಿನ ಋತುವಿನಲ್ಲಿ
ಕ್ವಿಂಟಲ್‌ಗೆ 20ರೂ. ಏರಿಕೆ ಮಾಡುವುದಾಗಿ ಕೃಷಿ ವೆಚ್ಚ ಮತ್ತು ದರಗಳ ಆಯೋಗ (ಸಿಎಸಿಪಿ) ಪ್ರಸ್ತಾಪಿಸಿತ್ತು. ಇದು ರೈತರೊಂದಿಗೆ ಪ್ರಧಾನಿ ಮೋದಿ ನಡೆಸಿರುವ 2ನೇ ಸಭೆಯಾಗಿದ್ದು, ಇತ್ತೀಚೆಗಷ್ಟೇ ಈ ವಲಯಕ್ಕೆ 8,500 ಕೋಟಿ ರೂ.ಗಳ ಪ್ಯಾಕೇಜ್‌ ಅನ್ನೂ ಘೋಷಿಸಿದ್ದರು. ಇದೇ ವೇಳೆ, ಭತ್ತ ಸೇರಿ ಮುಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಹೆಚ್ಚಳ ಮಾಡುವ ಕುರಿತು ನಿರ್ಧರಿಸಲಾಗಿದ್ದು, ಮುಂದಿನ ವಾರ ನಡೆಯುವ ಸಂಪುಟ ಸಭೆಯಲ್ಲಿ ಇದನ್ನು ನಿಗದಿಪಡಿಸಲಾಗುವುದು ಎಂದಿದ್ದಾರೆ. ಈ ನಿರ್ಧಾರದಿಂದ ರೈತರ ಆದಾಯದಲ್ಲಿ ಗಣನೀಯ ಹೆಚ್ಚಳವಾಗಲಿದೆ ಎಂದೂ ಹೇಳಿದ್ದಾರೆ.

ಅಲ್ಲದೆ, ಅತ್ಯಾಧುನಿಕ ಕೃಷಿ ತಂತ್ರಜ್ಞಾನಗಳನ್ನು, ಸೌರ ಪಂಪ್‌, ಸೌರ ಫ‌ಲಕಗಳನ್ನು ಅಳವಡಿಸಿಕೊಳ್ಳುವ
ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳಿ ಎಂದೂ ಅವರು ರೈತರಿಗೆ ಕರೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next