Advertisement

ಸರ್ಕಾರ-ವೈದ್ಯರ ಹಠಕ್ಕೆ ಎರಡು ಬಲಿ

11:29 AM Nov 17, 2017 | Team Udayavani |

ಬೆಂಗಳೂರು: ಎಂ.ಎಸ್‌.ರಾಮಯ್ಯ, ಕಿಮ್ಸ್‌, ಅಪೋಲೊ, ಮಲ್ಯ, ಜೈನ್‌, ವಿಕ್ರಮ್‌, ಮಲ್ಲಿಗೆ ಸೇರಿದಂತೆ ನಗರದ ಖಾಸಗಿ ಆಸ್ಪತ್ರೆಗಳ ಹೊರರೋಗಿಗಳ ವಿಭಾಗ, ನರ್ಸಿಂಗ್‌ ಹೋಮ್‌, ಕ್ಲಿನಿಕ್‌ ಮುಚ್ಚಿದ್ದರಿಂದ ರೋಗಿಗಳು ಅಕ್ಷರಷಃ ನರಳಾಡಿದರು. ಈ ವೇಳೆ ಸಕಾಲದಲ್ಲಿ ಚಿಕಿತ್ಸೆ ಸಿಗದೇ ಚಂದ್ರಲೇಔಟ್‌ನ ಸತೀಶ್‌ (45) ಹಾಗೂ ಢೆಂಘೀ ಜ್ವರಕ್ಕೆ ಕೇರಳ ಮೂಲದ ಉನ್ನಿಕೃಷ್ಣನ್‌ (47) ಮೃತಪಟ್ಟಿದ್ದಾರೆ.

Advertisement

ಜ್ವರ, ಶೀತ, ಕೆಮ್ಮು, ಚರ್ಮ ರೋಗ,  ಕೈಕಾಲು ನೋವು ಸೇರಿದಂತೆ ದಿಢೀರ್‌ ಅಸ್ವಸ್ಥತೆಯಿಂದ ಬಳಲುತ್ತಿದ್ದ ರೋಗಿಗಳು ಖಾಸಗಿ ಆಸ್ಪತ್ರೆಗೆ ಹೋದರೆ ಕೇಳುವವರೇ ಇರಲಿಲ್ಲ. ಹೊರರೋಗಿಗಳ ವಿಭಾಗದ  ಎದುರು ಕುಳಿತಿದ್ದ ಸಿಬ್ಬಂದಿ, ವೈದ್ಯರಿಲ್ಲ ಸರ್ಕಾರ ಆಸ್ಪತ್ರೆಗೆ ಹೋಗಿ ಎಂದು ಹೇಳುತ್ತಿದ್ದರು. ಖಾಸಗಿ ಆಸ್ಪತ್ರೆಯ ಒಪಿಡಿ ಎದುರು ರೋಗಿಗಳು ಎಷ್ಟೇ ಗೋಳಾದರೂ ಚಿಕಿತ್ಸೆ ನೀಡುವವರೇ ಇರಲಿಲ್ಲ. 

ನೋವಿನ ಮೇಲೆ ನೋವು ಕೊಟ್ಟರು: “ಬನ್ನೇರುಘಟ್ಟದಲ್ಲಿ ತಿಂಗಳ ಹಿಂದೆ ತಳ್ಳುಗಾಡಿ ಕಾಲ ಮೇಲೆ ಹರಿದು, ಕಾಲಿನ ಹೆಬ್ಬೆರಳು ಸೇರಿ ಐದು ಬೆರಳಿಗೂ ಗಂಭೀರ ಗಾಯವಾಗಿತ್ತು. ಅದೇ ದಿನ ಕೆ.ಆರ್‌.ರಸ್ತೆಯ ಕಿಮ್ಸ್‌ಗೆ ಚಿಕಿತ್ಸೆಗಾಗಿ ಬಂದಿದ್ದೆವು. ಚಿಕಿತ್ಸೆ ನೀಡಿದ ವೈದ್ಯರು ನ.16ಕ್ಕೆ ತಪಾಸಣೆಗೆ ಬನ್ನಿ ಎಂದಿದ್ದರು. ಇಂದು ಬಂದರೆ ವೈದ್ಯರೇ ಇಲ್ಲ!

ನೋವಿನಿಂದ ಬಳಲುತ್ತಿರುವ ನನಗೆ ನೋವಿನ ಮೇಲೆ ನೋವು ಕೊಟ್ಟರು. ಚಿಕಿತ್ಸೆ ನೀಡುವುದಿಲ್ಲ, ಸರ್ಕಾರಿ ಆಸ್ಪತ್ರೆಗೆ ಹೋಗಿ ಎಂದು ಹೇಳಿದರೆ ಏನು ಮಾಡಬೇಕು. ಹಿರಿಯ ನಾಗರಿಕರ ಜೀವಕ್ಕೂ ಬೆಲೆ ಇಲ್ಲವೇ. ಬನ್ನೇರುಘಟ್ಟದಿಂದ ಇಲ್ಲಿಗೆ ಬಂದಿದ್ದೇವೆ. ಚಿಕಿತ್ಸೆ ನೀಡುವಂತೆ ಎಷ್ಟೇ ಬೇಡಿಕೊಂಡರು ಯಾರೂ ಸ್ಪಂದಿಸಿಲ್ಲ,’ ಎಂದು ಪ್ರಶ್ನಿಸಿದವರು ಧನಲಕ್ಷ್ಮಿ.

ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು: “ಖಾಸಗಿ ವೈದ್ಯರು ಪ್ರತಿಭಟನೆ ಮಾಡುವ ಮೊದಲು ರೋಗಿಗಳಿಗೆ ಸಮಸ್ಯೆ ಆಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿತ್ತು. ತಾಯಿಗೆ ಚರ್ಮರೋಗವಿದ್ದು, ಆಗಾಗ ಕಿಮ್ಸ್‌ಗೆ ಬಂದು ತೋರಿಸುತ್ತಿದ್ದೆವೆ. ನ.14ರಂದು ಬಂದಾಗ ವೈದ್ಯರು ಸಿಕ್ಕಿರಲ್ಲ.

Advertisement

ಗುರುವಾರವೂ ವೈದ್ಯರಿಲ್ಲ. ತಾಯಿಗೆ ನಡೆಯಲೂ ಕಷ್ಟವಾಗುತ್ತಿದೆ. ದಿನಗೂಲಿ ಮಾಡುವ ನಮ್ಮಂಥವರಿಗೆ ಹೀಗೆ ಕಷ್ಟ ನೀಡುವುದೇಕೆ?’ ಎಂದು ವಿಜಯನಗರದ ಗಂಗಮ್ಮ ಅವರ ಮಗ ಯೋಗೇಂದ್ರ ಮುನಿ ಬೇಸರ ವ್ಯಕ್ತಪಡಿಸಿದರು. ಹೀಗೆ ವಿವಿಧ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಗಳು ಚಿಕಿತ್ಸೆಗಾಗಿ ಇನ್ನಿಲ್ಲದ ಸಂಕಷ್ಟ ಎದುರಿಸಿದರು.

ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚಿದ ರೋಗಿಗಳು: ಶಿವಾಜಿ ನಗರದ ಬೌರಿಂಗ್‌ ಆಸ್ಪತ್ರೆಗೆ ಗುರುವಾರ ಬೆಳಗ್ಗೆ 9ರಿಂದ ಸಂಜೆ 4ರವರೆಗೆ 1,470 ಹೊರ ರೋಗಿಗಳು ಚಿಕಿತ್ಸೆ ಪಡೆದಿದ್ದು, ರೋಗಿಗಳ ಸಂಖ್ಯೆಯಲ್ಲಿ ಶೇ.10-15ರಷ್ಟು ಹೆಚ್ಚಳವಾಗಿದೆ. 77 ಮಂದಿ ಚಿಕಿತ್ಸೆಗೆ ದಾಖಲಾಗಿದ್ದು, 62 ಮಂದಿಗೆ ತುರ್ತು ಚಿಕಿತ್ಸೆ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗಿದೆ.

ಹೆಚ್ಚುವರಿ ಸೇವೆಗಾಗಿ 40 ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ 1500 ಹೊರ ರೋಗಿಗಳು ಹಾಗೂ 80 ಮಂದಿ ಒಳರೋಗಿಗಳಿಗೆ ಚಿಕಿತ್ಸೆ ಪಡೆದಿದ್ದಾರೆ. ವಿಕ್ಟೋರಿಯಾ ಆವರಣದಲ್ಲಿನ ಪಿಎಂಎಸ್‌ಎಸ್‌ವೈನಲ್ಲಿ 739 ಹೊರ ರೋಗಿಗಳು ಹಾಗೂ 27 ಒಳರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ.

ಮಲ್ಲೇಶ್ವರದ ಕೆ.ಸಿ.ಜನರಲ್‌ ಆಸ್ಪತ್ರೆಗೆ 836 ಒಪಿಡಿ ರೋಗಿಗಳು ಭೇಟಿ ನೀಡಿದ್ದು, ಸೇವೆಯಲ್ಲಿ ಯಾವುದೆ ತೊಂದರೆ ಆಗಿಲ್ಲ. 93ಕ್ಕೂ ಅಧಿಕ ತುರ್ತು ಪ್ರಕರಣ ದಾಖಲಾಗಿವೆ. ಜಯನಗರ ಜನರಲ್‌ ಆಸ್ಪತ್ರೆಯ ಹೊರರೋಗಿಗಳ ವಿಭಾಗದಲ್ಲಿ 1207 ಹಾಗೂ ಒಳರೋಗಿ ವಿಭಾಗದಲ್ಲಿ 48 ಮಂದಿಗೆ ಚಿಕಿತ್ಸೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next