Advertisement
ಹನೂರು : ಅನೈತಿಕ ಚಟುವಟಿಕೆಗಳ ತಾಣ ಮತ್ತು ಕುಡುಕರ ಅಡ್ಡೆಯಾಗಿರುವ ಶಾಲಾವರಣ, 140ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಎರಡೇ ಶೌಚಾಲಯ, ಎತ್ತರಕ್ಕೇರದ ಶಾಲಾ ಸುತ್ತುಗೋಡೆ, ಅರ್ಧಕ್ಕೆ ನಿಂತ ಹೆಚ್ಚುವರಿ ಶೌಚಾಲಯದ ಕಾಮಗಾರಿ. ಇದು ತಾಲೂಕಿನ ಕುರಟ್ಟಿ ಹೊಸೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ.
Related Articles
Advertisement
ಅರ್ಧಕ್ಕೆ ನಿಂತ ಶೌಚಾಲಯ ಕಾಮಗಾರಿ : ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಶೌಚಾಲಯವಿಲ್ಲ, ಇರುವ ಶೌಚಾಲಯಗಳು ದುರಸ್ಥಿಯಲ್ಲಿರುವುದನ್ನು ಮನಗಂಡು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು, ಸದಸ್ಯರು ಮತ್ತು ಶಾಲಾ ಮುಖ್ಯೋಪಾಧ್ಯಾಯರು ಗ್ರಾಮ ಪಂಚಾಯಿತಿಗೆ ಪತ್ರ ವ್ಯವಹಾರ ನಡೆಸಿ ಮನವಿ ಮಾಡಿದ ಹಿನ್ನೆಲೆ ಗ್ರಾಮ ಪಂಚಾಯಿತಿವತಿಯಿಂದ ಹೆಚ್ಚುವರಿಯಾಗಿ ಒಂದು ಶೌಚಾಲಯವನ್ನು ನಿರ್ಮಾಣ ಮಾಡಲು ಅನುದಾನ ನೀಡಲಾಯಿತು. ಆದರೆ ಕಾಮಗಾರಿಯ ಹೊಣೆ ಹೊತ್ತ ಗುತ್ತಿಗೆದಾರರು ಅರ್ಧದಷ್ಟು ಕಾಮಗಾರಿಯನ್ನಷ್ಟೇ ನಿರ್ವಹಿಸಿದ್ದು ನೀರಿನ ಸಂಪರ್ಕ ಕಲ್ಪಸಿಲ್ಲ ಮತ್ತು ನಿರ್ವಹಿಸಿರುವ ಕಾಮಗಾರಿಯು ಕಳಪೆ ಗುಣಮಟ್ಟದಿಂದ ಕೂಡಿದೆ. ಈ ಬಗ್ಗೆ ಪ್ರಶ್ನಿಸದರೆ ನೀಡಿದ್ದ ಅನುದಾನಕ್ಕೆ ಅಷ್ಟು ಮಾತ್ರ ಕಾಮಗಾರಿ ನಿರ್ವಹಿಸಲು ಸಾಧ್ಯವಾಯಿತು ಎಂಬ ಹಾರಿಕೆಯ ಉತ್ತರ ನೀಡುತ್ತಿದ್ದಾರೆ.
ಸಂಜೆಯಾಗುತ್ತಲೆ ಅಕ್ರಮ ಚಟುವಟಿಕೆಗಳ ತಾಣ : ಸೂರ್ಯಾಸ್ತಮವಾಗಿ ಕತ್ತಲು ಆವರಿಸುತ್ತಿದ್ದಂತೆ ಶಾಲಾ ಆವರಣವು ಅನೈತಿಕ ಚಟುವಟಿಕೆಗಳ ತಾಣ ಮತ್ತು ಕುಡುಕರ ಅಡ್ಡೆಯಾಗುತ್ತಿದೆ. ಗ್ರಾಮದ ಮತ್ತು ಅಕ್ಕ-ಪಕ್ಕದ ಕೆಲ ಗ್ರಾಮಸ್ಥರು ಸಂಜೆಯಾಗುತ್ತಲೇ ಶಾಲೆಯ ಸುತ್ತುಗೋಡೆಯನ್ನು ಹಾರಿ ಶಾಲಾ ಆವರಣವನ್ನು ಪ್ರವೇಶಿಸಿ ಮದ್ಯ ಸೇವಿಸಲು ಮತ್ತು ಇತರೆ ಅಕ್ರಮ ಚಟುವಟಿಕೆಗಳಿಗಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ದಿನಂ ಬೆಳಿಗ್ಗೆ ಶಾಲೆಗೆ ಆಗಮಿಸುವ ಶಿಕ್ಷಕರು, ಅಡುಗೆ ಸಹಾಯಕರನ್ನು ಮದ್ಯದ ಬಾಟಲಿಗಳು, ಪೌಚುಗಳು ಆಹ್ವಾನಿಸುತ್ತವೆ. ಕೂಡಲೇ ಅಡುಗೆ ಸಹಾಯಕಿಯರು ಅವುಗಳನ್ನು ತೆರವು ಮಾಡಿ ಶುಚಿಗೊಳಿಸುವ ಕಾರ್ಯ ಮಾಡಬೇಕಿದೆ. ಶಾಲೆಯ ಸುತ್ತುಗೋಡೆಯ ಎತ್ತರ ಕಡಿಮೆ ಇರುವುದೇ ಈ ಎಲ್ಲಾ ಅನೈತಿಕ ಕಾರ್ಯಕ್ರಮಗಳಿಗೆ ಕಾರಣವಾಗಿದ್ದು, ಸುತ್ತುಗೋಡೆಯನ್ನು ಎತ್ತರಗೊಳಿಸಿಕೊಡುವಂತೆ ಗ್ರಾಮ ಪಂಚಾಯಿತಿಗೆ ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ಒಟ್ಟಾರೆ ಕುರಟ್ಟ ಹೊಸೂರು ಗ್ರಾಮದ ಶಾಲೆಯು ಮೂಲಭೂತ ಸಮಸ್ಯೆಗಳ ಜೊತೆ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದ್ದು ಶಾಲೆಯ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಶೌಚಾಲಯ ಮತ್ತು ಶಾಲೆಯ ಸುತ್ತ್ತುಗೋಡೆಯನ್ನು ಎತ್ತರಗೊಳಿಸಬೇಕು ಎಂದು ಪ್ರಜ್ಞಾವಂತ ನಾಗರೀಕರು ಆಗ್ರಹಿಸಿದ್ದಾರೆ.
*********
ಶಾಲೆಗೆ ಶೌಚಾಲಯ ನಿರ್ಮಾಣ ಮತ್ತು ಸುತ್ತಗೋಡೆ ಎತ್ತರ ಮಾಡುವ ಸಂಬಂಧ ಗ್ರಾಮ ಪಂಚಾಯಿತಿಗೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸೆ.6ರಿಂದ 6 ಮತ್ತು 7ನೇ ತರಗಿತಿ ಪ್ರಾರಂಭವಾಘುತ್ತಿದ್ದು ಶೀಘ್ರದಲ್ಲಿಯೇ ಎಲ್ಲಾ ತರಗತಿಗಳು ಪ್ರಾರಂಭವಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆ ಅಗತ್ಯ ಕ್ರಮವಹಿಸಲು ಗ್ರಾಮ ಪಂಚಾಯಿತಿ ಅಧಿಕಾರಿಗಳು ಮುಂದಾಗಬೇಕು..
-ಗೋವಿಂದರಾಜು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ.
*****
ಹೊಸ ಶೌಚಾಲಯ ಕಟ್ಟಡ ಕಾಮಗಾರಿ ಅಪೂರ್ಣಗೊಂಡಿರುವ ಹಿನ್ನೆಲೆ ಹಣ ಬಿಡುಗಡೆಮಾಡಿಲ್ಲ. ಸುತ್ತುಗೋಡೆಯನ್ನು ಎತ್ತರ ಮಾಡಲು ಅಂದಾಜು ಪಟ್ಟಿ ತಯಾರಿಸಿ ಕ್ರಮವಹಿಸಲಾಗಿದೆ. ಮುಂದಿನ 15 ದಿನಗಳೊಳಗಾಗಿ ಶೌಚಾಲಯ ಕಾಮಗಾರಿಯನ್ನು ಪೂರ್ಣಗೊಳಿಸಿ, ದುರಸ್ಥಿಗೊಂಡ ಹಳೇ ಶೌಚಾಲಯಗಳನ್ನು ನವೀಕರಿಸಿ, ಸುತ್ತುಗೋಡೆ ಕಾಮಗಾರ ಆರಂಭಿಸಲು ಕ್ರಮವಹಿಸಲಾಗುವುದು.
-ಗೋವಿಂದ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ, ಕುರಟ್ಟಿ ಹೊಸೂರು.
******