ನವದೆಹಲಿ: ಮಾಜಿ ಪತ್ರಕರ್ತ ಸೇರಿದಂತೆ ಇಬ್ಬರು ಉಗ್ರರು ಭದ್ರತಾ ಪಡೆಯ ಎನ್ ಕೌಂಟರ್ ನಲ್ಲಿ ಸಾವನ್ನಪ್ಪಿರುವ ಘಟನೆ ಬುಧವಾರ (ಮಾರ್ಚ್ 30) ಜಮ್ಮು-ಕಾಶ್ಮೀರದ ಶ್ರೀನಗರ್ ಜಿಲ್ಲೆಯಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ದೇವರ ವಿಗ್ರಹ ಕೆತ್ತುವ ಮುಸ್ಲಿಮರಿಗೂ ನಿಷೇಧ ಹೇರುತ್ತೀರಾ? : ಎಚ್ ಡಿಕೆ
ಹತ್ಯೆಗೀಡಾದ ಉಗ್ರನನ್ನು ರಯೀಸ್ ಅಹ್ ಭಟ್ ಎಂದು ಗುರುತಿಸಲಾಗಿದೆ. ಈತ ಅನಂತ್ ನಾಗ್ ಜಿಲ್ಲೆಯಲ್ಲಿ ವ್ಯಾಲಿ ನ್ಯೂಸ್ ಸರ್ವೀಸ್ ಎಂಬ ಆನ್ ಲೈನ್ ನ್ಯೂಸ್ ಪೋರ್ಟಲ್ ನಡೆಸುತ್ತಿದ್ದ ಎಂಬುದಾಗಿ ವರದಿ ವಿವರಿಸಿದೆ.
ಕಳೆದ ವರ್ಷ ಆಗಸ್ಟ್ ನಲ್ಲಿ ರಯೀಸ್ ಭಯೋತ್ಪಾದಕ ಸಂಘಟನೆಗೆ ಸೇರ್ಪಡೆಗೊಂಡಿದ್ದ. ರಯೀಸ್ ಜಮ್ಮು ಕಾಶ್ಮೀರ್ ಪೊಲೀಸರ ಹಿಟ್ ಲಿಸ್ಟ್ ನಲ್ಲಿ ಇದ್ದಿರುವುದಾಗಿ ಮೂಲಗಳು ತಿಳಿಸಿವೆ. ಭಯೋತ್ಪಾದನೆಗೆ ಸಂಬಂಧಿಸಿದಂತೆ ಈತನ ವಿರುದ್ಧ ಈಗಾಗಲೇ ಎರಡು ಎಫ್ ಐಆರ್ ದಾಖಲಾಗಿತ್ತು ಎಂದು ವರದಿ ಹೇಳಿದೆ.
ಹತ್ಯೆಗೀಡಾದ ಎರಡನೇ ಉಗ್ರನನ್ನು ಅನಂತ್ ನಾಗ್ ಜಿಲ್ಲೆಯ ಬಿಜ್ಬೆಹರಾ ನಿವಾಸಿ ಹಿಲಾಲ್ ಅಹ್ ರಾಹ್ ಎಂದು ಗುರುತಿಸಲಾಗಿದೆ. 2021 ಆಗಸ್ಟ್ 8ರಿಂದ ರಯೀಸ್ ನಾಪತ್ತೆಯಾಗಿದ್ದು, ಅಕ್ಟೋಬರ್ 18ರಿಂದ ರಾಹ್ ನಾಪತ್ತೆಯಾಗಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.