Advertisement

Students; ಪರೀಕ್ಷಾ ಪೇ ಚರ್ಚಾದಲ್ಲಿ ಕರಾವಳಿಯ ಇಬ್ಬರು ವಿದ್ಯಾರ್ಥಿಗಳು

11:11 PM Jan 28, 2024 | Team Udayavani |

ಕುಂದಾಪುರದ ಗಾರ್ಗಿ ದೇವಿ
ಕುಂದಾಪುರ: ಪ್ರಧಾನಿ ನರೇಂದ್ರ ಮೋದಿ ಜತೆಗೆ ಸೋಮವಾರ ದಿಲ್ಲಿಯಲ್ಲಿ ನಡೆಯುವ ಪರೀಕ್ಷಾ ಪೇ ಚರ್ಚಾದಲ್ಲಿ ಪಾಲ್ಗೊಳ್ಳಲು ಕುಂದಾಪುರ ಎಜುಕೇಶನ್‌ ಸೊಸೈಟಿ ಪ್ರವರ್ತಿತ ಎಚ್‌.ಎಂ.ಎಂ. ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ.ಆರ್‌. ಆಚಾರ್ಯ ಸ್ಮಾರಕ ಪ್ರೌಢ ಶಾಲೆಯ 9ನೇ ತರಗತಿಯ ಗಾರ್ಗಿ ದೇವಿ ಆಯ್ಕೆಯಾಗಿದ್ದಾರೆ. ಗಾರ್ಗಿ ಸಹಿತ ರಾಜ್ಯದ ನಾಲ್ವರು ಪ್ರಧಾನಿ ಜತೆ ನೇರ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ.

Advertisement

ಕೋಟಿ ಮಂದಿ
ಈ ವರ್ಷ ದೇಶದ ವಿವಿಧೆಡೆಯಿಂದ 2.05 ಕೋಟಿ ವಿದ್ಯಾರ್ಥಿಗಳು, 14.93 ಲಕ್ಷ ಬೋಧಕರು, 5.69 ಲಕ್ಷ ಪೋಷಕರು ಆನ್‌ಲೈನ್‌ ಮೂಲಕ “ಪರೀಕ್ಷಾ ಪೇ ಚರ್ಚಾ’ದಲ್ಲಿ ಭಾಗಿಯಾಗಲಿದ್ದಾರೆ. ರಾಷ್ಟ್ರ ಮಟ್ಟದ ಕಲೋತ್ಸವದಲ್ಲಿ ವಿಜೇತರಾದ ಇಬ್ಬರಿಗೆ ಗಣರಾಜ್ಯೋತ್ಸವ ಪರೇಡ್‌ ಹಾಗೂ ಈ ಸಂವಾದದಲ್ಲಿ ಭಾಗಿಯಾಗಲು ಅವಕಾಶ ದೊರೆತಿದೆ. ಗಾರ್ಗಿದೇವಿ 2023-2024ನೇ ಸಾಲಿನ ಕಲೋತ್ಸವದ ಭರತನಾಟ್ಯ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ, ಕೇಂದ್ರ ಸರಕಾರದ ಶಿಕ್ಷಣ ಮಂತ್ರಾಲಯ ನಡೆಸಿದ ರಾಷ್ಟ್ರ ಮಟ್ಟದ 2023-24ನೇ ಸಾಲಿನ ಕಲೋತ್ಸವದ ಶಾಸ್ತ್ರೀಯ ನೃತ್ಯ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದಿದ್ದರು. ವಿಮಾನ ಮೂಲಕ ಪ್ರಯಾಣ, ವಸತಿ ಸೇರಿದಂತೆ 6 ದಿನಗಳ ಪೂರ್ಣ ವ್ಯವಸ್ಥೆಯನ್ನು ಕೇಂದ್ರದ ಎನ್‌ಸಿಇಆರ್‌ಟಿ ಸಂಸ್ಥೆಯೇ ನೋಡಿಕೊಂಡಿದೆ.

ಗಾರ್ಗಿ ಅವರು ದೇವಲ್ಕುಂದದ ಅಶೋಕ್‌ ಸುವರ್ಣ ಮತ್ತು ನಾಟ್ಯ ವಿದುಷಿ ಪ್ರವಿತಾ ಅಶೋಕ್‌ ದಂಪತಿಯ ಪುತ್ರಿ. ಪ್ರಧಾನಿಯವರ ದೂರದೃಷ್ಟಿಯ ಈ ಕಾರ್ಯಕ್ರಮದಲ್ಲಿ ಗ್ರಾಮಾಂತರದ ವಿದ್ಯಾರ್ಥಿನಿಗೂ ಭಾಗಿಯಾಗುವ ಅವಕಾಶ ಸಿಕ್ಕಿದ್ದು ನಮ್ಮ ಶಾಲೆ ಹಾಗೂ ಸಂಸ್ಥೆಗೆ ಹೆಮ್ಮೆ ಎನ್ನುತ್ತಾರೆ ಪ್ರಾಂಶುಪಾಲೆ ಡಾ| ಚಿಂತನಾ ರಾಜೇಶ್‌.

ಕುಂದಾಪುರದಿಂದ 2ನೇ ವಿದ್ಯಾರ್ಥಿನಿ
2021ರ ಮಾರ್ಚ್‌ನಲ್ಲಿ ನಡೆದ ಪ್ರಧಾನಿ ಮೋದಿ ಜತೆಗಿನ ಪರೀಕ್ಷಾ ಪೇ ಚರ್ಚಾದಲ್ಲಿ ಕುಂದಾಪುರ ತಾಲೂಕಿನ ಇನ್ನೋರ್ವ ವಿದ್ಯಾರ್ಥಿನಿ ಅಲಾºಡಿ- ಆರ್ಡಿ ಚಾರಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆಯ ಅನುಷಾ ಭಾಗಿಯಾಗಿದ್ದರು.

ನಿರೀಕ್ಷೆ ಮಾಡದೇ ದೊರೆತ ಅವಕಾಶ. ಇದು ದೊರೆಯಲು ನಮ್ಮ ಶಾಲೆ ಹಾಗೂ ಮನೆಯವರ ಪ್ರೋತ್ಸಾಹ ಕಾರಣ. ಕಲಾಪ್ರಕಾರಕ್ಕೆ ಸಂದ ಗೌರವ. ಬದುಕಿನ ಅವಿಸ್ಮರಣೀಯ ಘಟನೆ.
– ಗಾರ್ಗಿ ದೇವಿ

Advertisement

ಸುಳ್ಯದ ಅಚಲ್‌ ಬಿಳಿನೆಲೆ
ಸುಳ್ಯ: ಪ್ರಧಾನಿ ನರೇಂದ್ರ ಮೋದಿಯವರ “ಪರೀಕ್ಷಾ ಪೇ ಚರ್ಚಾ-7′ ಕಾರ್ಯಕ್ರಮದ ಸಂದರ್ಭದಲ್ಲಿ ವೈಜ್ಞಾನಿಕ ಮಾದರಿ ಪ್ರದರ್ಶಿಸಲು ಮುಡಿಪು ಜವಾಹರ್‌ ನವೋದಯ ವಿದ್ಯಾಲಯದ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಸುಳ್ಯದ ಅಚಲ್‌ ಬಿಳಿನೆಲೆ ಆಯ್ಕೆಯಾಗಿದ್ದಾರೆ.

ಜ. 29ರಂದು ಹೊಸದಿಲ್ಲಿಯ ಭಾರತ್‌ ಮಂಟಪದಲ್ಲಿ ನಡೆಯುವ “ಪರೀಕ್ಷಾ ಪೇ ಚರ್ಚಾ’ದಲ್ಲಿ ಪ್ರಧಾನಿ ಮೋದಿಯವರೊಂದಿಗೆ ದೇಶದ ಆಯ್ದ ವಿದ್ಯಾರ್ಥಿಗಳು ಪರೀಕ್ಷಾ ಒತ್ತಡ ನಿರ್ವಹಣೆಯ ಸಂವಾದದಲ್ಲಿ ಭಾಗವಹಿಸಲಿದ್ದು ಆ ಸಂದರ್ಭದಲ್ಲಿ “ಚಂದ್ರಯಾನ -3’ರ ಕಾರ್ಯವೈಖರಿಯನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ತಯಾರಿಸಿದ ವೈಜ್ಞಾನಿಕ ಮಾದರಿಯನ್ನು ಅಚಲ್‌ ಪ್ರಧಾನಿಯವರ ಮುಂದೆ ಪ್ರದರ್ಶಿಸಿ ವಿವರಿಸಲಿದ್ದಾರೆ.

ದೇಶದ 600ಕ್ಕೂ ಹೆಚ್ಚು ಜವಾಹರ ನವೋದಯ ವಿದ್ಯಾಲಯಗಳ ಪೈಕಿ ಎಂಟು ವಿದ್ಯಾಲಯಗಳಿಗೆ ಈ ಅವಕಾಶ ದೊರಕಿದ್ದು, ಇದರಲ್ಲಿ ಭಾಗವಹಿಸಲು ನವೋದಯ ವಿದ್ಯಾಲಯದ ಹೈದರಾಬಾದ್‌ ವಲಯವನ್ನು ಅಚಲ್‌ ಪ್ರತಿನಿಧಿಸುತ್ತಿದ್ದಾರೆ.

ಅಚಲ್‌ ಅವರು ಉಪನ್ಯಾಸಕರಾದ ಚಂದ್ರಶೇಖರ ಬಿಳಿನೆಲೆ ಮತ್ತು ಡಾ| ಅನುರಾಧಾ ಕುರುಂಜಿ ದಂಪತಿಯ ಪುತ್ರ.

ಅವಕಾಶ ಸಿಕ್ಕಿದ್ದು ನನ್ನ ಸುಯೋಗ.ಮೋದೀಜೀ ಮುಂದೆ ನವೋದಯ ವಿದ್ಯಾಲಯದ ಪ್ರತಿನಿಧಿಯಾಗಿ ಮಾಡೆಲ್‌ ಪ್ರದರ್ಶಿಸಲು ಉತ್ಸುಕನಾಗಿದ್ದೇನೆ. ಚಂದ್ರಯಾನ 3ರ ವೈಜ್ಞಾನಿಕ ಮಾದರಿಯ ತಯಾರಿಯಲ್ಲಿ ಸಹಕರಿಸಿದ ಸಹಪಾಠಿಗಳು, ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ಮಾರ್ಗದರ್ಶಕರಾದ ಅಶೋಕ್‌ ಮತ್ತು ಹೆತ್ತವರಿಗೆ ನಾನು ಆಭಾರಿ.
-ಅಚಲ್‌ ಬಿಳಿನೆಲೆ

25 ವರ್ಷದ ಹಿಂದೆ ಅಮ್ಮನಿಂದ
ಪ್ರಧಾನಿ ಭೇಟಿ; ಈಗ ಮಗ!
ಅಚಲ್‌ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಅಮ್ಮ ಮತ್ತು ಮಗ ಒಂದೇ ದಿನಾಂಕದಂದು ಪ್ರಧಾನಿ ಗಳನ್ನು ಭೇಟಿಯಾದ ಘಟನೆ ನಡೆಯುತ್ತಿದೆ. 1999ರಲ್ಲಿ ದಿಲ್ಲಿಯ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಎನ್ನೆಸೆಸ್‌ ಪ್ರತಿನಿಧಿಸಿ ಭಾಗವಹಿಸಿದ್ದ ಅಚಲ್‌ ಬಿಳಿನೆಲೆ ಅವರ ತಾಯಿ ಡಾ| ಅನುರಾಧಾ ಅವರಿಗೆ 29-1-1999ರಂದು ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತ್ತು. ಇದೀಗ ಸರಿಯಾಗಿ 25 ವರ್ಷಗಳ ಅನಂತರ ಅದೇ ದಿನಾಂಕ (29-01-24)ದಂದು ಪ್ರಧಾನಿ ಮೋದಿ ಅವರನ್ನು ಭೇಟಿಯಾಗುವ ಅವಕಾಶ ಅಚಲ್‌ಗೆ ಲಭಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next