ಪ್ರಯಾಗ್ ರಾಜ್(ಉತ್ತರಪ್ರದೇಶ): ಉತ್ತರಪ್ರದೇಶದ ವಿಶೇಷ ಪೊಲೀಸ್ ಪಡೆ(ಎಸ್ ಟಿಎಫ್)ಯ ಎನ್ ಕೌಂಟರ್ ಗೆ ಇಬ್ಬರು ನಟೋರಿಯಸ್ ಕ್ರಿಮಿನಲ್ ಗಳು ಹತ್ಯೆಗೀಡಾಗಿರುವ ಘಟನೆ ಬುಧವಾರ ತಡರಾತ್ರಿ ಪ್ರಯಾಗ್ ರಾಜ್ ನ ಅರೈಲ್ ಪ್ರದೇಶದಲ್ಲಿ ನಡೆದಿದೆ.
ವರದಿಗಳ ಪ್ರಕಾರ, ಈ ಇಬ್ಬರು ಶಾರ್ಪ್ ಶೂಟರ್ ಗಳು ಪಾತಕಿಗಳಾದ ಮುನ್ನಾ ಬಜರಂಗಿ ಹಾಗೂ ಮುಖ್ತರ್ ಅನ್ಸಾರಿ ಜತೆ ಸಂಪರ್ಕ ಹೊಂದಿರುವುದಾಗಿ ತಿಳಿಸಿದೆ.
ಹತ್ಯೆಗೀಡಾದ ಕ್ರಿಮಿನಲ್ಸ್ ಗಳನ್ನು ವಕೀಲ್ ಪಾಂಡೆ ಮತ್ತು ಅಮ್ಜಾದ್ ಎಂದು ಗುರುತಿಸಲಾಗಿದೆ. ಇವರು 2013ರಲ್ಲಿ ವಾರಣಾಸಿ ಡೆಪ್ಯುಟಿ ಜೈಲರ್ ಅನಿಲ್ ಕುಮಾರ್ ತ್ಯಾಗಿ ಅವರ ಹತ್ಯೆ ಪ್ರಕರಣದಲ್ಲಿ ಶಾಮೀಲಾಗಿರುವುದಾಗಿ ವರದಿ ವಿವರಿಸಿದೆ.
ಪೊಲೀಸರ ಮಾಹಿತಿ ಪ್ರಕಾರ, ಇಬ್ಬರು ಶಾರ್ಪ್ ಶೂಟರ್ ಗಳು ಗ್ಯಾಂಗ್ ಸ್ಟರ್ಸ್ ಗಳಾದ ಮುನ್ನಾ ಬಜರಂಗಿ ಮತ್ತು ಮುಖ್ತರ್ ಅನ್ಸಾರಿ ಅವರ ಸೂಚನೆಯಂತೆ ವಾರಣಾಸಿ ಡೆಪ್ಯುಟಿ ಜೈಲರ್ ಅನಿಲ್ ಕುಮಾರ್ ತ್ಯಾಗಿ ಅವರನ್ನು ಹತ್ಯೆಗೈದಿರುವುದಾಗಿ ತಿಳಿಸಿದೆ.
ವಕೀಲ್ ಪಾಂಡೆ ಅಲಿಯಾಸ್ ರಾಜೀವ್ ಪಾಂಡೆ ಅಲಿಯಾಸ್ ರಾಜು, ಸಾಹಸ್ ರಾಮ್ ಪಾಂಡೆ ಪುತ್ರ. ವಕೀಲ್ ಪಾಂಡೆ ಬಡಾ ಶಿವ್ ಟೆಂಪಲ್ ಪೊಲೀಸ್ ಠಾಣಾ ವ್ಯಾಪ್ತಿಯ ಗೋಪಿಗಂಜ್ ಜಿಲ್ಲೆಯ ಭಾದೋಹಿ ನಿವಾಸಿ. ಈತನ ಕುರಿತು ಮಾಹಿತಿ ನೀಡಿದವರಿಗೆ ಪೊಲೀಸರು 50 ಸಾವಿರ ರೂಪಾಯಿ ಬಹುಮಾನ ಘೋಷಿಸಿದ್ದರು.
ಪಾಂಡೆ ಮತ್ತು ಆತನ ಆಪ್ತ ಸಹಚರ, ಶಾರ್ಪ್ ಶೂಟರ್ಸ್ ಎಚ್ ಎಸ್ ಅಮ್ಜಾದ್ ಅಲಿಯಾಸ್, ಪಿಂಟು ಅಲಿಯಾಸ್ ಡಾಕ್ಟರ್ ಈತ ಹಫೀಜುಲ್ಲಾ ಪುತ್ರ. ಅಮ್ಜಾದ್ ರಾಮ್ ಸಹಾಯಿಪುರ್ ಪೊಲೀಸ್ ಠಾಣಾ ವ್ಯಾಪ್ತಿಯ ಭಾದೋಹಿ ನಿವಾಸಿ. ಇಬ್ಬರು ಶಾರ್ಪ್ ಶೂಟರ್ ಗಳು ಎಸ್ ಟಿಎಫ್ ತಂಡದ ಎನ್ ಕೌಂಟರ್ ಗೆ ಬಲಿಯಾಗಿರುವುದಾಗಿ ವರದಿ ತಿಳಿಸಿದೆ.