Advertisement

ಪಿಒಕೆಯಲ್ಲಿ ‘ಬ್ಲ್ಯಾಕ್ ಡೇ’ ಪ್ರತಿಭಟನಾಕಾರರ ಮೇಲೆ ಲಾಠಿ ಬೀಸಿದ ಪಾಕ್ ಪೊಲೀಸರು; ಇಬ್ಬರ ಸಾವು

07:19 AM Oct 23, 2019 | Team Udayavani |

ಮುಝಾಫರಾಬಾದ್ (ಪಿ.ಒ.ಕೆ.): ಪಾಕಿಸ್ಥಾನ ತಮ್ಮ ನೆಲವನ್ನು ಆಕ್ರಮಿಸಿಕೊಂಡು 72 ವರ್ಷಗಳು ಸಂದ ಹಿನ್ನಲೆಯಲ್ಲಿ ‘ಬ್ಲ್ಯಾಕ್ ಡೇ’ ಹೆಸರಿನಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದ ಪಾಕಿಸ್ಥಾನ ಆಕ್ರಮಿತ ಕಾಶ್ಮೀರ ಭಾಗದ ಹೋರಾಟಗಾರರ ವಿರುದ್ಧ ಪಾಕಿಸ್ಥಾನ ಪೊಲೀಸರು ಲಾಠೀ ಚಾರ್ಜ್ ನಡೆಸಿದ ಪರಿಣಾಮ ಇಬ್ಬರು ಹೋರಾಟಗಾರರು ಪ್ರಾಣತ್ಯಾಗ ಮಾಡಿದ ಘಟನೆ ವರದಿಯಾಗಿದೆ. ಈ ಘಟನೆಯಲ್ಲಿ 80ಕ್ಕೂ ಹೆಚ್ಚು ಹೋರಾಟಗಾರರಿಗೆ ಗಾಯಗಳಾಗಿವೆ.

Advertisement

ಪಾಕ್ ಆಕ್ರಮಿತ ಕಾಶ್ಮೀರದ ಮುಝಾಫರಾಬಾದ್ ನಲ್ಲಿ ವಿವಿಧ ರಾಜಕೀಯ ಪಕ್ಷಗಳು ಸರ್ವ ಸ್ವತಂತ್ರ ಪಕ್ಷಗಳ ಮೈತ್ರಿಕೂಟದಡಿಯಲ್ಲಿ ಸ್ವಾತಂತ್ರ್ಯ ಪರ ಜಾಥಾ ಒಂದನ್ನು ಮಂಗಳವಾರದಂದು ಆಯೋಜಿಸಿದ್ದವು. ಪಾಕಿಸ್ಥಾನ ಸೇನೆ 1947ರ ಅಕ್ಟೋಬರ್ 22ರಂದು ಜಮ್ಮುಕಾಶ್ಮೀರದ ಮೇಲೆ ಆಕ್ರಮಣ ಮಾಡಿದ ಈ ದಿನವನ್ನು ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಗಿಲ್ಗಿಟ್ ಭಾಗದ ಜನತೆ ‘ಕರಾಳ ದಿನ’ವನ್ನಾಗಿ ಆಚರಿಸುತ್ತಿದ್ದಾರೆ. ಮತ್ತು ಕಳೆದ 72 ವರ್ಷಗಳಿಂದ ಈ ಭಾಗದ ಜನತೆ ಸ್ವತಂತ್ರ ಭೂಭಾಗಕ್ಕಾಗಿ ಆಗ್ರಹಿಸುತ್ತಿದ್ದಾರೆ.


ಸಾವಿರಾರು ಸಂಖ್ಯೆಯಲ್ಲಿದ್ದ ಜನರು ಪಾಕಿಸ್ಥಾನದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಬೀದಿಗಿಳಿದು ಪ್ರತಿಭಟಿಸುತ್ತಿದ್ದಂತೆ ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಟಿಯರ್ ಗ್ಯಾಸ್ ಮತ್ತು ಲಾಠೀ ಚಾರ್ಚ್ ಅಸ್ತ್ರಗಳನ್ನು ಬಳಸಿದರು. ಈ ಸಂದರ್ಭದಲ್ಲಿ ಇಬ್ಬರು ಪ್ರತಿಭಟನಾಕಾರರು ಮೃತಪಟ್ಟರೆ ಹಲವರು ಪೊಲೀಸರ ಲಾಠೀ ಏಟಿಗೆ ಗಾಯಗೊಂಡರು.

‘ಪಾಕಿಸ್ಥಾನ ಸರಕಾರದ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸುವುದು ನಮ್ಮ ಉದ್ದೇಶ ಆದರೆ ಸರಕಾರ ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕಲು ಬಲಪ್ರಯೋಗಕ್ಕೆ ಮುಂದಾದರೆ ನಮ್ಮ ಧ್ವನಿ ಪಾಕ್ ಸರಕಾರಕ್ಕೆ ತಲುಪುವವಂತೆ ಮಾಡಲು ನಾವು ಏನು ಮಾಡಲೂ ಸಿದ್ಧ’ ಎಂದು ಹೋರಾಟಗಾರರ ಮುಖಂಡರೊಬ್ಬರು ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

1947ನೇ ಇಸವಿಯ ಅಕ್ಟೋಬರ್ 22ರಂದು ಪಾಕಿಸ್ಥಾನಿ ಪಡೆಗಳು ಜಮ್ಮು ಕಾಶ್ಮೀರದ ಮೇಲೆ ಆಕ್ರಮಣವನ್ನು ಮಾಡಿದ್ದವು. ಮತ್ತು ಈ ಸಂದರ್ಭದಲ್ಲಿ ಭಾರತದ ಸೇನಾ ಪ್ರತಿರೋಧಕ್ಕೆ ಶರಣಾಗಿ ಪಾಕ್ ಪಡೆಗಳು ಜಮ್ಮು ಕಾಶ್ಮೀರದಿಂದ ಹಿಂದೆ ಸರಿದಿದ್ದವಾದರೂ ಕಣಿವೆ ರಾಜ್ಯದ ಕೆಲ ಭಾಗಗಳನ್ನು ತಮ್ಮ ವಶದಲ್ಲಿರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದವು. ಇದನ್ನು ಈ ಭಾಗದ ಜನರು ಮತ್ತು ಭಾರತ ಪಾಕ್ ಆಕ್ರಮಿತ ಕಾಶ್ಮೀರ ಎಂದು ಕರೆದರೆ, ಪಾಕಿಸ್ಥಾನ ಈ ಭೂಪ್ರದೇಶವನ್ನು ‘ಆಝಾದ್ ಪಾಕಿಸ್ಥಾನ’ ಎಂಬ ಹೆಸರಿನಿಂದ ಗುರುತಿಸುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next