ಬೆಂಗಳೂರು: ಎಸ್.ಆರ್.ನಗರದ ನೆಪ್ಲಾಗ್ ಲಾಜಿಸ್ಟಿಕ್ ಪ್ರೈವೇಟ್ ಲಿಮಿಟೆಡ್ ಕಚೇರಿಗೆ ಬಂದಿದ್ದ ಚಿನ್ನಾಭರಣ ತುಂಬಿದ್ದ ಲಕ್ಷಾಂತರ ರೂ.ಮೌಲ್ಯದ ಪಾರ್ಸೆಲ್‌ಗಳನ್ನು ಕಳವು ಮಾಡಿದ್ದ ರಾಜಸ್ಥಾನ ಮೂಲದ ಇಬ್ಬರು ಆರೋಪಿಗಳನ್ನು ಸಂಪಂಗಿರಾಮನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನ ಮೂಲದ ಅನಿಲ್ ಕುಮಾರ್ ಸೈನಿ (24) ಮತ್ತು ಈತನ ಸ್ನೇಹಿತ ಅನಿಲ್ ಕುಮಾರ್(23) ಬಂಧಿತರು. ಆರೋಪಿಗಳಿಂದ 59.10 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು, 7.86 ಕ್ಯಾರಟ್ಸ್ ವಜ್ರ ಮತ್ತು 34.39 ಗ್ರಾಂ ತೂಕದ ಪ್ಲಾಟಿನಂ ಸೇರಿ 44 ಚಿನ್ನದ ಬಳೆಗಳು, 48 ಕೈಕಡಗ, 3 ಪೆಂಡೆಂಟ್ ಸೆಟ್‌ಗಳು, ವಿವಿಧ ವಿನ್ಯಾಸದ 53 ಬ್ರಾಸ್ಲೆಟ್‌ಗಳು, 10 ಉಂಗುರ ಹಾಗೂ ಇತರೆ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರ ಪೈಕಿ ಅನಿಲ್ ಕುಮಾರ್ ಸೈನಿ ಈ ಹಿಂದೆ ನೆಪ್ಲಾಗ್ ಲಾಜಿಸ್ಟಿಕ್ ಪ್ರೈವೇಟ್ ಲಿಮಿಟೆಡ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ. ಈ ಮಧ್ಯೆ ಕೆಲ ತಿಂಗಳ ಹಿಂದೆ ಕೆಲಸ ಬಿಟ್ಟು, ತನ್ನದೇ ಊರಿನ ಹೋಶಿಯಾರ್ ಸಿಂಗ್ ಸೈನಿ ಎಂಬಾತನನ್ನು ಕೆಲಸಕ್ಕೆ ಸೇರಿಸಿದ್ದ. ಈ ವೇಳೆ ಕಚೇರಿಯ ಎರಡು ಕೀಗಳ ಪೈಕಿ ಒಂದನ್ನು ಹೋಶಿಯಾರ್ ಸಿಂಗ್‌ಗೆ ಕೊಟ್ಟು, ಮತ್ತೂಂದು ಕೀಯನ್ನು ಕೃತ್ಯ ಎಸಗುವ ಹಿನ್ನೆಲೆಯಲ್ಲಿ ಸ್ನೇಹಿತ ಅನಿಲ್ ಕುಮಾರ್‌ಗೆ ನೀಡಿದ್ದ ಎಂದು ಪೊಲೀಸರು ಹೇಳಿದರು.
ಈ ನಡುವೆ ಜ.31ರಂದು ನೆಪ್ಲಾಗ್ ಲಾಜಿಸ್ಟಿಕ್ ಪ್ರೈವೇಟ್ ಲಿಮಿಟೆಡ್‌ಗೆ ಮುಂಬೈ ನಿಂದ ವಿಮಾನದ ಮೂಲಕ ಆರು ಪಾರ್ಸೆಲ್ ಗಳು ಬಂದಿದ್ದವು. ಈ ಮಾಹಿತಿಯನ್ನು ಹೋಶಿಯಾರ್ ಸಿಂಗ್ ಸೈನಿಯಿಂದ ಪಡೆದ ಅನಿಲ್ ಕುಮಾರ್ ಸೈನಿ, ಕೂಡಲೇ ತನ್ನ ಸ್ನೇಹಿತ ಅನಿಲ್ ಕುಮಾರ್‌ಗೆ ತಿಳಿಸಿದ್ದ. ನಂತರ ಲಾಜಿಸ್ಟಿಕ್ ಕಚೇರಿ ಬಳಿ ಹೋದ ಅನಿಲ್ ಕುಮಾರ್, ಕೆಲ ಹೊತ್ತು ಅಲ್ಲಿಯೇ ಕಾದು, ಹೋಶಿಯಾರ್ ಸಿಂಗ್ ಕಾರ್ಯನಿಮಿತ್ತ ಹೊರ ಹೋಗುತ್ತಿದ್ದಂತೆ ಆರು ಬಾಕ್ಸ್‌ಗಳ ಪೈಕಿ ಐದು ಬಾಕ್ಸ್‌ಗಳನ್ನು ಕಳವು ಮಾಡಿ ಪರಾರಿ ಯಾಗಿದ್ದ ಎಂದು ಪೊಲೀಸರು ತಿಳಿಸಿದರು.
ಆದರೆ, ಈ ವಿಚಾರ ಲಾಜಿಸ್ಟಿಕ್‌ನಲ್ಲಿ ಕೆಲಸ ಮಾಡುವ ಹೋಶಿಯಾರ್ ಸಿಂಗ್ ಸೈನಿಗೆ ಗೊತ್ತಿಲ್ಲ. ಆದರೂ ಕಚೇರಿಯ ಅಧಿಕಾರಿಗಳ ದೂರಿನ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅನಿಲ್‌ಕುಮಾರ್ ಸೈನಿ ಕೆಲಸಕ್ಕೆ ಸೇರಿಸಿದ್ದ ವಿಚಾರ ಬಾಯಿಬಿಟ್ಟಿದ್ದ. ಈ ಆಧಾರದ ಮೇಲೆ ರಾಜಸ್ಥಾನದಲ್ಲಿದ್ದ ಅನಿಲ್ ಕುಮಾರ್ ಸೈನಿಯನ್ನು ವಶಕ್ಕೆ ಪಡೆದು ತೀವ್ರ ರೀತಿಯಲ್ಲಿ ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ವಾಟ್ಸ್‌ಆ್ಯಪ್ ಕಾಲ್ ಆರೋಪಿ ಅನಿಲ್ ಕುಮಾರ್ ಸೈನಿ, ಒಂದು ವೇಳೆ ಪೊಲೀಸರ ಕೈಗೆ ಸಿಕ್ಕಿ ಬಿದ್ದರೆ, ಯಾವುದೇ ಸಾಕ್ಷ್ಯ ಸಿಗಬಾರದು ಎಂದು ಜಾಗ್ರತೆ ವಹಿಸಿದ್ದ. ಹೀಗಾಗಿ ರಾಜಸ್ಥಾನದಿಂದ ಬೆಂಗಳೂರಿನಲ್ಲಿರುವ ಸ್ನೇಹಿತ ಅನಿಲ್‌ಕುಮಾರ್‌ಗೆ ವಾಟ್ಸ್‌ಆ್ಯಪ್ ಕರೆ ಮಾಡಿ, ಕಳ್ಳತನ ಮಾಡುವಂತೆ ಸೂಚನೆ ನೀಡಿದ್ದ. ಆದರೆ, ಸ್ಥಳದಲ್ಲಿ ದೊರೆತ ಸಿಸಿ ಕ್ಯಾಮೆರಾ ದೃಶ್ಯಾವಳಿ ಹಾಗೂ ಲಾಜಿಸ್ಟಿಕ್ ಸಿಬ್ಬಂದಿ ಹೋಶಿಯಾರ್ ಸಿಂಗ್ ಸೈನಿ ಹೇಳಿಕೆಗಳು ಆರೋಪಿಯ ಸುಳಿವು ನೀಡಿದ್ದವು ಎಂದು ಪೊಲೀಸರು ಹೇಳಿದರು.
ಮದುವೆ ಬಳಿಕ ಹಂಚಿಕೆ ಆರೋಪಿಗಳ ಪೈಕಿ ಫೆ.19ರಂದು ಅನಿಲ್ ಕುಮಾರ್ ಸೈನಿಗೆ ಸಂಬಂಧಿ ಯುವತಿ ಜತೆ ವಿವಾಹ ನಿಶ್ಚಯವಾಗಿತ್ತು. ಆದರೆ, ಇದೀಗ ಮದುವೆ ಮರಿದು ಬಿದ್ದಿದೆ. ಮದುವೆ ಮೊದಲೇ ಕೃತ್ಯ ಎಸಗಿದ್ದರಿಂದ ಅದನ್ನು ಬೆಂಗಳೂರಿನಲ್ಲೇ ರಹಸ್ಯ ಸ್ಥಳದಲ್ಲಿ ಇಡಲು ಸೂಚನೆ ನೀಡಿದ್ದ. ಮದುವೆ ಬಳಿಕ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಹಂಚಿಕೊಂಡು ಐಷಾರಾಮಿ ಜೀವನ ನಡೆಸಲು ಸಿದ್ಧತೆ ನಡೆಸಿದ್ದರು ಎಂದು ಪೊಲೀಸರು ಹೇಳಿದರು.