Advertisement

ಒಂದೂವರೆ ವರ್ಷದಲ್ಲಿ ಇಬ್ಬರು ರಾಷ್ಟ್ರಪತಿಗಳ ಭೇಟಿ

10:58 AM Dec 28, 2018 | Team Udayavani |

ಉಡುಪಿ: ಶ್ರೀಕೃಷ್ಣನೆಂದರೆ ಆಕರ್ಷಿಸುವವನು ಎಂಬರ್ಥ. ಜತೆಗೆ ನಮ್ಮ ಪಾಪಗಳನ್ನು ಕದ್ದೊಯ್ಯುವ ಕಳ್ಳ ಎಂಬ ಮಾತೂ ಇದೆ. ಇಂಥ ಶ್ರೀ ಕೃಷ್ಣ ಮೊದಲಿನ ಅರ್ಥದಂತೆಯೇ ಒಂದೂವರೆ ವರ್ಷದೊಳಗೆ ಇಬ್ಬರು ರಾಷ್ಟ್ರಪತಿಗಳನ್ನು ತನ್ನತ್ತ ಸೆಳೆದು ದರ್ಶನ ಭಾಗ್ಯ ಕರುಣಿಸಿದ್ದಾನೆ. ಕಡೆಗೋಲು ಹಿಡಿದ ಉಡುಪಿಯ ಶ್ರೀಕೃಷ್ಣನ ಖ್ಯಾತಿ ಇಲ್ಲಿಗೇ ನಿಲ್ಲದು. ತನ್ನ ಪ್ರತಿಕೃತಿಯನ್ನು ರಾಷ್ಟ್ರಪತಿ ಭವನದಲ್ಲಿ ಇಡುವಂತೆ ಪ್ರೇರೇಪಿಸಿದ್ದಾನೆ. ಯಾಕೆಂದರೆ, ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಇಂದು ನೀಡಿದ ಶ್ರೀಕೃಷ್ಣನ ಪ್ರತಿಮೆಯನ್ನು ರಾಷ್ಟ್ರಪತಿ ಭವನದಲ್ಲಿ ಇಡುವುದಾಗಿ ತಿಳಿಸಿದ್ದಾರೆ.

Advertisement

ಒಂದೂವರೆ ವರ್ಷದಲ್ಲಿ ಇಬ್ಬರು
2017ರ ಜೂನ್‌ 18 ರಂದು ಪ್ರಣವ್‌ ಮುಖರ್ಜಿ ಪೇಜಾವರ ಶ್ರೀಗಳ ಐದನೇ ಪರ್ಯಾಯದ ಉತ್ತರಾರ್ಧ ಅವಧಿಯಲ್ಲಿ ಭೇಟಿ ಕೊಟ್ಟು ಆಶೀರ್ವಾದ ಪಡೆದಿದ್ದರು. ಪ್ರಥಮ ರಾಷ್ಟ್ರಪತಿ ಬಾಬುರಾಜೇಂದ್ರ ಪ್ರಸಾದರನ್ನು 1950ರ ದಶಕದಲ್ಲಿ ಆಕರ್ಷಿಸಿದ ಪೇಜಾವರ ಶ್ರೀಗಳ ವಿದ್ಯಾಗುರು ಭಂಡಾರಕೇರಿ ಮತ್ತು ಪಲಿಮಾರು ಮಠಾಧೀಶರಾಗಿದ್ದ ಶ್ರೀ ವಿದ್ಯಾಮಾನ್ಯತೀರ್ಥರ ಪಲಿಮಾರು ಮಠದ ಪಟ್ಟಶಿಷ್ಯ ಶ್ರೀವಿದ್ಯಾಧೀಶತೀರ್ಥರ ಪರ್ಯಾಯ ಪೂರ್ವಾರ್ಧ ಅವಧಿಯಲ್ಲಿ ಈ ಭೇಟಿ ನಡೆಯಿತು.

ಪ್ರಣವ್‌ ಮುಖರ್ಜಿ ಬರುವಾಗ ಹೇಗೆ ಶ್ರೀಕೃಷ್ಣ ಮಠದಲ್ಲಿ ಕಾರ್ಯಕ್ರಮ ನಡೆಯಿತೋ ಅದೇ ಮಾದರಿಯನ್ನು ರಾಮನಾಥ ಕೋವಿಂದರಿಗೂ ಅನುಸರಿಸಲಾಯಿತು. ಆಗ ರಾಜಾಂಗಣದಲ್ಲಿ ಡಾ| ಬಿ.ಆರ್‌. ಶೆಟ್ಟಿಯವರ ಆಸ್ಪತ್ರೆ ಶಿಲಾನ್ಯಾಸ ಕಾರ್ಯಕ್ರಮ ನಡೆದಿದ್ದರೆ, ಈಗ ಪೇಜಾವರ ಮಠದಲ್ಲಿ ಪೇಜಾವರ ಶ್ರೀಗಳ ಕಾರ್ಯಕ್ರಮ ಜರಗಿತು.
ಪ್ರಣವ್‌ ಮುಖರ್ಜಿ ಬರುವಾಗ ಜನತೆಯ ಕುತೂಹಲ ಹೇಗೆ ಇತ್ತೋ ಅದೇ ರೀತಿ  ರಾಮನಾಥರನ್ನು ಉಡುಪಿ ಜನತೆ ಸ್ವಾಗತಿಸಿ ಕಣ್ತುಂಬಿಸಿಕೊಂಡಿತು.

ರಾಮನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ !
ಪೇಜಾವರ ಮಠದಲ್ಲಿ ಪೂಜೆಗೊಳ್ಳುವ ಎರಡು ಪಟ್ಟದ ದೇವರಲ್ಲಿ ಒಂದು ಶ್ರೀರಾಮ, ಪಲಿಮಾರು ಮಠದ ಪಟ್ಟದ ದೇವರೂ ಶ್ರೀರಾಮ, ಬಂದ ರಾಷ್ಟ್ರಪತಿ ಹೆಸರೂ ರಾಮನಾಥ. ಅವರು ಗುರುವಾರ ಶ್ರೀಕೃಷ್ಣ ಮಠದಲ್ಲಿ ಉಲ್ಲೇಖೀಸಿದ್ದೂ ರಾಮರಾಜ್ಯದ ಆದರ್ಶವನ್ನು. ಪೇಜಾವರ ಶ್ರೀಗಳವರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವುದು ಸಾಧು ಸಂತರ ಅಭಿಮತವೆಂದು ಹೇಳಿದ್ದೂ ರಾಮನಾಥರಲ್ಲೇ. ಇವೆಲ್ಲವೂ ನಡೆದಿದ್ದು ಮಾತ್ರ ರಾಮನಾಮ ಪಾಯಸಕ್ಕೆ ಸಕ್ಕರೆಯಾದ ಶ್ರೀ ಕೃಷ್ಣನ ಸನ್ನಿಧಿಯಲ್ಲಿ .

Advertisement

Udayavani is now on Telegram. Click here to join our channel and stay updated with the latest news.

Next