ಚಾಮರಾಜನಗರ: ಜಿಲ್ಲೆಯಲ್ಲಿ ಗುರುವಾರ ಎರಡು ಕೋವಿಡ್ 19 ಸೋಂಕಿನ ಪ್ರಕರಣಗಳು ವರದಿಯಾಗಿವೆ.
ಕೊಳ್ಳೇಗಾಲದ ಕೆಎಸ್‌ಆರ್‌ಟಿಸಿ ಬಸ್ ಚಾಲಕನಿಗೆ ಹಾಗೂ ಗುಂಡ್ಲುಪೇಟೆಯ 8311 ಸಂಖ್ಯೆಯ ರೋಗಿಯ ಪತ್ನಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ.
ಗುಂಡ್ಲುಪೇಟೆಯ ಮಹದೇವಪ್ರಸಾದ್ ನಗರದ ನಿವಾಸಿ ಸರಕು ಸಾಗಣೆ ವಾಹನದ ಚಾಲಕನಿಗೆ ಮೊದಲು ಕೋವಿಡ್ ದೃಢಪಟ್ಟಿತು. ಆತನ ಪ್ರಾಥಮಿಕ ಸಂಪರ್ಕ ಹೊಂದಿದ್ದ ಇನ್ನಿಬ್ಬರು ಚಾಲಕರಿಗೆ, ದ್ವಿತೀಯ ಸಂಪರ್ಕ ಹೊಂದಿದ್ದ ಇಬ್ಬರು ಮಹಿಳೆಯರಿಗೆ ಕೋವಿಡ್ ಸೋಂಕು ತಗುಲಿ, ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುವಾರ ಆತನ ಪತ್ನಿಗೆ ಕೋವಿಡ್ ದೃಢಪಟ್ಟಿದೆ.
ಈ ಮೂಲಕ ಗುಂಡ್ಲುಪೇಟೆಯ 8311 ಸಂಖ್ಯೆಯ ರೋಗಿಯಿಂದ ಐದು ಜನರಿಗೆ ಕೋವಿಡ್ ಸೋಂಕು ತಗುಲಿದೆ. ಆತನೂ ಸೇರಿ ಗುಂಡ್ಲುಪೇಟೆಯ ಮಹದೇವಪ್ರಸಾದ್ ನಗರದಲ್ಲಿ 6 ಮಂದಿ ಸೋಂಕಿತರಾಗಿದ್ದಾರೆ.
ಇದಲ್ಲದೇ, ಕೊಳ್ಳೇಗಾಲದ ಮಂಜುನಾಥನಗರ ಬಡಾವಣೆ ನಿವಾಸಿಯಾದ ಕೆಎಸ್‌ಆರ್‌ಟಿಸಿ ಬಸ್ ಚಾಲಕ/ನಿರ್ವಾಹಕನಿಗೆ ಗುರುವಾರ ಕೋವಿಡ್ ದೃಢಪಟ್ಟಿದೆ. ಹೀಗಾಗಿ ಗುರುವಾರ ಸಂಜೆ ಮಂಜುನಾಥ ನಗರವನ್ನು ಸೀಲ್‌ಡೌನ್ ಮಾಡಲಾಯಿತು. ಈ ಚಾಲಕ/ನಿರ್ವಾಹಕ ಬಸ್‌ನಲ್ಲಿ ಬೆಂಗಳೂರಿಗೆ ತೆರಳಿದ್ದು, ವಾಪಸ್ ಬಂದು ಕೋವಿಡ್ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಲಾಗಿದೆ.
ಚಾಮರಾಜನಗರದ ಭಗೀರಥ ನಗರದ ಭೂಮಾಪಕಿ ಹಾಗೂ ಪೂರ್ವ ಪೊಲೀಸ್‌ಠಾಣೆಯ ಪೇದೆ ಸೇರಿ ಜಿಲ್ಲೆಯಲ್ಲೀಗ 9 ಸಕ್ರಿಯ ಪ್ರಕರಣಗಳಿವೆ. ಒಟ್ಟು ದೃಢೀಕೃತ ಪ್ರಕರಣಗಳು 10. ಓರ್ವ (ಮುಂಬೈ ನಿವಾಸಿ) ಗುಣಮುಖನಾಗಿ ಮನೆಗೆ ತೆರಳಿದ್ದಾನೆ.
ಜಿಲ್ಲೆಯಲ್ಲಿ ನಿಗಾವಣೆಯಲ್ಲಿರುವ ಪ್ರಾಥಮಿಕ ಸಂಪರ್ಕಿತರ ಸಂಖ್ಯೆ ಒಟ್ಟು ಸಂಖ್ಯೆ 82 ಹಾಗೂ ದ್ವಿತೀಯ ಸಂಪರ್ಕಿತರ ಸಂಖ್ಯೆ 124. ಇದುವರೆಗೆ ಪರೀಕ್ಷೆಗೆ ಒಳಪಟ್ಟಿರುವ ಮಾದರಿಗಳ ಸಂಖ್ಯೆ 4589, ಇದರಲ್ಲಿ ನೆಗೆಟಿವ್ ಎಂದು ವರದಿಯಾಗಿರುವ ಮಾದರಿಗಳು 4580. ದೃಢೀಕೃತ ಮಾದರಿಗಳ ಒಟ್ಟು ಸಂಖ್ಯೆ 10.