ಹುಬ್ಬಳ್ಳಿ: ರಾಜ್ಯದ ವಿವಿಧೆಡೆ ಚಿತ್ತಾ ಮಳೆ ಅಬ್ಬರ ಜೋರಾಗಿದ್ದು ಭಾರೀ ಅವಾಂತರ ಸೃಷ್ಟಿಸಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಈಜಾಡುವಾಗ ನೀರಿನ ಸೆಳೆತಕ್ಕೆ ಸಿಲುಕಿ ಇಬ್ಬರು ಬಾಲಕಿಯರು ಮೃತಪಟ್ಟಿದ್ದಾರೆ.
ಮಲಪ್ರಭಾ ನದಿಯಿಂದ ಅಪಾರ ಪ್ರಮಾಣದ ನೀರು ಹೊರ ಬಿಡಲಾಗುತ್ತಿದ್ದು, ತೀರ ಪ್ರದೇಶದಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ.
ಅಫಜಲ್ಪುರ ತಾಲೂಕಿನ ಬನ್ನಟ್ಟಿ ಗ್ರಾಮದ ಬಳಿ ಭೀಮಾ ನದಿಯಲ್ಲಿ ಬಟ್ಟೆ ತೊಳೆಯಲು ಹೋದಾಗ ನೀರಿಗೆ ಇಳಿದಿದ್ದ ಭೂಮಿಕಾ ದೊಡಮನಿ ಬನ್ನಟ್ಟಿ (8), ಶ್ರಾವಣಿ ನಾಟೀಕಾರ ಚಿಂಚೋಳಿ (11) ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ.
ಶ್ರಾವಣಿಯ ಮೃತದೇಹ ಪತ್ತೆಯಾಗಿದ್ದು, ಭೂಮಿಕಾಗೆ ಶೋಧ ನಡೆದಿದೆ. ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಣಕುಂಬಿ, ಜಾಂಬೋಟಿ ಅರಣ್ಯ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು ಮಲಪ್ರಭಾ ಜಲಾಶಯಕ್ಕೆ 5000 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಅಷ್ಟೇ ಪ್ರಮಾಣದ ನೀರು ಹೊರ ಬಿಡಲಾಗುತ್ತಿದೆ.
ಚಿಕ್ಕಮಗಳೂರಿನಲ್ಲಿ ಮಳೆಗೆ ಈರುಳ್ಳಿ, ಟೊಮೆಟೋ ಬೆಳೆಗೆ ಹಾನಿಯಾಗಿದೆ. ಹಾವೇರಿ, ಗದಗ ಜಿಲ್ಲೆಯಲ್ಲಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ರೈತರು ಬೆಳೆ ರಕ್ಷಿಸಿಕೊಳ್ಳಲು ಪರದಾಡುತ್ತಿದ್ದಾರೆ. ಯಲ್ಲಾಪುರ ತಾಲೂಕಿನ ಕಳಚೆಯಲ್ಲಿ ರಸ್ತೆ, ಸಣ್ಣ ಸೇತುವೆ ಕೊಚ್ಚಿ ಹೋಗಿದೆ. ಶಿವಮೊಗ್ಗ ಜಿಲ್ಲೆ ಆನಂದಪುರ ತಾಲೂಕಿನ ಕರಡಿಮನೆ ಸೇತುವೆ ಕೊಚ್ಚಿ ಹೋಗಿ ಸಂಚಾರ ಬಂದ್ ಆಗಿದೆ.