Advertisement

ಕೆರೆಗುಡ್ಡದಲ್ಲಿ ಸಿಕ್ಕ ಅಸ್ಥಿ ಪಂಜರ: ರಹಸ್ಯ ಬಯಲು

11:26 AM Apr 04, 2022 | Team Udayavani |

ಕಂಪ್ಲಿ: ತಾಲೂಕಿನ ರಾಮಸಾಗರದ ವಿಠಲಾಪುರ ಕೆರೆ ಪಕ್ಕದ ಕೆರೆಗದ್ದೆ ಗುಡ್ಡದಲ್ಲಿ ಕೆಲವು ದಿನಗಳ ಹಿಂದೆ ದೊರೆತ ತಲೆಬುರಡೆ, ಎಲುಬುಗಳು, ಅಸ್ಥಿಪಂಜರಕ್ಕೆ ಸಂಬಂಧಿಸಿದಂತೆ ವಿಶೇಷ ಕಾರ್ಯ ನಿರ್ವಹಿಸಿದ ಕಂಪ್ಲಿ ಪೊಲೀಸರು ಅಸ್ಥಿಪಂಜರ ರಹಸ್ಯ ಬಯಲು ಮಾಡಿದ್ದಾರೆ.

Advertisement

ಮಾ.19ರಂದು ರಾಮಸಾಗರದ ವಿಠಲಾಪುರ ಕೆರೆ ಪಕ್ಕದ ಕೆರೆಗದ್ದೆ ಗುಡ್ಡದಲ್ಲಿ ಕೊಲೆ ನಡೆದಿದ್ದು, ಕೊಲೆಯಾದ ಯುವಕ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಬಳ್ಳುಂಡಗಿ ಗ್ರಾಮದ ಅಮರೇಶ್‌ (20) ಎಂದು ಗುರುತಿಸಲಾಗಿದೆ.

ಮೃತ ಯುವಕ ಸಮೀಪದ ಗಂಗಾವತಿ ತಾಲೂಕಿನ ಇಂದಿರಾ ಪವರ್‌ ಪ್ಲಾಂಟಿನಲ್ಲಿ ಹಮಾಲಿಯಾಗಿ ಕೆಲಸ ಮಾಡುತ್ತಿದ್ದು, ಆತನ ಅಂಗಿಯನ್ನು ಹೊಲಿದಿರುವ ಗಂಗಾವತಿ ರಾಯಲ್‌ ಟೈಲರ್‌ ಎನ್ನುವವರ ಮೂಲಕ ಪತ್ತೆ ಮಾಡಿದ್ದಾರೆ. ಅನುಮಾನಸ್ಪದ ಸಾವಿನ, ಅನಾಮಧೇಯ ಶವ ಪತ್ತೆಯಾದ ಬಗ್ಗೆ ಕಂಪ್ಲಿ ಠಾಣೆಯಲ್ಲಿ ಮಾ.28ರಂದು ಪ್ರಕರಣ ದಾಖಲಾಗಿತ್ತು.

ಬಳ್ಳಾರಿ ಎಸ್ಪಿ ಸೈದುಲ್‌ ಅಡಾವತ್‌, ಎಎಸ್ಪಿ ಗುರು ಬಿ. ಮತ್ತೂರು, ಡಿಎಸ್ಪಿ ಎಸ್‌.ಎಸ್‌. ಕಾಶೀಗೌಡ ಅವರು ಕಂಪ್ಲಿ ಪಿಐ ಸುರೇಶ್‌ ಎಚ್‌. ತಳವಾರ್‌, ಪಿಎಸ್‌ಐ ವಿರೂಪಾಕ್ಷ ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸಿ ಕೇವಲ ಅಸ್ಥಿಪಂಜರ ಹಾಗೂ ಸ್ಥಳದಲ್ಲಿ ದೊರಕಿದ ಕೆಲವು ವಸ್ತುಗಳ ಮುಖಾಂತರ ಪ್ರಕರಣ ಬೇಧಿಸಿದ್ದಾರೆ.

ಇದನ್ನೂ ಓದಿ:ದಲಿತರ ಸೌಲಭ್ಯ ಕಬಳಿಸಿದ ರೇಣುಕಾಚಾರ್ಯ ವಿರುದ್ಧ ಕ್ರಮ ಕೈಗೊಳ್ಳಲಿ: ಪ್ರಕಾಶ ರಾಠೋಡ

Advertisement

ಮೃತ ಯುವಕನ ಕುಟುಂಬಸ್ಥರು ಅಮರೇಶ್‌ ನಾಪತ್ತೆಯ ಬಗ್ಗೆ ಪ್ರಕರಣ ದಾಖಲಿಸಿದ್ದು, ಮೃತ ಅಮರೇಶನನ್ನು ಅವನ ಜೊತೆಗಿದ್ದ ಮೂವರು ಜನ ಮಾ.19ರಂದು ಒಂದೇ ಮೋಟಾರ್‌ ಸೈಕಲ್‌ನಲ್ಲಿ ಕರೆದುಕೊಂಡು ಹೋಗಿದ್ದು, ವಾಪಸ್ಸು ಬರುವಾಗ ಮೂರು ಜನರು ಮಾತ್ರ ಬಂದಿದ್ದು, ಇದರಿಂದ ನಮಗೆ ಅನುಮಾನವಿದೆ ಎಂದು ಮಾಹಿತಿ ನೀಡಿದ್ದರು. ಇದರ ಪ್ರಕಾರ ಹಲವು ಸಾಕ್ಷಿಗಳ ಆಧಾರದ ಮೇಲೆ ಮೃತ ಯುವಕನ ಜೊತೆ ಕೆಲಸ ಮಾಡುತ್ತಿದ್ದ ಕಿರಣಕುಮಾರ್‌ ಮತ್ತು ರೇವಣಸಿದ್ಧ ಎನ್ನುವವರನ್ನು ಬಂಧಿಸಿದ್ದು, ತಲೆ ಮರೆಸಿಕೊಂಡಿರುವ ಮಲ್ಲಯ್ಯ ಮತ್ತು ಸಂಗಣ್ಣ ಎನ್ನುವರನ್ನು ಪೊಲೀಸರು ಶೋಧಿಸುತ್ತಿದ್ದಾರೆ.

ಕೊಲೆ ಆರೋಪಿ ಕಿರಣಕುಮಾರ್‌ ಅವರ ತಂಗಿಯನ್ನು ಚುಡಾಯಿಸಿದ್ದ ಎನ್ನುವ ಕಾರಣಕ್ಕೆ ಆರೋಪಿಗಳು ಅಮರೇಶನನ್ನು ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಪ್ರಕರಣವನ್ನು ಕಂಪ್ಲಿ ಠಾಣೆಯ ಪಿಐ ಸುರೇಶ್‌ ಎಚ್‌ ತಳವಾರ ಮತ್ತು ಸಿಬ್ಬಂದಿ ನಾಗನಗೌಡ, ಗೋವಿಂದ, ಮಂಜುನಾಥ, ವಿಜಯಕುಮಾತ, ಗಣಮೂರ್ತಿ, ಮಾರೆಪ್ಪ ಪತ್ತೆಹಚ್ಚಿದ್ದಾರೆ. ಬಳ್ಳಾರಿ ಪೊಲೀಸ್‌ ಅಧೀಕ್ಷಕರು ಪ್ರಶಂಸಿಸಿ 10 ಸಾವಿರ ರೂ. ನಗದು ಬಹುಮಾನ ಘೋಷಣೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next