ಇಸ್ಲಾಮಾಬಾದ್: ಜಾಗತಿಕ ಮಟ್ಟದ ಬೃಹತ್ ಕ್ರೀಡಾಕೂಟಗಳು ಮುಗಿದ ಬಳಿಕ ಕೆಲವು ದೇಶದ ಸ್ಪರ್ಧಿಗಳು ನಾಪತ್ತೆಯಾಗುವುದು ಮಾಮೂಲು. ಈ ಬಾರಿಯ ಬರ್ಮಿಂಗ್‌ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ ಮುಗಿದೊಡನೆ ಇಬ್ಬರು ಬಾಕ್ಸರ್‌ಗಳು ಕಾಣೆಯಾಗಿರುವ ಸುದ್ದಿ ಬಿತ್ತರಗೊಂಡಿದೆ.
ಈ ಹಿಂದೆ ಇಂಥವರ ಪತ್ತೆಗಾಗಿ ಗಂಭೀರವಾಗಿಯೇ ಯತ್ನಿಸಲಾಗಿದೆ. ಈ ಬಾರಿ ಅದರೊಂದಿಗೆ ಬಲವಾದ ಆತಂಕವೂ ಸೇರಿಕೊಂಡಿದೆ. ಇದಕ್ಕೆ ಕಾರಣ, ನಾಪತ್ತೆಯಾಗಿರುವ ಬಾಕ್ಸರ್‌ಗಳು ಪಾಕಿಸ್ಥಾನದವರು. ಇವರೆಂದರೆ ಸುಲೇಮಾನ್ ಬಲೂಚ್ ಮತ್ತು ನಜೀರುಲ್ಲ.
ಪಾಕಿಸ್ಥಾನಕ್ಕೂ ಜಿಹಾದಿ ಭಯೋತ್ಪಾದನೆಗೂ ಬಲವಾದ ಸಂಪರ್ಕವಿರುವುದರಿಂದ ಅಧಿಕಾರಿಗಳು ಆತಂಕಗೊಂಡಿದ್ದಾರೆ. ಆದ್ದರಿಂದ ನಾಪತ್ತೆಯಾಗಿರುವ ಬಾಕ್ಸರ್‌ಗಳ ಪತ್ತೆಗಾಗಿ ಶೋಧ ಶುರುವಾಗಿದೆ. ಇದಕ್ಕಾಗಿ ಪಾಕಿಸ್ಥಾನ ಒಲಿಂಪಿಕ್ಸ್ ಸಂಸ್ಥೆಯೂ ನಾಲ್ವರು ಸದಸ್ಯರ ತನಿಖಾ ಸಮಿತಿ ನೇಮಿಸಿದೆ.
ಇನ್ನೂ ವಿಚಿತ್ರವೆಂದರೆ, ನಾಪತ್ತೆಯಾದವರ ಪಾಸ್‌ಪೋರ್ಟ್ ಸೇರಿದಂತೆ ಇತರ ಎಲ್ಲ ದಾಖಲೆಗಳೂ ಪಾಕಿಸ್ಥಾನ ಕಳುಹಿಸಿದ ಅಧಿಕಾರಿಗಳ ಬಳಿಯೇ ಇದೆ. ಇನ್ನೇನು ಈ ಬಾಕ್ಸರ್‌ಗಳು ತವರಿಗೆ ಮರಳಲು ಕೇವಲ ಎರಡು ಗಂಟೆ ಬಾಕಿಯಿರುವಾಗ ಕಣ್ಮರೆಯಾಗಿದ್ದಾರೆ!
ಇದೇ ಮೊದಲಿಲ್ಲ:
ಪಾಕಿಸ್ಥಾನದ ಕ್ರೀಡಾಪಟುಗಳು ಹೀಗೆ ತಪ್ಪಿಸಿಕೊಳ್ಳುವುದು ಹೊಸತೇನಲ್ಲ. ಇದೇ ವರ್ಷ ಜೂನ್‌ನಲ್ಲಿ ಹಂಗೇರಿಯ ಬುಡಾಪೆಸ್ಟ್‌ನಲ್ಲಿ ನಡೆದ ಫಿನಾ ವಿಶ್ವ ಈಜುಕೂಟಕ್ಕೆ ಪಾಕ್‌ನ ಈಜುಪಟು ಒಬ್ಬರು ತೆರಳಿದ್ದರು. ಫೈಝನ್ ಅಕ್ಬರ್ ಹೆಸರಿನ ಅವರು ಬುಡಾಪೆಸ್ಟ್ ತಲುಪಿದ ಕೆಲವೇ ಗಂಟೆಗಳಲ್ಲಿ ಪಾಸ್‌ಪೋರ್ಟ್ ಸಮೇತ ಪರಾರಿಯಾಗಿದ್ದರು. ಇದುವರೆಗೆ ಅವರನ್ನು ಹುಡುಕಲು ಸಾಧ್ಯವಾಗಿಲ್ಲ!