ಉಡುಪಿ: ರಾಜ್ಯದ ಕೋವಿಡ್-19 ಸೋಂಕಿತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಉಡುಪಿ ಜಿಲ್ಲೆಯಲ್ಲಿ ಇಂದು ಕೂಡಾ ಸೋಂಕಿತರು ಪತ್ತೆಯಾಗಿದ್ದಾರೆ. ಸೋಮವಾರ ಜಿಲ್ಲೆಯಲ್ಲಿ ಇಬ್ಬರಿಗೆ ಕೋವಿಡ್ -19 ಸೋಂಕು ದೃಢವಾಗಿದೆ.
ಇಂದಿನ 2 ಹೊಸ ಪ್ರಕರಣಗಳ ಕಾರಣದಿಂದ ಜಿಲ್ಲೆಯ ಒಟ್ಟು ಕೋವಿಡ್-19 ಸೋಂಕಿತರ ಸಂಖ್ಯೆ 1028 ಕ್ಕೆ ಏರಿಕೆಯಾಗಿದೆ. ಇಂದಿನ ಸೋಂಕಿತರ ಪೈಕಿ 51 ವರ್ಷದ ಮಹಿಳೆ ಮಹಾರಾಷ್ಟ್ರದಿಂದ ಬಂದಿದ್ದರೆ, 29 ವರ್ಷದ ಮಹಿಳಿಗೆ ಸೋಂಕಿತ ಸಂಖ್ಯೆ 5451ರ ಸಂಪರ್ಕದಿಂದ ಸೋಂಕು ತಾಗಿದೆ ಎಂದು ವರದಿಯಾಗಿದೆ.
ಜಿಲ್ಲೆಯಲ್ಲಿ ಇಂದು 23 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 736 ಜನರು ಕೋವಿಡ್-19 ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಮರಳಿದ್ದಾರೆ.
ಇದುವರೆಗೆ ಜಿಲ್ಲೆಯಲ್ಲಿ ಓರ್ವ ಸೋಂಕಿತ ಮರಣ ಹೊಂದಿದ್ದಾರೆ. ಸದ್ಯ ಜಿಲ್ಲೆಯಲ್ಲಿ 291 ಸಕ್ರಿಯ ಪ್ರಕರಣಗಳಿದ್ದು, ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಓರ್ವ ಸೋಂಕಿತ ( ಸಂಖ್ಯೆ 5452) ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ 12,915 ಮಂದಿಯ ಗಂಟಲು ದ್ರವ ಮಾದರಿ ಸಂಗ್ರಹಿಸಿದ್ದು, ಅದರಲ್ಲಿ 11,835 ಮಂದಿಗೆ ವರದಿ ನೆಗೆಟಿವ್ ಬಂದಿದೆ. 1028 ಮಂದಿಯ ವರದಿ ಪಾಸಿಟಿವ್ ಆಗಿದೆ. ಇನ್ನು 52 ಸ್ಯಾಂಪಲ್ ವರದಿ ಬರಬೇಕಿದೆ.
ರಾಜ್ಯದಲ್ಲಿ ಇಂದು 213 ಜನರಿಗೆ ಕೋವಿಡ್ ಸೋಂಕು ಪತ್ತೆಯಾಗಿದ್ದು, ಒಟ್ಟು ಕೋವಿಡ್-19 ಸೋಂಕಿತರ ಸಂಖ್ಯೆ 7213ಕ್ಕೆ ಏರಿಕೆಯಾಗಿದೆ. ಇದುವರೆಗೆ ಒಟ್ಟು 2987 ಮಂದಿ ಚಿಕಿತ್ಸೆ ಮುಗಿಸಿ ಬಿಡುಗಡೆಯಾಗಿದ್ದಾರೆ. ಇಂದು ರಾಜ್ಯದಲ್ಲಿ2 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಇದುವರೆಗೆ ಕೋವಿಡ್ 19 ಸೋಂಕಿನ ಕಾರಣದಿಂದ ರಾಜ್ಯದಲ್ಲಿ 88 ಮಂದಿ ಮೃತರಾಗಿದ್ದಾರೆ. ಮೂವರು ಸೋಂಕಿತರು ಕೋವಿಡ್ ಅಲ್ಲದ ಕಾರಣದಿಂದ ಸಾವನ್ನಪ್ಪಿದ್ದಾರೆ.