ಮುಂಬೈ:ಕೋವಿಡ್ 19 ವೈರಸ್ ಮಹಾಮಾರಿಗೆ ಮುಂಬೈನ ಇಬ್ಬರು ಪೊಲೀಸರು ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ಮುಂಬೈ ನಗರ ಪೊಲೀಸ್ ವಲಯದಲ್ಲಿ ಆತಂಕ ಮೂಡಿಸಿದೆ ಎಂದು ವರದಿ ತಿಳಿಸಿದೆ. ಹಿರಿಯ ಪೊಲೀಸ್ ಅಧಿಕಾರಿಗಳ ವರದಿ ಪ್ರಕಾರ, ಮುಂಬೈ ಪೊಲೀಸ್ ವಲಯದಲ್ಲಿ ಕೋವಿಡ್ 19 ವೈರಸ್ ಗೆ ಸಾವನ್ನಪ್ಪಿದ ಮೊದಲ ಪ್ರಕರಣ ಇದಾಗಿದೆ ಎಂದು ತಿಳಿಸಿದ್ದಾರೆ.
ಹೆಡ್ ಕಾನ್ಸ್ ಟೇಬಲ್ ಸಂದೀಪ್ ಸುರ್ವೇ (52ವರ್ಷ) ಹಾಗೂ ಎಚ್ ಸಿ ಚಂದ್ರಕಾಂತ್ ಪೆಂಡುರ್ಕರ್ (57) ಕೋವಿಡ್ 19 ವೈರಸ್ ನಿಂದ ಸಾವಿಗೀಡಾಗಿದ್ದಾರೆ. ಪೆಂಡುರ್ಕರ್ ಅವರು ಸಾಂತಾಕ್ರೂಝ್ ನ ವಾಕೋಲಾ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ವರ್ಲಿಯ ಪ್ರೇಮ್ ನಗರ್ ಕಾಲೋನಿಯ ನಿವಾಸಿಯಾಗಿದ್ದರು ಎಂದು ವರದಿ ಹೇಳಿದೆ.
ಏಪ್ರಿಲ್ 22ರಂದು ದೇಹದಲ್ಲಿ ಸುಸ್ತು ಕಾಣಿಸಿಕೊಳ್ಳುತ್ತಿದೆ ಎಂದು ಹೇಳಿ ನಾಯರ್ ಆಸ್ಪತ್ರೆಗೆ ದಾಖಲಾಗಿದ್ದರು, ಈ ವೇಳೆ ಕೋವಿಡ್ 19 ವೈರಸ್ ತಗುಲಿರುವುದು ಪತ್ತೆಯಾಗಿತ್ತು. ನಂತರ ಅವರ ಆರೋಗ್ಯ ಸ್ಥಿತಿ ಹದಗೆಡುತ್ತಾ ಹೋಗಿದ್ದು, ವೆಂಟಿಲೇಟರ್ ನಲ್ಲಿ ಇಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈ ಪೊಲೀಸ್ ಪಡೆ ಇಬ್ಬರು ಧೈರ್ಯವಂತ ಪೊಲೀಸರನ್ನು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ಮತ್ತು ಗೆಳೆಯರ ವರ್ಗಕ್ಕೆ ಸಾಂತ್ವನ ಹೇಳುವುದಾಗಿ ಮುಂಬೈ ಪೊಲೀಸ್ ಕಮಿಷನರ್ ಪರಂ ಬೀರ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಈ ಇಬ್ಬರು ಪೊಲೀಸರಿಗೆ ಎಲ್ಲಿ ಮತ್ತು ಹೇಗೆ ಕೋವಿಡ್ 19 ವೈರಸ್ ತಗುಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅವರ ನಿಕಟವರ್ತಿಗಳನ್ನು ಗುರುತಿಸುತ್ತಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೃತ ಪೊಲೀಸರ ಸಂಪರ್ಕದಲ್ಲಿದ್ದ ಹಾಗೂ ಅವರ ಕುಟುಂಬಸ್ಥರನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈವರೆಗೆ ಪರೀಕ್ಷೆಗೊಳಪಟ್ಟ ಕನಿಷ್ಟ 40 ಮಂದಿ ಪೊಲೀಸರಿಗೆ ಕೋವಿಡ್ 19 ಪಾಸಿಟಿವ್ ವರದಿ ಬಂದಿದೆ. ಇವರನ್ನೆಲ್ಲಾ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸ್ ಇಲಾಖೆಯಲ್ಲಿ ಸುಮಾರು 95 ಮಂದಿಗೆ ಕೋವಿಡ್ 19 ವೈರಸ್ ತಗುಲಿರುವುದಾಗಿ ವರದಿ ಹೇಳಿದೆ.