Advertisement

Lok Sabha Elections: ಕಾಂಗ್ರೆಸ್‌ನಿಂದ ಮತ್ತೆರಡು ಗ್ಯಾರಂಟಿ ಘೋಷಣೆ

09:51 PM Mar 16, 2024 | Team Udayavani |

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯನ್ನು ಎದುರಿಸಲು ಸಜ್ಜಾಗುತ್ತಿರುವ ಕಾಂಗ್ರೆಸ್‌ ಪಕ್ಷ ಶ್ರಮಿಕ್‌ ನ್ಯಾಯ್‌ ಮತ್ತು ಹಿಸ್ಸೇದಾರಿ ನ್ಯಾಯ್‌ ಎಂಬ ಮತ್ತೆರಡು ಗ್ಯಾರಂಟಿಗಳನ್ನು ಘೋಷಿಸಿದೆ.

Advertisement

ಹಿಸ್ಸೇದಾರಿ ನ್ಯಾಯ್‌ ಗ್ಯಾರಂಟಿಯ ಭಾಗವಾಗಿ ಸಮಗ್ರ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಸಮೀಕ್ಷೆ ನಡೆಸುವ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡ, ಇತರ ಹಿಂದುಳಿದ ವರ್ಗಗಳಿಗೆ ಶೇ.50ರ ಮೀಸಲಾತಿ ಮಿತಿಯನ್ನು ಹೆಚ್ಚಳ ಮಾಡಲು ಸಂವಿಧಾನ ತಿದ್ದುಪಡಿ ಮಾಡುವುದಾಗಿ ಪ್ರಕಟಿಸಿದೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ವಿಶೇಷ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾರ್ಮಿಕರ, ಬಡವರ ಪರವಾಗಿದ್ದ ಕಾನೂನು, ಸಂಹಿತೆಗಳನ್ನು ಸಡಿಲಗೊಳಿಸಿದೆ. ಕಾರ್ಮಿಕರ, ಬಡವರ ಕಲ್ಯಾಣ ಯೋಜನೆಗಳನ್ನು ದುರ್ಬಲಗೊಳಿಸಿದೆ.

ಈ ಹಿನ್ನೆಲೆಯಲ್ಲಿ ಕಾರ್ಮಿಕರ ಕಲ್ಯಾಣ ಮತ್ತು ಅವರಿಗೆ ಶಕ್ತಿ ತುಂಬಲು ಕಾಂಗ್ರೆಸ್‌ ಪಕ್ಷ ಶ್ರಮಿಕ್‌ ನ್ಯಾಯ್‌ ಗ್ಯಾರಂಟಿ ಮತ್ತು ಬಡವ ಮತ್ತು ಶ್ರೀಮಂತರ ನಡುವೆ ಹೆಚ್ಚುತ್ತಿರುವ ಕಂದಕವನ್ನು ಕಡಿಮೆ ಮಾಡಲು ಹಿಸ್ಸೇದಾರಿ ನ್ಯಾಯ್‌ ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸುತ್ತೇವೆ ಎಂದು ಅವರು ಭರವಸೆ ನೀಡಿದರು.

ಹಿಸ್ಸೇದಾರಿ ನ್ಯಾಯ್‌ ಗ್ಯಾರಂಟಿ:
ಈ ಗ್ಯಾರಂಟಿಯಡಿ ಜನಸಂಖ್ಯೆಯ ಸಮಗ್ರ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಸಮೀಕ್ಷೆ, ದೇಶದ ಸಂಪತ್ತಿನಲ್ಲಿನ ಪಾಲು, ಆಡಳಿತದ ಸಂಸ್ಥೆಗಳಲ್ಲಿ ಎಲ್ಲ ಜಾತಿ ಮತ್ತು ಸಮುದಾಯಗಳ ಪ್ರಾತಿನಿಧ್ಯವನ್ನು ತಿಳಿದುಕೊಳ್ಳಲಾಗುವುದು ಮತ್ತು ದೃಢವಾದ ಕ್ರಿಯಾ ನಿಯಮಗಳನ್ನು ರೂಪಿಸುವ ಗ್ಯಾರಂಟಿಯನ್ನು ಕಾಂಗ್ರೆಸ್‌ ಪಕ್ಷ ನೀಡಲಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

Advertisement

ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಇರುವ ಶೇ.50ರ ಮೀಸಲಾತಿಯ ಮಿತಿಯನ್ನು ಹೆಚ್ಚಿಸಲು ಸಂವಿಧಾನಕ್ಕೆ ತಿದ್ದುಪಡಿ ತರಲಾಗುವುದು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿಶೇಷ ಘಟಕ ಯೋಜನೆಯನ್ನು ಪುನಶ್ಚೇತನಗೊಳಿಸಿ ಆಯವ್ಯಯದಲ್ಲಿ ನಿಗದಿತ ಪ್ರಮಾಣದ ಅನುದಾನವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಿಡಲಾಗುವುದು ಎಂದು ಖರ್ಗೆ ಭರವಸೆ ನೀಡಿದ್ದಾರೆ.

ಆದಿವಾಸಿಗಳ ಅರಣ್ಯ ಹಕ್ಕುಗಳನ್ನು ರಕ್ಷಿಸಲಾಗುವುದು. ಒಂದು ವರ್ಷದೊಳಗೆ ಬಾಕಿ ಇರುವ ಅರಣ್ಯ ಹಕ್ಕು ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗುವುದು ಮತ್ತು ಆರು ತಿಂಗಳೊಳಗೆ ತಿರಸ್ಕರಿಸಿದ ಪ್ರಕರಣಗಳ ಮರುಪರಿಶೀಲನೆಗೆ ಪಾರದರ್ಶಕ ಪ್ರಕ್ರಿಯೆ ಜಾರಿಗೊಳಿಸಲಾಗುವುದು. ಕಿರು ಅರಣ್ಯ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಲಾಗುವುದು ಮತ್ತು ಅರಣ್ಯ ಸಂರಕ್ಷಣ ತಿದ್ದುಪಡಿ ಕಾಯ್ದೆ ಮತ್ತು ಭೂಸ್ವಾಧೀನ ಕಾಯ್ದೆಗಳಿಗೆ ಮಾಡಿರುವ ಬುಡಕಟ್ಟು ವಿರೋಧಿ ತಿದ್ದುಪಡಿಗಳನ್ನು ಹಿಂತೆಗೆದುಕೊಳ್ಳಲಾಗುವುದು. ಆದಿವಾಸಿಗಳ ಸಾಂಸ್ಕೃತಿಕ ಹಕ್ಕುಗಳ ರಕ್ಷಣೆ ಮತ್ತು ಸ್ವಯಂ ಆಡಳಿತ, ಆದಿವಾಸಿಗಳ ದೊಡ್ಡ ಸಾಮಾಜಿಕ ಗುಂಪುಗಳಿರುವ ಜನವಸತಿ ಪ್ರದೇಶವನ್ನು ಪರಿಶಿಷ್ಟ ಪ್ರದೇಶಗಳೆಂದು ಘೋಷಣೆ ಮಾಡುವುದಾಗಿ ಮಲ್ಲಿಕಾರ್ಜುನ ಖರ್ಗೆ ಭರವಸೆ ನೀಡಿದ್ದಾರೆ.

ಶ್ರಮಿಕ್‌ ನ್ಯಾಯ್‌ ಗ್ಯಾರಂಟಿ:
ಈ ಗ್ಯಾರಂಟಿಯಡಿ ಸಾರ್ವತ್ರಿಕ ಆರೋಗ್ಯ ಕಾಳಜಿ, ಉಚಿತ ಔಷಧ, ಚಿಕಿತ್ಸೆ, ಅಗತ್ಯ ಪರೀಕ್ಷೆ, ಚೇತರಿಕೆ ಕಾಳಜಿ ಮತ್ತು ಸರ್ಜರಿ ವ್ಯವಸ್ಥೆ ಕಲ್ಪಿಸುವ ಆರೋಗ್ಯದ ಹಕ್ಕು, ರಾಷ್ಟ್ರೀಯ ಕನಿಷ್ಠ ಕೂಲಿಯಾಗಿ ದಿನಕ್ಕೆ 400 ರೂ ನಿಗದಿ ಮತ್ತು ನರೇಗಾ ಯೋಜನೆಯಡಿ ದೇಶವ್ಯಾಪಿ ದಿನಕ್ಕೆ 400 ರೂ.ಗಳನ್ನೇ ಕಡ್ಡಾಯಗೊಳಿಸುವುದು, ನಗರ ಪ್ರದೇಶಕ್ಕೂ ಉದ್ಯೋಗ ಖಾತ್ರಿ ಕಾಯ್ದೆಯನ್ನು ರೂಪಿಸಿ ಸಾರ್ವಜನಿಕ ಮೂಲ ಸೌಕರ್ಯದ ಅಭಿವೃದ್ಧಿ, ಹವಾಮಾನ ಬದಲಾವಣೆಯನ್ನು ಎದುರಿಸಲು ನಗರಗಳನ್ನು ಸಜ್ಜುಗೊಳಿಸುವ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎಐಸಿಸಿ ಅಧ್ಯಕ್ಷರು ತಿಳಿಸಿದರು.

ಎಲ್ಲ ಅಸಂಘಟಿತ ಕಾರ್ಮಿಕರಿಗೆ ಜೀವ ವಿಮೆ ಮತ್ತು ಅಪಘಾತ ವಿಮೆಗಳನ್ನು ಕಲ್ಪಿಸುವ ಸಮಗ್ರ ಸಾಮಾಜಿಕ ಭದ್ರತೆಯ ಗ್ಯಾರಂಟಿ, ಮೋದಿ ಸರ್ಕಾರ ಸಂಸತ್ತಿನಲ್ಲಿ ಪಾಸ್‌ ಮಾಡಿರುವ ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳ ಮರು ಪರಿಶೀಲನೆ ಮತ್ತು ಕಾರ್ಮಿಕರ ಹಕ್ಕನ್ನು ಬಲಿಷ್ಠಗೊಳಿಸಲು ಸೂಕ್ತ ತಿದ್ದುಪಡಿ ಮಾಡಲಾಗುವುದು ಎಂದು ಖರ್ಗೆ ಹೇಳಿದರು.

ಕಾಂಗ್ರೆಸ್‌ ಈಗಾಗಲೇ ಕಿಸಾನ್‌ ನ್ಯಾಯ್‌, ಯುವ ನ್ಯಾಯ್‌ ಮತ್ತು ಮಹಿಳಾ ನ್ಯಾಯ್‌ನಡಿ ತಲಾ ಐದರಂತೆ ಹದಿನೈದು ಗ್ಯಾರಂಟಿಗಳನ್ನು ಪ್ರಕಟಿಸಿದೆ. ಇದೀಗ ಶ್ರಮಿಕರನ್ನು ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಇತರ ಹಿಂದುಳಿದ ವರ್ಗದವರನ್ನು ಗಮನದಲ್ಲಿರಿಸಿಕೊಂಡು ಶ್ರಮಿಕ್‌ ನ್ಯಾಯ್‌ ಮತ್ತು ಹಿಸ್ಸೇದಾರಿ ನ್ಯಾಯ್‌ನಡಿ ತಲಾ ಐದರಂತೆ ಗ್ಯಾರಂಟಿ ಪ್ರಕಟಿಸಿದ್ದು ತನ್ಮೂಲಕ ಒಟ್ಟು 25 ಗ್ಯಾರಂಟಿಗಳನ್ನು ಘೋಷಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌, ಇಂಧನ ಸಚಿವ ಕೆ. ಜೆ. ಜಾರ್ಜ್‌, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಇತರರಿದ್ದರು.

ಶ್ರಮಿಕ್‌ ನ್ಯಾಯ್‌ ಗ್ಯಾರಂಟಿಗಳು
-ಆರೋಗ್ಯದ ಹಕ್ಕು
-ದಿನಕ್ಕೆ 400 ರೂ ಕನಿಷ್ಠ ಕೂಲಿ
-ನಗರ ಪ್ರದೇಶಕ್ಕೂ ಉದ್ಯೋಗ ಖಾತ್ರಿ ಯೋಜನೆ
-ಎಲ್ಲ ಅಸಂಘಟಿತ ಕಾರ್ಮಿಕರಿಗೆ ಸಮಗ್ರ ಆರೋಗ್ಯ ಭದ್ರತೆ
-ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳ ಪುನರ್‌ ಪರಿಶೀಲನೆ
-ಸರ್ಕಾರದಲ್ಲಿ ಗುತ್ತಿಗೆ ಸಿಬ್ಬಂದಿ ನೇಮಕಕ್ಕೆ ತಡೆ, ಖಾಸಗಿ ವಲಯದಲ್ಲಿ ಗುತ್ತಿಗೆ ಉದ್ಯೋಗಿಗಳಿಗೆ ಸಾಮಾಜಿಕ ಭದ್ರತೆ

ಹಿಸ್ಸೆದಾರಿ ನ್ಯಾಯ್‌ ಗ್ಯಾರಂಟಿಗಳು
-ಸಮಗ್ರ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಸಮೀಕ್ಷೆ
-ಶೇ. 50 ಮೀಸಲಾತಿ ಮಿತಿ ಸಡಿಲಿಕೆ
-ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿಶೇಷ ಘಟಕ ಯೋಜನೆ
-ಆದಿವಾಸಿ ಹಕ್ಕುಗಳ ರಕ್ಷಣೆ, ಕಿರು ಅರಣ್ಯ ಉತ್ಪನ್ನಗಳಿಗೂ ಕನಿಷ್ಠ ಬೆಂಬಲ ಬೆಲೆ
-ಆದಿವಾಸಿಗಳ ಸಾಂಸ್ಕೃತಿಕ ಹಕ್ಕುಗಳ ರಕ್ಷಣೆ ಮತ್ತು ಸ್ವಯಂ ಆಡಳಿತ

Advertisement

Udayavani is now on Telegram. Click here to join our channel and stay updated with the latest news.

Next