ಬೆಂಗಳೂರು: ಅತ್ತಿಬೆಲೆಯಲ್ಲಿ ಪಟಾಕಿ ಗೋದಾಮಿನಲ್ಲಿ ಸ್ಫೋಟ ಸಂಭವಿಸಿ ಹಲವರು ಪ್ರಾಣ ಕಳೆದುಕೊಂಡ ಭೀಕರ ಅವಘಡ ನಡೆದ ಬೆನ್ನಲ್ಲೇ ನಗರದಲ್ಲಿ ಇನ್ನೆರಡು ಅಗ್ನಿ ಅವಘಡಗಳು ಸಂಭವಿಸಿದ್ದು, ಓರ್ವ ವ್ಯಕ್ತಿ ಗಾಯಗೊಂಡಿದ್ದಾರೆ.
ಪೈಪ್ಲೈನ್ ರಸ್ತೆಯ ಚೋಳರಪಾಳ್ಯದಲ್ಲಿ ಅಗರಬತ್ತಿ ಕಾರ್ಖಾನೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿದ್ದು, ಅಗ್ನಿ ಶಾಮಕದಳದ ವಾಹನಗಳು ಸ್ಥಳಕ್ಕೆ ಆಗಮಿಸಿದ್ದು ಬೆಂಕಿಯನ್ನು ನಿಯಂತ್ರಣಕ್ಕೆ ತಂದಿವೆ. ರವಿಕುಮಾರ್ ಎಂಬ ವ್ಯಕ್ತಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮನೆಗಳಲ್ಲೇ ಅಗರಬತ್ತಿ ತಯಾರಿಸಲಾಗುತ್ತಿದ್ದು ಏಕಾಏಕಿ ಕಾಣಿಸಿಕೊಂಡ ಬೆಂಕಿಯಿಂದಾಗಿ ರಾಸಾಯನಿಕಗಳಿಗೆ ಬೆಂಕಿ ಸೋಂಕಿ ರಸ್ತೆಗೂ ಬೆಂಕಿ ಆವರಿಸಿಕೊಂಡಿದೆ. ಈ ವೇಳೆ ಬೆಂಕಿಯ ಕೆನ್ನಾಲಿಗೆಗೆ ಮನೆ ಮುಂದೆ ನಿಲ್ಲಿಸಿದ್ದ ಎಂಟು ಬೈಕ್ಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ.ವಿಜಯನಗರ ಠಾಣಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ಲಗ್ಗೆರೆಯಲ್ಲಿ ಟ್ರಾನ್ಸ್ ಫಾರ್ಮರ್ ಸ್ಫೋಟ
ಲಗ್ಗೆರೆಯಲ್ಲಿ ಟ್ರಾನ್ಸ್ ಫಾರ್ಮರ್ ಗೆ ಬೆಂಕಿ ಹೊತ್ತಿಕೊಂಡು ಅಗ್ನಿ ಅವಘಡ ಸಂಭವಿಸಿದೆ. ಗುಜರಿ ಅಂಗಡಿಗೆ ಬೆಂಕಿ ವ್ಯಾಪಿಸಿ ಸಂಪೂರ್ಣ ಭಸ್ಮವಾಗಿದೆ. ಸ್ಥಳದಲ್ಲೇ ವೃದ್ದಾಶ್ರಮವೊಂದಿದ್ದು, ಅಲ್ಲಿದವರನ್ನು ಮುಂಜಾಗೃತಾ ಕ್ರಮವಾಗಿ ಸ್ಥಳಾಂತರಿಸಲಾಗಿದೆ. ಬೆಂಕಿ ಹಲವು ಮನೆಗಳಿಗೂ ತಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಅಗ್ನಿ ಶಾಮಕ ದಳದ ಸಿಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ.