ಬಾಗಲಕೋಟೆ: ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ನಿಯಂತ್ರಣದ ಹಂತದಲ್ಲಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಾ. 24ರಿಂದ ಮೇ 3ರವರೆಗೆ ಒಟ್ಟು 40 ದಿನಗಳ ಲಾಕ್‌ಡೌನ್‌ನಿಂದಾಗಿ ಕೋವಿಡ್ ಹರಡುವಿಕೆ ನಿಯಂತ್ರಿಸಲು ಸಾಧ್ಯವಾಗಿದೆ ಎಂದು ಹೇಳಿದರು.
ಮರಳಿದ 1761 ಕಾರ್ಮಿಕರು: ಮಂಗಳೂರು ಮತ್ತು ಉಡುಪಿ ಜಿಲ್ಲೆಯಿಂದ 63 ಬಸ್ ಗಳ ಮೂಲಕ ಜಿಲ್ಲೆಯ ಒಟ್ಟು 1761 ಕಾರ್ಮಿಕರು ಬಂದಿದ್ದು, ಅವರೆಲ್ಲರನ್ನು ಹೋಮ್ ಕ್ವಾರಂಟೈನ್ ಮಾಡುವ ಮೂಲಕ ನಿಗಾ ವಹಿಸಬೇಕು. ಬಾದಾಮಿ ಮತ್ತು ಹುನಗುಂದಕ್ಕೆ ಇನ್ನು ಹೆಚ್ಚು ಜನ ಕಾರ್ಮಿಕರು ಬರಲಿದ್ದಾರೆ. ಅಲ್ಲದೇ ರಾಜಸ್ಥಾನದಿಂದ 14ಜನ ವಿದ್ಯಾರ್ಥಿಗಳಶನಿವಾರ ಜಿಲ್ಲೆಗೆ ಆಗಮಿಸಲಿದ್ದಾರೆ. ಹೊರ ರಾಜ್ಯದಿಂದ ಬಂದವರನ್ನು ಇನ್‌ಸ್ಟಿ ಟ್ಯೂಟ್‌ನಲ್ಲಿ ಕ್ವಾರಂಟೈನ್ ಮಾಡಿ, ದಿನನಿತ್ಯ ಆರೋಗ್ಯ ತಪಾಸಣೆಗೆ ಒಳಪಡಿಸಬೇಕು. ಚೆಕ್‌ಪೋಸ್ಟ್‌ಗಳು ಬಿಗಿಗೊಳಿಸಿ, ಕಾರ್ಯಪಡೆ ಚುರುಕುಗೊಳಿಸಲು ಸೂಚಿಸಿದರು.
1980 ಕ್ಷೌರಿಕರಿಗೆ ಕಿಟ್: ಜಿಲ್ಲೆಯ ಹಡಪದ ಸಮಾಜದ 1980 ಜನರಿಗೆ ವಿಶೇಷ ಕಿಟ್ ವಿತರಿಸಲಾಗಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಏಪ್ರಿಲ್ ಮತ್ತು ಮೇ ಮಾಹೆಯ ಎರಡು ತಿಂಗಳ ಆಹಾರಧಾನ್ಯವನ್ನು ಮೇ ತಿಂಗಳಲ್ಲಿ ಅಂತ್ಯೋದಯ ಮತ್ತು ಬಿಪಿಎಲ್ ಪಡಿತರದಾರರಿಗೆ 1,42,690 ಕ್ವಿಂಟಲ್ ಅಕ್ಕಿ ಮತ್ತು 4127 ಕ್ವಿಂಟಲ್ ತೊಗರಿ ಬೇಳೆ ಉಚಿತವಾಗಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ|ಕೆ.ರಾಜೇಂದ್ರ ಮಾತನಾಡಿ, ಜಿಲ್ಲೆಯಲ್ಲಿ ಸದ್ಯ 4 ಚೆಕ್‌ಪೋಸ್ಟ್ ಗಳು ಕಾರ್ಯನಿರ್ವ ಹಿಸುತ್ತಿದ್ದು, 1.37 ಲಕ್ಷ ಜನರನ್ನು ತಪಾಸಣೆ, 35,567 ವಾಹನಗಳ ತಪಾಸಣೆ ಮಾಡಲಾಗಿದೆ. ಮಂಗಳೂರು ಮತ್ತು ಉಡುಪಿಯಿಂದ ಕಾರ್ಮಿಕರು ಬಂದಿದ್ದು, ಜಿಪಂ ಸಿಇಒ ನೇತೃತ್ವದಲ್ಲಿ ರಚಿಸಲಾದ ಗ್ರಾಮೀಣ ಕಾರ್ಯಪಡೆಯ ಮೂಲಕ ಜಿಲ್ಲೆಗೆ ಆಗಮಿಸಿದ ಕಾರ್ಮಿಕರನ್ನು ಹೋಮ್ ಕ್ವಾರಂಟೈನ್‌ಗೆ ಒಳಪಡಿಸಿ ನಿಗಾ ವಹಿಸುವ ಕಾರ್ಯ ಮಾಡುತ್ತಿದ್ದಾರೆ. ಬೇರೆ ಜಿಲ್ಲೆಯಿಂದ ಬಂದ ಕಾರ್ಮಿಕರು 28 ದಿನ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಆದರೂ ಸಹ ಬಾಗಲಕೋಟೆಗೆ ಬಂದಾಗಲೂ ತಪಾಸಣೆ ಮಾಡಲಾಗುತ್ತಿದೆ ಎಂದರು.
306 ಸ್ಯಾಂಪಲ್ ವರದಿ ಬಾಕಿ: ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೋವಿಡ್ ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿದ್ದು, ಇಲ್ಲಿಯವರೆಗೆ ಒಟ್ಟು 205 ಕರೆಗಳು ಬಂದಿವೆ. ಅವೆಲ್ಲವುಗಳನ್ನು ಬಗೆಹರಿಸಲಾಗಿದೆ. ಕೋವಿಡ್‌ಗೆ ಸಿಬ್ಬಂದಿ ಕೊರತೆ ಇಲ್ಲ. ಜಿಲ್ಲೆಯಿಂದ ಈವರೆಗೆ 2874 ಸ್ಯಾಂಪಲ್ ಕಳುಹಿಸಲಾಗಿದೆ. 306 ಸ್ಯಾಂಪಲ್ ವರದಿ ಬರಬೇಕಾಗಿದೆ. 29 ಪಾಜಿಟಿವ್ ಕೇಸ್ ಬಂದಿವೆ. 14 ಫೀವರ್ ಕ್ಲಿನಿಕ್, 1 ಮೊಬೈಲ್ ಪೀವರ್ ಕ್ಲಿನಿಕ್, 22 ಕ್ವಾರಂಟೈನ್ ಸೆಂಟರ್ ಇವೆ ಎಂದು ತಿಳಿಸಿದರು.
85ಸಾವಿರ ಮಾನವ ದಿನ ಸೃಷ್ಟಿ: ಜಿಪಂ ಸಿಇಒ ಗಂಗೂಬಾಯಿ ಮಾನಕರ ಮಾತನಾಡಿ, ಉದ್ಯೋಗ ಖಾತರಿ ಯೋಜನೆಯಡಿ ಈ ಬಾರಿ 42 ಲಕ್ಷ ಮಾನವ ದಿನದ ಗುರಿ ಹೊಂದಿದ್ದು, ಈವರೆಗೆ 85 ಸಾವಿರ ಮಾನವ ದಿನ ಮಾಡಲಾಗಿದೆ. ಕಳೆದ ವರ್ಷ ಶೇ.100 ಸಾಧನೆ ಮಾಡಲಾಗಿದೆ. ಮಾಸ್ಕ್ ಮತ್ತು ಸ್ಯಾನಿಟೈಜರ್ ನೀಡಲಾಗುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತಿದೆ. ಉದ್ಯೋಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.
ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಇದ್ದರು.