ಶ್ರೀನಗರ:ಜಮ್ಮು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಯ ಎನ್ ಕೌಂಟರ್ ಗೆ ಪಾಕಿಸ್ತಾನ ಬೆಂಬಲಿತ ಲಷ್ಕರ್ ಎ ತಯ್ಬಾ ಸಂಘಟನೆಯ ಇಬ್ಬರು ಉಗ್ರರು ಹತ್ಯೆಗೀಡಾಗಿರುವ ಘಟನೆ ಮಂಗಳವಾರ (ಜನವರಿ 04) ನಡೆದಿದೆ.
ಇದನ್ನೂ ಓದಿ:ರಾಮನಗರದಲ್ಲಿ ನನ್ನ ವಿರುದ್ಧ ಪ್ರತಿಭಟನೆ ನಡೆಸುವವರಿಗೆ ಅಭಿನಂದನೆ: ಡಿಕೆ ಸುರೇಶ್
ಇಬ್ಬರು ಸ್ಥಳೀಯರಾಗಿದ್ದು, ಲಷ್ಕರ್ ಉಗ್ರಗಾಮಿ ಸಂಘಟನೆಗೆ ಸೇರ್ಪಡೆಗೊಂಡಿದ್ದರು ಎಂದು ಕಾಶ್ಮೀರದ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ವಿಜಯ್ ಕುಮಾರ್ ತಿಳಿಸಿದ್ದಾರೆ. ಇಬ್ಬರು ಉಗ್ರರು ಹಲವಾರು ದಾಳಿಯಲ್ಲಿ ಶಾಮೀಲಾಗಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಕೂಂಬಿಂಗ್ ಕಾರ್ಯಾಚರಣೆ ಸಂದರ್ಭದಲ್ಲಿ ಉಗ್ರರ ಬಳಿ ಶರಣಾಗಲು ಸೂಚಿಸಲಾಗಿತ್ತು. ಆದರೆ ಅವರು ಭದ್ರತಾ ಪಡೆಯತ್ತ ಗುಂಡಿನ ದಾಳಿ ನಡೆಸಿದ್ದು, ಪ್ರತಿದಾಳಿಯಲ್ಲಿ ಇಬ್ಬರು ಉಗ್ರರು ಸಾವನ್ನಪ್ಪಿರುವುದಾಗಿ ವರದಿ ವಿವರಿಸಿದೆ.
ಖಚಿತ ಮಾಹಿತಿ ಮೇರೆಗೆ ಕುಲ್ಗಾಮ್ ಜಿಲ್ಲೆಯ ಒಕಾಯ ಗ್ರಾಮದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ, ಅಡಗಿಕೊಂಡಿದ್ದ ಉಗ್ರರು ಗುಂಡಿನ ದಾಳಿ ನಡೆಸಲು ಆರಂಭಿಸಿದ್ದರು. ಈ ಸಂದರ್ಭದಲ್ಲಿ ಶರಣಾಗಲು ಸೂಚಿಸಲಾಗಿತ್ತು. ಆದರೆ ಉಗ್ರರು ಗುಂಡಿನ ದಾಳಿ ಮುಂದುವರಿಸಿದ ಪರಿಣಾಮ ಭದ್ರತಾ ಪಡೆಯ ಪ್ರತಿದಾಳಿಯಲ್ಲಿ ಇಬ್ಬರು ಹತ್ಯೆಗೀಡಾಗಿರುವುದಾಗಿ ವರದಿ ತಿಳಿಸಿದೆ.