ಉಡುಪಿ: ಇಲ್ಲಿನ ಮಲ್ಪೆ ಮೀನುಗಾರಿಕಾ ಬಂದರಿನಿಂದ ಹೊರಟಿದ್ದ ಬೋಟ್ ಗೆ ಬೃಹತ್ ಗಾತ್ರದ ಎರಡು ತೊರಕೆ (ಸ್ಟಿಂಗ್ ರೇ) ಮೀನುಗಳು ಬಿದ್ದಿದೆ.
ಸುಮಾರು 700 ಹಾಗೂ 250 ಕೆ.ಜಿ. ತೂಕದ ಬೃಹತ್ ಗಾತ್ರ ದ ಎರಡು ಕೊಂಬಿನ ತೊರಕೆ ಮೀನುಗಾರರ ಬಲೆಗೆ ಬಿದ್ದಿದ್ದು, ಬುಧವಾರ ಮಲ್ಪೆ ಮೀನುಗಾರಿಕೆ ಬಂದರಿಗೆ ತರಲಾಗಿದೆ.
ಮಲ್ಪೆ ಸುಭಾಸ್ ಸಾಲಿಯಾನ್ ಅವರ ನಾಗಸಿದ್ಧಿ ಬೋಟ್ ನ ಬಲೆಗೆ ಬಿದ್ದ ಈ ಮೀನನ್ನು ಕ್ರೇನ್ ಮೂಲಕ ಇಳಿಸಲಾಯಿತು. ಈ ಮೀನಿಗೆ ಸ್ಥಳೀಯವಾಗಿ ಎರಡು ಕೊಂಬು ತೊರಕೆ ಎನ್ನಲಾಗುತ್ತಿದೆ.
ಈ ಹಿಂದೆ ಇದಕ್ಕಿಂತ ದೊಡ್ಡ ಗಾತ್ರದ ತೊರಕೆ ಮೀನುಗಳು ಬಲೆಗೆ ಬಿದ್ದಿದ್ದರೂ ಈ ವರ್ಷದ ಮೀನುಗಾರಿಕೆಯಲ್ಲಿ ಸೆರೆಯಾದ ಇದು ಅತೀ ದೊಡ್ಡ ಮೀನಾಗಿದೆ. ಸದ್ಯ ಮೀನು ಮಾರಾಟವಾಗಿದ್ದು, ಉತ್ತಮ ಬೆಲೆಗೆ ಮಾರಾಟವಾಗಿದೆ ಎಂದು ವರದಿಯಾಗಿದೆ.
ಬಲೆಗೆ ಬಿದ್ದ ಭಾರಿ ಮೀನನನ್ನು ನೋಡಲು ಬಂದರಿನಲ್ಲಿ ಭಾರೀ ಜನ ಸೇರಿದ್ದರು. ಈ ಕುರಿತು ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.