ಟೋಕಿಯೊ/ಬೀಜಿಂಗ್: ಕೋವಿಡ್-19 ವೈರಸ್ (ಕೊರೊನಾ ವೈರಸ್) ಭೀತಿ ಹಿನ್ನೆಲೆಯಲ್ಲಿ ಸಮುದ್ರ ಮಧ್ಯದಲ್ಲಿಯೇ ಲಂಗರು ಹಾಕಿರುವ ಜಪಾನ್‌ನ ವಿಲಾಸಿ ನೌಕೆಯಲ್ಲಿರುವ ಇಬ್ಬರು ಭಾರತೀಯರಿಗೆ ಸೋಂಕು ತಗುಲಿರುವುದು ದೃಢ ವಾಗಿದೆ. ಈ ಅಂಶವನ್ನು ಟೋಕಿಯೋದಲ್ಲಿರುವ ಭಾರತದ ರಾಯಭಾರ ಕಚೇರಿ ದೃಢಪಡಿಸಿದೆ. ಅವರನ್ನು ಇನ್ನು 14 ದಿನಗಳ ಕಾಲ ಪ್ರತ್ಯೇಕವಾಗಿ ಇರಿಸಲಾಗುತ್ತದೆ. ಅವರನ್ನು ತಜ್ಞ ವೈದ್ಯರು ಪರೀಕ್ಷೆ ನಡೆಸಿದ್ದಾರೆ.
ಪಶ್ಚಿಮ ಬಂಗಾಲದ ವಿನಯ ಕುಮಾರ್ ಸರ್ಕಾರ್ ಎಂಬವರು ಈಗಾಗಲೇ ವೀಡಿಯೋ ಸಂದೇಶ ಕಳುಹಿಸಿ, ತಮ್ಮನ್ನು ಪಾರು ಮಾಡಬೇಕೆಂದು ಈಗಾಗಲೇ ಮನವಿ ಮಾಡಿದ್ದಾರೆ. ಅದರಲ್ಲಿ ಒಟ್ಟು 138 ಭಾರತೀಯರು ಸೇರಿದಂತೆ 3,711 ಮಂದಿ ಇದ್ದಾರೆ. ವೈರಸ್ ಹಿನ್ನೆಲೆಯಲ್ಲಿ ಫೆ.19ರ ವರೆಗೆ ಸಮುದ್ರದಲ್ಲಿಯೇ ಇರಬೇಕಾಗಿದೆ.
ಇನ್ನೂ 39 ಮಂದಿಗೆ: ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಸಮುದ್ರದ ಮಧ್ಯದಲ್ಲಿಯೇ ತಡೆಹಿಡಿ ಯಲ್ಪಟ್ಟಿರುವ ಜಪಾನ್‌ನ ವಿಲಾಸಿ ನೌಕೆ ಡೈಮಂಡ್ ಪ್ರಿನ್ಸೆಸ್‌ನಲ್ಲಿ ಇನ್ನೂ 39 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಹೀಗಾಗಿ, ಪೀಡಿತರ ಸಂಖ್ಯೆ 174ಕ್ಕೆ ಏರಿಕೆಯಾಗಿದೆ.
ಏರಿದ ಸಂಖ್ಯೆ: ಸದ್ಯ ವಿಶ್ವವ್ಯಾಪಿಯಾಗಿರುವ ಕೊರೊನಾ ವೈರಸ್‌ಗೆ ಅಸುನೀಗಿರುವವರ ಸಂಖ್ಯೆ 1,113ಕ್ಕೆ ಏರಿಕೆಯಾಗಿದೆ. ಅತ್ಯಂತ ಹೆಚ್ಚು ವೈರಸ್‌ನಿಂದ ಪೀಡಿತವಾಗಿರುವ ಹ್ಯುಬೆ ಪ್ರಾಂತ್ಯದಲ್ಲಿಯೇ 97 ಮಂದಿ ಹೊಸ ಸಾವಿನ ಸಂಖ್ಯೆ ವರದಿಯಾಗಿದೆ. ಇದಲ್ಲದೆ ಸೋಂಕು ಪೀಡಿತರ ಸಂಖ್ಯೆ 44,653ಕ್ಕೆ ಏರಿಕೆಯಾಗಿದೆ.
Related Articles
ಹೊಸ ಹೆಸರು: ಕೊರೊನಾ ವೈರಸ್‌ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಕೋವಿಡ್-19 (Covid 19) ಎಂದು ಹೆಸರಿಸಲು ನಿರ್ಧರಿಸಿದೆ. ಅದರಲ್ಲಿ ವಿಶ್ವದ ಯಾವುದೇ ಭೂಭಾಗ, ಪ್ರಾಣಿಯ ಹೆಸರನ್ನು ಸೇರಿಸಲಾಗಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ. ಹೊಸ ಹೆಸರನ್ನು ಕೊರೊನಾ (Corona), ವೈರಸ್ (Virus), ಡಿಸೀಸ್ (disease)ನ ಒಂದೊಂದು ಹೆಸರುಗಳನ್ನು ತೆಗೆದುಕೊಳ್ಳಲಾಗಿದೆ. 2019ನೇ ಇಸ್ವಿಯಲ್ಲಿ ಅದು ಪತ್ತೆಯಾಗಿದ್ದರಿಂದ “19′ ಎಂದು ಸಂಖ್ಯೆಯನ್ನು ಇರಿಸಿಕೊಳ್ಳಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರು ತಿಳಿಸಿದ್ದಾರೆ.
ಪುಟಿದೆದ್ದ ಷೇರು ಮಾರುಕಟ್ಟೆ: ಬಾಂಬೆ ಷೇರು ಪೇಟೆ ಸೇರಿದಂತೆ ವಿಶ್ವದ ಹೆಚ್ಚಿನ ಷೇರು ಮಾರುಕಟ್ಟೆಗಳಲ್ಲಿ ಕೊರೊನಾ ವೈರಸ್ ಭೀತಿ ತಗ್ಗಿರುವ ಹಿನ್ನೆಲೆಯಲ್ಲಿ ವಹಿವಾಟು ತೇಜಿ ಯಿಂದಲೇ ನಡೆದಿದೆ. ಬುಧವಾರ ಬಿಎಸ್‌ಇ ಸೂಚ್ಯಂಕ 350 ಪಾಯಿಂಟ್‌ಗಳಷ್ಟು ಜಿಗಿದಿದೆ. ವಹಿವಾಟು ಮುಕ್ತಾಯದ ವೇಳೆಗೆ ಸೂಚ್ಯಂಕ 41, 565.90ರಲ್ಲಿ ಮುಕ್ತಾಯಗೊಂಡಿತು. ನಿಫ್ಟಿ ಸೂಚ್ಯಂಕ 93.30 ಜಿಗಿದು 12,201.20ರಲ್ಲಿ ಮುಕ್ತಾಯವಾಯಿತು.
ಹಾಂಕಾಂಗ್, ಶಾಂಘೈ, ಟೋಕಿಯೋ, ಸಿಯೋಲ್ ಸ್ಟಾಕ್ ಎಕ್ಸ್‌ಚೇಂಜ್‌ಗಳಲ್ಲಿಯೂ ಉತ್ತಮ ರೀತಿಯಲ್ಲಿ ವಹಿವಾಟು ನಡೆಯಿತು. ಇದೇ ವೇಳೆ ತೈಲೋತ್ಪಾದಕ ರಾಷ್ಟ್ರಗಳ ಒಕ್ಕೂಟ ವೈರಸ್ ಭೀತಿ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿಗಾಗಿ ಕಚ್ಚಾ ತೈಲ ಉತ್ಪಾದನೆಯ ನಿರೀಕ್ಷೆ ತಗ್ಗಿಸುವ ಇಂಗಿತ ವ್ಯಕ್ತಪಡಿಸಿದೆ.
ಕೇಂದ್ರ ಸರಕಾರ ಕ್ರಮ ಕೈಗೊಂಡಿಲ್ಲ: ರಾಹುಲ್
ವಿಶ್ವದಲ್ಲಿ ತಲ್ಲಣಕ್ಕೆ ಕಾರಣವಾಗಿರುವ ಕೊರೊನಾ ವೈರಸ್ ಭೀತಿ ತಡೆಯಲು ಕೇಂದ್ರ ಸರಕಾರ ಯಾವುದೇ ಮುನ್ನೆಚ್ಚರಿಕೆ ಕೈಗೊಂಡಿಲ್ಲವೆಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಸರಿಯಾದ ರೀತಿಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡರೆ ಸಂಭವಿಸುವ ಆಪತ್ತು ತಡೆಯಬಹುದಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಅದು ದೇಶದ ಜನರಿಗೆ, ಅರ್ಥ ವ್ಯವಸ್ಥೆಗೆ ಮಾರಕ ಎಂದೂ ಬರೆದುಕೊಂಡಿದ್ದಾರೆ.