ಬೆಂಗಳೂರು : ಇಬ್ಬರು ಪಕ್ಷೇತರ ಶಾಸಕರು ಸರ್ಕಾರಕೆಕ ನೀಡಿದ ಬೆಂಬಲ ವಾಪಾಸ್ ಪಡೆದ ಬೆನ್ನಲ್ಲೇ ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ಚಟುವಟಿಕೆಗಳು ತೀವ್ರಗೊಂಡಿವೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತುರ್ತಾಗಿ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ಕೆ.ಕೆ.ಗೆಸ್ಟ್ ಹೌಸ್‌ಗೆ ಧಾವಿಸಿ ಬಂದಿರುವ ಸಿಎಂ ಎಚ್‌ಡಿಕೆ ಅವರು ವೇಣುಗೋಪಾಲ್ ಅವರೊಂದಿಗೆ ಪ್ರತ್ಯೇಕ ಚರ್ಚೆ ನಡೆಸುತ್ತಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಇಬ್ಬರು ಪಕ್ಷೇತರರು ಬೆಂಬಲ ವಾಪಾಸ್ ಪಡೆದಾಕ್ಷಣ ಸರ್ಕಾರದ ಸಂಖ್ಯಾ ಬಲಕ್ಕೇನು ತೊಂದರೆ ಆಗುವುದಿಲ್ಲ. ನಾನು ನಿರಾಳನಾಗಿದ್ದೇನೆ, ಪ್ರತಿತಂತ್ರ ಮಾಡುವ ಅಗತ್ಯ ನನಗಿಲ್ಲ ಎಂದಿದ್ದಾರೆ.
ಮುಂಬಯಿಯಲ್ಲಿ ಕೆಲ ಶಾಸಕರು
ಕಾಂಗ್ರೆಸ್‌ನ ಕೆಲ ಅಸಮಾಧಾನಿತ ಶಾಸಕರು ಮುಂಬಯಿಯಲ್ಲಿ ಇದ್ದು ಅವರನ್ನು ಮನವೊಲಿಸಲು ಕಾಂಗ್ರೆಸ್ ನಾಯಕರು ಕಸರತ್ತು ಆರಂಭಿಸಿದ್ದಾರೆ.
ರಾಣಿಬೆನ್ನೂರು ಪಕ್ಷೇತರ ಶಾಸಕ, ಮಾಜಿ ಅರಣ್ಯ ಸಚಿವ ಆರ್.ಶಂಕರ್ ಮತ್ತು ಮುಳಬಾಗಿಲು ಪಕ್ಷೇತರ ಶಾಸಕ ಎಚ್.ನಾಗೇಶ್ ಅವರು ಸರ್ಕಾರಕ್ಕೆ ನೀಡಿದ ಬೆಂಬಲ ವಾಪಾಸ್ ಪಡೆಯುವುದಾಗಿ ಹೇಳಿದ್ದಾರೆ.