ಬರೇಲಿ: ವ್ಯಕ್ತಿಯೊಬ್ಬನ ಅಂತ್ಯಕ್ರಿಯೆಯ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ರುದ್ರಭೂಮಿ ರಣರಂಗವಾದ ಘಟನೆ ಉತ್ತರಪ್ರದೇಶದ ಸಂಬಾಲ್ ಜಿಲ್ಲೆಯಲ್ಲಿ ನಡೆದಿದೆ.
ಸಂಬಾಲ್ ಜಿಲ್ಲೆಯ ಸಿಹಾವಾಲಿ ಗ್ರಾಮದ 25 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಯ ತವರು ಮನೆಯವರ ಜೊತೆ ನಡೆದ ಘರ್ಷಣೆಯ ನಂತರ ಸಾವನ್ನಪ್ಪಿದ್ದ. ಈತನ ಅಂತ್ಯಕ್ರಿಯೆಯ ವೇಳೆಯಲ್ಲಿ ಎರಡು ಗಂಪುಗಳ ನಡುವೆ ಕಲಹವೇರ್ಪಟ್ಟಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ.
ಎರಡು ಗುಂಪಿನವರು ಕೂಡ ಬಡಿಗೆ, ಕಲ್ಲುಗಳ ಮೂಲಕ ಹೊಡೆದಾಡಿಕೊಂಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ತಡೆಯಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಇದೀಗ ರುದ್ರಭೂಮಿಯನ್ನೇ ಯುದ್ದಭೂಮಿಯನ್ನಾಗಿಸಿ ಪರಸ್ಪರ ಹೊಡೆದಾಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಘಟನೆಯ ಹಿನ್ನಲೆ:
ಕೋವಿಡ್-19 ಲಾಕ್ ಡೌನ್ ಸಂದರ್ಭದಲ್ಲಿ ಜಸ್ಪಾಲ್ ಎಂಬ ವ್ಯಕ್ತಿ ಜ್ಯೋತಿ ಎಂಬಾಕೆಯನ್ನು ವಿವಾಹವಾಗಿದ್ದ. ಆದರೇ ಕೆಲಸಮಯದಲ್ಲೇ ಇವರ ವೈವಾಹಿಕ ಜೀವನ ಹದಗೆಟ್ಟಿತ್ತು. ಮಾತ್ರವಲ್ಲದೆ ಪ್ರತಿನಿತ್ಯ ಕೌಟುಂಬಿಕ ಕಲಹ ನಡೆಯುತ್ತಿತ್ತು.
ಕಳೆದ ಸೋಮವಾರ(ನ. 16) ಜಸ್ಪಾಲ್ ತನ್ನ ಪತ್ನಿಯೊಂದಿಗೆ ಆಕೆಯ ತವರು ಮನೆಗೆ ತೆರಳಿದ್ದ. ಈ ವೇಳೆ ಕಲಹವೇರ್ಪಟ್ಟು, ಪತ್ನಿಯ ಸಹೋದರ ಜಸ್ಪಾಲ್ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ಅವಮಾನಿತನಾದ ಜಸ್ಪಾಲ್ ತನ್ನ ಮನೆಗೆ ಹಿಂದಿರುಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ.
ಈ ಘಟನೆಯ ನಂತರ ಜಸ್ಪಾಲ್ ಮನೆಯವರು, ಜ್ಯೋತಿ ಮತ್ತು ಆಕೆಯ ಸಂಬಂಧಿಗಳಿಗೆ ಮನೆಗೆ ಪ್ರವೇಶ ನೀಡಿರಲಿಲ್ಲ. ಮಾತ್ರವಲ್ಲದೆ ಅಂತ್ಯಕ್ರಿಯೆಯ ಸ್ಥಳಕ್ಕೂ ಬಾರದಂತೆ ತಡೆದಿದ್ದಾರೆ. ಈ ವೇಳೆ ಮಾತಿನ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದ್ದು ಪೊಲೀಸರು ಕೂಡ ಮಧ್ಯಪ್ರವೇಶಿಸಿದ್ದರು.
ಜಸ್ಪಾಲ್ ನ ಅಂತ್ಯಕ್ರಿಯೆ ನಡೆಯುತ್ತಿದ್ದ ವೇಳೆಯಲ್ಲಿಯೇ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ತಾರಕಕ್ಕೇರಿದ್ದು ಪರಸ್ಪರ ಬಡಿದಾಡಿಕೊಂಡಿದ್ದರು. ಸ್ಥಳದಲ್ಲಿ ಸುಮಾರು 200ಕ್ಕಿಂತ ಹೆಚ್ಚಿನ ಜನರು ಘರ್ಷಣೆಯಲ್ಲಿ ತೊಡಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಹಂತದ ತನಿಖೆ ನಡೆಸುತ್ತಿದ್ದಾರೆ.