ಧಾರವಾಡ: ಭೂಸ್ವಾಧೀನ ಮಾಡಿಕೊಂಡ ಜಮೀನಿನ ಪರಿಹಾರ ರೈತರಿಗೆ ನೀಡಲು ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ಕಚೇರಿ ಹಾಗೂ ಉಪ ವಿಭಾಗಾ ಧಿಕಾರಿ ಕಚೇರಿಯ ಚರಾಸ್ತಿಯನ್ನು ನ್ಯಾಯಾಲಯದ ಆದೇಶದಂತೆ ಶುಕ್ರವಾರ ನ್ಯಾಯಾಲಯದ ಅಧಿಕಾರಿಗಳು ಜಪ್ತಿ ಮಾಡಿದರು.
ಉಪವಿಭಾಗಾಧಿಕಾರಿ ಕಚೇರಿಯಲ್ಲಿದ್ದ 1 ಝೆರಾಕ್ಸ್ ಮಷಿನ್, 6 ಕುರ್ಚಿ, 1 ಕಂಪೂಟರ್, 1 ಪ್ರಿಂಟರ್ ಹಾಗೂ ಸಣ್ಣ ನೀರಾವರಿ ಇಲಾಖೆಯಲ್ಲಿನ 4 ಕುರ್ಚಿ, 1 ಹಾರ್ಡ್‌ಡಿಸ್ಕ್ ಹಾಗೂ 1 ಫ್ಯಾನ್ ಜಪ್ತಿ ಮಾಡಲಾಗಿದೆ. ಕಲಘಟಗಿ ತಾಲೂಕಿನ ಮಲಕನಕೊಪ್ಪ ಗ್ರಾಮಕ್ಕೆ ಸೇರಿದ 2 ಎಕರೆ 38 ಗುಂಟೆ ಜಮಿನನ್ನು ಕೆರೆಯಿಂದ ಕೆರೆಗೆ ನೀರು ಪೂರೈಸುವ ಕಾಲುವೆ ನಿರ್ಮಾಣ ಕಾಮಗಾರಿಗಾಗಿ ಸಣ್ಣ ನೀರಾವರಿ ಇಲಾಖೆ 2006ರಲ್ಲಿ ಪ್ರತಿ ಗುಂಟೆಗೆ 400 ರೂ. ನಿಗದಿ ಮಾಡಿ ಸ್ವಾಧೀನ ಮಾಡಿಕೊಳ್ಳಲಾಗಿತ್ತು.
ಆದರೆ ಇಲಾಖೆಯು ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಿರಲಿಲ್ಲ. ಹೀಗಾಗಿ ಜಮೀನಿಗೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಗ್ರಾಮದ 9 ಜನ ರೈತರು 2009ರಲ್ಲಿ ಧಾರವಾಡದ 2ನೇ ಹೆಚ್ಚುವರಿ ದಿವಾನಿ ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡಿದ್ದರು. ಅರ್ಜಿ ಪರಿಶೀಲನೆ ನಡೆಸಿದ ನ್ಯಾಯಾಲಯ 2015ರ ನವೆಂಬರ್ ನಲ್ಲಿ ಸಂತ್ರಸ್ತರಿಗೆ ಪ್ರತಿ ಗುಂಟೆಗೆ 12,000 ರೂ.ದಂತೆ ಒಟ್ಟು 46 ಲಕ್ಷ ರೂ. ನೀಡಬೇಕು ಎಂದು ಆದೇಶಿಸಿತ್ತು.
ನ್ಯಾಯಾಲಯದ ಆದೇಶವಿದ್ದರೂ ಇಲಾಖೆ ಈವರೆಗೂ ರೈತರಿಗೆ ಪರಿಹಾರ ಹಣ ನೀಡಿರಲಿಲ್ಲ. ಹೀಗಾಗಿ ನ್ಯಾಯಾಲಯ 2017ರ ಜೂನ್‌ನಲ್ಲಿ ಇಲಾಖೆ ಜಪ್ತಿಗೆ ಆದೇಶ ನೀಡಿತ್ತು. ಅಂದಿನಿಂದ ಈವರೆಗೂ ನ್ಯಾಯಾಲಯದ ಆದೇಶದಂತೆ ಉಪ ವಿಭಾಗಾಧಿಕಾರಿ ಕಚೇರಿ ಹಾಗೂ ಸಣ್ಣ ನೀರಾವರಿ ಇಲಾಖೆಯಲ್ಲಿ 2 ಬಾರಿ ಜಪ್ತಿ ಕಾರ್ಯ ನಡೆಸಬೇಕಾಯಿತು. ಆದರೆ ಅಧಿಕಾರಿಗಳು ಪ್ರಥಮ ಹಾಗೂ ದ್ವೀತಿಯ ಜಪ್ತಿ ಕಾರ್ಯದ ಸಂದರ್ಭದಲ್ಲಿ ಕ್ರಮವಾಗಿ ಒಂದು ತಿಂಗಳ ಮತ್ತು 15 ದಿನ ಕಾಲಾವಕಾಶ ಕೇಳಿದ್ದರು.
ಅಲ್ಲದೇ ಈ ಕಾಲಾವಕಾಶದಲ್ಲಿ ರೈತರಿಗೆ ಪರಿಹಾರ ಹಣ ನೀಡುವುದಾಗಿ ಹೇಳಿದ್ದರಿಂದ ಜಪ್ತಿ ಮಾಡಿರಲಿಲ್ಲ. ಆದರೆ ನಂತರವೂ ವಿಳಂಬ ಮಾಡಿದ ಕಾರಣ 2017ರ ಸೆಪ್ಟೆಂಬರ್‌ಲ್ಲಿ ಪುನಃ ಜಪ್ತಿಗೆ ನ್ಯಾಯಾಲಯ ಆದೇಶ ನೀಡಿದೆ. ಹೀಗಾಗಿ ನ್ಯಾಯಾಲಯದ ಆದೇಶದಂತೆ ಶುಕ್ರವಾರ ಎರಡೂ ಕಚೇರಿಯಲ್ಲಿ ಜಪ್ತಿ ಕಾರ್ಯಕ್ಕೆ ಮುಂದಾಗಿದ್ದೆವೆ ಎಂದು ಅರ್ಜಿದಾರ ಪರ ವಕೀಲ ಎಸ್.ವಿ. ಜಿನ್ನೂರ ತಿಳಿಸಿದರು. ನ್ಯಾಯಾಲಯದ ಬೇಲಿಫ ಎಫ್.ಸಿ. ಭಾವಿಕಟ್ಟಿ ಹಾಗೂ ಗುರಪ್ಪ ಗೊಲ್ಲರ ಇದ್ದರು.