ಸವಣೂರು: ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಮೂಲೆತ್ತಡ್ಕದಲ್ಲಿ ಇಬ್ಬರು ಬಾಲಕಿಯರು ನೀರಿನ ತೊಟ್ಟಿಗೆ ಬಿದ್ದು ಮೃತಪಟ್ಟ ಘಟನೆ ಶನಿವಾರ ಸಂಜೆ ಸಂಭವಿಸಿದೆ.
ಕೊಳ್ತಿಗೆ ಗ್ರಾಮದ ಕೆಂಪುಗುಡ್ಡೆ ನಿವಾಸಿಗಳಾದ ಗುಡ್ಡಪ್ಪ ಗೌಡ ಅವರ ಪುತ್ರಿ ಪ್ರಜ್ಞಾ (12) ಮತ್ತು ದಾಮೋದರ ಗೌಡ ಅವರ ಪುತ್ರಿ ಸಂಜನಾ (9) ಮೃತಪಟ್ಟವರು.
ಗುಡ್ಡಪ್ಪ ಗೌಡ ಹಾಗೂ ದಾಮೋದರ ಗೌಡ ಅಣ್ಣ-ತಮ್ಮಂದಿರು. ಪ್ರಜ್ಞಾ ಪೆರ್ಲಂಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ಮತ್ತು ಸಂಜನಾ 4ನೇ ತರಗತಿಯ ವಿದ್ಯಾರ್ಥಿಗಳು. ಮಕ್ಕಳಿಬ್ಬರು ಪ್ರತಿಭಾವಂತರಾಗಿದ್ದು, ಪ್ರಜ್ಞಾ ಪೆರ್ಲಂಪಾಡಿ ಶಾಲೆಯ ನಾಯಕಿಯಾಗಿದ್ದರು.
ಶನಿವಾರ ಸಂಜೆ ಶಾಲೆಯಿಂದ ಆಗಮಿಸಿದ ಬಳಿಕ ಮಕ್ಕಳಿಬ್ಬರು ಆಟವಾಡುತ್ತ ಮನೆಯಿಂದ ಹೊರಗೆ ತೆರಳಿದ್ದರು. ರಾತ್ರಿಯಾದರೂ ಹಿಂದಿರುಗದ ಕಾರಣ ಮನೆ ಮಂದಿ ಹುಡುಕಾಟ ಆರಂಭಿಸಿದ್ದು, ಸಮೀಪದ ಉದಯ ಭಟ್ ಅವರ ತೋಟದಲ್ಲಿರುವ ನೀರಿನ ತೊಟ್ಟಿಯಲ್ಲಿ ಶವಗಳು ಪತ್ತೆಯಾದವು.
ಕುತೂಹಲದಿಂದ ನೀರಿನ ತೊಟ್ಟಿಯ ಬಳಿ ಹೋದ ಮಕ್ಕಳಿಬ್ಬರು ಕಾಲು ಜಾರಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.
ಘಟನೆ ಕುರಿತು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೃತದೇಹಗಳನ್ನು ನೀರಿನಿಂದ ಮೇಲೆತ್ತಿ ಮರಣೋತ್ತರ ಪರೀಕ್ಷೆಗಾಗಿ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಪ್ರಜ್ಞಾ ಅವರು ತಂದೆ, ತಾಯಿ ಮತ್ತು ಸಹೋದರನನ್ನು ಅಗಲಿದ್ದಾರೆ.
ಸಂಜನಾ ಅವರು ತಂದೆ, ತಾಯಿ ಮತ್ತು ಅವಳಿ ಸಹೋದರಿಯನ್ನು ಅಗಲಿದ್ದಾರೆ.