ಮುಂಬಯಿ: ಕಣ್ಮರೆಯಾದ ಎರಡು ದಿನಗಳ ನಂತರ ನಾಲ್ಕು ಸಿಬ್ಬಂದಿಗಳನ್ನು ಒಳಗೊಂಡ ಮೀನುಗಾರಿಕಾ ದೋಣಿ ಪಾಲ್ಗರ್ ಜಿಲ್ಲೆಯ ಕರಾವಳಿಯಲ್ಲಿ ಪತ್ತೆಯಾಗಿದೆ. 26/11 ಭಯೋತ್ಪಾದಕರ ದಾಳಿಯ ಕರಾಳ ದಿನದಂದೆ ಈ ಘಟನೆ ನಡೆದಿದ್ದು, ಅಪಹರಣದ ಭೀತಿಯನ್ನು ಹುಟ್ಟುಹಾಕಿತ್ತು.
ಗುರುವಾರ ಬೆಳಗ್ಗೆ 6 ಗಂಟೆಗೆ ಪಾಲ್ಗರ್ ನ ಸತ್ಪತಿ ಗ್ರಾಮದಿಂದ ಹೊರಟ ಮೀನುಗಾರರರಾದ ಜ್ಞಾನೇಶ್ವರ ತಾಂಡೆಲ್ (51), ದಿಲೀಪ್ ತಾಂಡೆಲ್ (55), ಜಗನ್ನಾಥ್ ತಾಂಡೆಲ್ (61) ಮತ್ತು ಪ್ರವೀಣ್ ಧನು (38) ನಾಪತ್ತೆಯಾಗಿದ್ದರು.
ಮಾಮೂಲಿಯಂತೆ ಮೀನುಗಾರರು ಸಂಜೆ 5ರ ಹೊತ್ತಿಗೆ ಹಿಂತಿರುಗುವ ನಿರೀಕ್ಷೆಯಿತ್ತು. ಆದರೆ ಅವರ ದೋಣಿ ರಾತ್ರಿಯಾದರೂ ಹಿಂದೆ ಬಂದಿರಲಿಲ್ಲ. ಶುಕ್ರವಾರ ಬೆಳಗ್ಗೆ ಕೂಡ ದೋಣಿಯ ಸುದ್ದಿ ಇಲ್ಲದ ಕಾರಣ ಗ್ರಾಮದ ಮೀನುಗಾರರ ಸಮಾಜವು ಸಭೆ ನಡೆಸಿತ್ತು.
ಜ್ಞಾನೇಶ್ವರ ತಾಂಡೆಲ್ ಅವರ ಪತ್ನಿ ಸುಜಾತಾ ಅವರು ಈ ಬಗ್ಗೆ ಸತ್ಪತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೋಣಿಯಲ್ಲಿ ಸ್ವಯಂಚಾಲಿತ ಗುರುತಿನ ವ್ಯವಸ್ಥೆಯ ಟ್ರಾನ್ಸ್ಪಾಂಡರ್ ಮತ್ತು ಜಿಪಿಎಸ್ ಹೊಂದಿರದ ಕಾರಣ ಭಾರತೀಯ ನೌಕಾಪಡೆ ಮತ್ತು ಭಾರತೀಯ ಕೋಸ್ಟ್ ಗಾರ್ಡ್‌ಗೆ ದೋಣಿಯನ್ನು ಹುಡುಕಲು ಕಷ್ಟಕರವಾಗಿತ್ತು.
12 ವರ್ಷಗಳ ಹಿಂದೆ, ಪಾಕಿಸ್ತಾನ ಭಯೋತ್ಪಾದಕರು ಮುಂಬಯಿಗೆ ಬಂದಾಗ ಭಾರತೀಯ ಮೀನುಗಾರಿಕಾ ದೋಣಿ ಅಪಹರಿಸಿದ ಘಟನೆ ಪುನರಾವರ್ತನೆಯ ಆತಂಕದಿಂದ ಜಿಲ್ಲಾ ಪೊಲೀಸರು ನೌಕಾಪಡೆ, ಕೋಸ್ಟ್ ಗಾರ್ಡ್, ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ, ಮುಂಬಯಿ ಪೊಲೀಸ್, ಮಹಾರಾಷ್ಟ್ರ ಕಡಲ ಮಂಡಳಿ, ಮೀನುಗಾರಿಕೆ ಇಲಾಖೆ ಮತ್ತು ಗುಜರಾತ್ ಸರಕಾರ ಈ ಬಗ್ಗೆ ಪ್ರಮುಖ ಭಾಗಗಳಲ್ಲಿ ಎಚ್ಚರಿಕೆ ವಹಿಸಿತ್ತು.
ಈ ಮಧ್ಯೆ ಸ್ಥಳೀಯ ಮೀನುಗಾರ ಪ್ರದೀಪ್ ಪಾಟೀಲ್ ಎಂಬವರು ಗುರುವಾರ ಸಂಜೆ 5 ಗಂಟೆಗೆ ತಮ್ಮ ಸ್ವಂತ ದೋಣಿ ಮೀನುಗಾರಿಕೆಯಲ್ಲಿ ತೊಡಗಿದ್ದಾಗ ನಾಪತ್ತೆಯಾದ ದೋಣಿಯನ್ನು ನೋಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದು ಬಳಿಕ ಕಾರ್ಯಾಚರಣೆಗಿಳಿದ ತಂಡವು ದೋಣಿಯನ್ನು ಹುಡುಕುವಲ್ಲಿ ಯಶಸ್ವಿಯಾಗಿದೆ. ಶನಿವಾರ 10 ಗಂಟೆಗೆ ಒಂಬತ್ತು ನಾಟಿಕಲ್ ಮೈಲುಗಳಷ್ಟು ದೂರದಲ್ಲಿರುವ ದೋಣಿಯನ್ನು ಗುರುತಿಸಲಾಗಿದ್ದು, ಕಾಣೆಯಾದವರನ್ನು ಮರಳಿ ಮನೆಗೆ ಕರೆತರಲಾಗಿದೆ.
ತಾಂತ್ರಿಕ ದೋಷಣದಿಂದ ಮೀನುಗಾರರಿಗೆ ದಾರಿತಪ್ಪಿರುವುದಾಗಿ ತಿಳಿದು ಬಂದಿದೆ. ಕಾಣೆಯಾದ ಮೀನುಗಾರರು ಕೇವಲ ಒಂದು ದಿನ ಆಹಾರವನ್ನು ಮಾತ್ರ ಹೊಂದಿದ್ದು, ಆದರೆ ಅವರಿಗೆ ಕುಡಿಯಲು ಸಾಕಷ್ಟು ನೀರಿತ್ತು. ಮೀನುಗಾರರೆಲ್ಲರೂ ಆರೋಗ್ಯವಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.