Advertisement

ಎರಡು ದಿನಗಳ ರಾಷ್ಟ್ರಮಟ್ಟದ ಗಾಳಿಪಟ ಉತ್ಸವ

12:15 PM Jul 27, 2018 | Team Udayavani |

ದೊಡ್ಡಬಳ್ಳಾಪುರ: ಗಾಳಿಪಟ ಹಾರಿಸುವುದರಲ್ಲಿ ಹೆಸರುವಾಸಿಯಾಗಿರುವ ದೊಡ್ಡಬಳ್ಳಾಪುರದಲ್ಲಿ ಗಾಳಿಪಟ ಕಲಾ ಸಂಘವು ಗಾಳಿಪಟ ಕಲೆಗೆ ಉತ್ತೇಜನ ನೀಡುವಲ್ಲಿ ಸಕ್ರಿಯವಾಗಿದ್ದು, ಜು.29 ಮತ್ತು 30ರಂದು ರಾಷ್ಟ್ರ ಮಟ್ಟದ ಗಾಳಿಪಟ ಉತ್ಸವ ಮತ್ತು ರಾಜ್ಯ ಮಟ್ಟದ ಗಾಳಿಪಟ ಹಾರಿಸುವ ಸ್ಪರ್ಧೆಗಳು ಕರ್ನಾಟಕ ಜಾನಪದ ಪರಿಷತ್‌ ಮತ್ತು ರಾಜ್ಯ ಪ್ರವಾಸೋದ್ಯಮ ಇಲಾಖೆ ಸಹಯೋಗದೊಂದಿಗೆ ನಗರದ ಮುನಿನಂಜಪ್ಪನವರ ಜಮೀನಿನಲ್ಲಿ ನಡೆಯಲಿವೆ ಎಂದು ದೊಡ್ಡಬಳ್ಳಾಪುರ ಗಾಳಿಪಟ ಕಲಾ ಸಂಘದ ಕಾರ್ಯದರ್ಶಿ ಎಲ್‌.ಎನ್‌.ಶ್ರೀನಾಥ್‌ ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೊಡ್ಡಬಳ್ಳಾಪುರದಲ್ಲಿ ಗಾಳಿಪಟ ತಯಾರಿಸುವ ಹಲವಾರು ಕಲಾವಿದರಿದ್ದಾರೆ. ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಭಾಗವಹಿಸಿ ಬಹುಮಾನಗಳನ್ನು ಗಳಿಸಿದ್ದಾರೆ. ಗಾಳಿಪಟ ಕಲಾಸಂಘದಿಂದ ಪ್ರತಿವರ್ಷ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ದೇಹದಾಕಾರದ ಆಂಜನೇಯ ಪಟಗಳನ್ನು ಕಟ್ಟುವುದರಲ್ಲಿ ಇಲ್ಲಿನ ಕಲಾವಿದರು ಸಿದ್ಧಹಸ್ತರು. ಜಾನಪದ ತಜ್ಞ ಡಾ.ಎಚ್‌.ಎಲ್‌.ನಾಗೇಗೌಡ ಅವರಿಂದ ಗಾಳಿಪಟದ ಅಜ್ಜ ಎಂದು ಕರೆಸಿಕೊಂಡಿದ್ದ ಎಸ್‌.ಸಿ.ಜಗದೀಶ್‌ ಅವರ ಮಾರ್ಗದರ್ಶನದಲ್ಲಿ ಇಂದು ಸಂಘದ ಚಟುವಟಿಕೆಗಳು ನಡೆಯುತ್ತಿವೆ ಎಂದು ತಿಳಿಸಿದರು.

ನಮ್ಮ ಗಾಳಿಪಟ ಕಲಾವಿದರು ವಿದೇಶಗಳಲ್ಲಿ ನಡೆದ ಉತ್ಸವಗಳಲ್ಲಿಯೂ ಭಾಗವಹಿಸಿದ್ದಾರೆ. ಮುಂದೆ ಅವಕಾಶ ಸಿಕ್ಕರೆ ವಿದೇಶಗಳಲ್ಲಿಯೂ ಗಾಳಿಪಟದ ಸ್ಪರ್ಧೆಗಳನ್ನು ಆಯೋಜಿಸಲಿದ್ದೇವೆ. ನಮ್ಮ ಸಂಘದ ಚಟುವಟಿಕೆಗಳನ್ನು ನೋಡಿದ ಕರ್ನಾಟಕ ಜಾನಪದ ಪರಿಷತ್‌ ಮತ್ತು ರಾಜ್ಯ ಪ್ರವಾಸೋದ್ಯಮ ಇಲಾಖೆ ದೊಡ್ಡಬಳ್ಳಾಪುರದಲ್ಲಿ ಗಾಳಿಪಟ ಉತ್ಸವ ನಡೆಸುತ್ತಿರುವುದು ಹೆಮ್ಮೆಯ ವಿಚಾರ ಎಂದರು.

ಗಾಳಿಪಟ ಕಲಾ ಸಂಘದ ಅಧ್ಯಕ್ಷ ಎಸ್‌.ಸಿ.ಜಗದೀಶ್‌ ಮಾತನಾಡಿ, ಸಾಮಾನ್ಯ ಆಕಾರಗಳಲ್ಲಿ ತಯಾರಾಗುತ್ತಿದ್ದ ಗಾಳಿಪಟಗಳಿಗೆ ವಿಭಿನ್ನ ಆಕಾರಗಳನ್ನು ನೀಡಿ ತಯಾರು ಮಾಡಿ ಹಾರಿಸುವುದರಲ್ಲಿ ದೊಡ್ಡಬಳ್ಳಾಪುರ ಮುಂಚೂಣಿಯಲ್ಲಿದ್ದು, ಇಲ್ಲಿ ಪಾರಂಪರಿಕ ಕಲೆ ಎನಿಸಿದೆ. ಇಂದಿನ ಪೀಳಿಗೆ ಈ ಬಗ್ಗೆ ಆಸಕ್ತಿ ವಹಿಸುತ್ತಿರುವುದು ಸಂತಸದ ಸಂಗತಿಯಾಗಿದ್ದು, ಗಾಳಿಪಟ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಲೆಗೆ ಉತ್ತೇಜನ ನೀಡುವಂತೆ ಮನವಿ ಮಾಡಿದರು.

ಗಾಳಿಪಟ ಕಲಾ ಸಂಘದ ಖಜಾಂಚಿ ಎ.ಎನ್‌.ಪ್ರಕಾಶ್‌ಮಾತನಾಡಿ, ರಾಷ್ಟ್ರಮಟ್ಟದ ಗಾಳಿಪಟ ಉತ್ಸವದಲ್ಲಿ ರಾಜ್ಯದ ವಿವಿಧೆಡೆಗಳಿಂದಷ್ಟೇ ಅಲ್ಲದೇ ಗುಜರಾತ್‌, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಪಾಂಡಿಚೇರಿ ಮೊದಲಾದ ಕಡೆಗಳಿಂದ ಗಾಳಿಪಟ ಕಲಾವಿದರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

Advertisement

ದೊಡ್ಡಬಳ್ಳಾಪುರ ಗಾಳಿಪಟ ಕಲಾ ಸಂಘದ ಕಾರ್ಯದರ್ಶಿ ಎಸ್‌.ಮುನಿರಾಜು, ಉಪಾಧ್ಯಕ್ಷ ಎಲ್‌.ನಾರಾಯಣ್‌, ಖಜಾಂಚಿ ಎ.ಎನ್‌.ಪ್ರಕಾಶ್‌, ಸದಸ್ಯ ಜಿ.ಆರ್‌.ವಿಶ್ವನಾಥ್‌ ಸಂಘದ ಸದಸ್ಯರು ಹಾಜರಿದ್ದರು.

ಸಚಿವ ಸಾ.ರಾ.ಮಹೇಶ್‌ರಿಂದ ಉದ್ಘಾಟನೆ: ಜು.29 ರಿಂದ 30ರವರೆಗೆ ಗಾಳಿಪಟ ಉತ್ಸವ ನಗರದ ಭುವನೇಶ್ವರಿ ನಗರದಲ್ಲಿರುವ ಮುನಿನಂಜಪ್ಪನವರ ಜಮೀನಿನಲ್ಲಿ ನಡೆಯಲಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಪಂ, ರಾಜ್ಯ ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಜಾನಪದ ಪರಿಷತ್ತು, ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ದೊಡ್ಡಬಳ್ಳಾಪುರ ಗಾಳಿಪಟ ಕಲಾ ಸಂಘದ ಸಹಯೋಗದೊಂದಿಗೆ ಭಾನುವಾರ 10 ಗಂಟೆಗೆ ಗಾಳಿಪಟ ಉತ್ಸವವನ್ನು ಪ್ರವಾಸೋದ್ಯಮ ಮತ್ತು ರೇಷ್ಮೆ ಇಲಾಖೆ ಸಚಿವ ಸಾ.ರಾ.ಮಹೇಶ್‌ ಉದ್ಘಾಟಿಸಲಿದ್ದಾರೆ. ಶಾಸಕ ಟಿ.ವೆಂಕಟರಮಣಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸಂಸದ ಡಾ.ಎಂ.ವೀರಪ್ಪಮೊಯಿಲಿ, ಶಾಸಕರಾದ ಎಂ.ಟಿ.ಬಿ.ನಾಗರಾಜ್‌, ನಿಸರ್ಗ ನಾರಾಯಣಸ್ವಾಮಿ, ಡಾ.ಕೆ.ಶ್ರೀನಿವಾಸಮೂರ್ತಿ, ನಗರಸಭೆ ಅಧ್ಯಕ್ಷ ಟಿ.ಎನ್‌.ಪ್ರಭುದೇವ್‌, ಉಪಾಧ್ಯಕ್ಷೆ ಜಯಲಕ್ಷ್ಮೀ ಭಾಗವಹಿಸಲಿದ್ದಾರೆ. 

ಅಂದು ಹೊರ ರಾಜ್ಯಗಳಿಂದ ಆಗಮಿಸುವ ಗಾಳಿಪಟ ಕಲಾವಿದರು, ವಿವಿಧ ಮಾದರಿಯ ಗಾಳಿಪಟಗಳ ಪ್ರದರ್ಶನ ನೀಡಲಿದ್ದಾರೆ. ಸಂಜೆ 7 ಗಂಟೆಯಿಂದ ಎಲ್‌ಇ ಡಿ ಗಾಳಿಪಟಗಳ ಪ್ರದರ್ಶನ ನಡೆಯಲಿದೆ.

ಜು.30ರಂದು ರಾಜ್ಯ ಮಟ್ಟದ ಗಾಳಿಪಟ ಸ್ಪರ್ಧೆಗಳು ನಡೆಯಲಿದ್ದು, ರಾಜ್ಯದ ವಿವಿಧ ಕಡೆಗಳಿಂದ ಸ್ಪರ್ಧೆಗಳು ಭಾಗವಹಿಸಲಿದ್ದಾರೆ. ಸಂಜೆ 4 ಗಂಟೆಗೆ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next