ಬೆಂಗಳೂರು: ನವಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ ಸೇರಿದಂತೆ ಪಕ್ಷ ಸಂಘಟನೆ ಕುರಿತಂತೆ ಚರ್ಚಿಸಲು ಗುರುವಾರದಿಂದ 2 ದಿನಗಳ ಕಾಲ ರಾಜ್ಯ ಬಿಜೆಪಿ ವತಿಯಿಂದ ಸರಣಿ ಸಭೆಗಳು ನಡೆಯಲಿವೆ. ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್, ಸಹ ಉಸ್ತುವಾರಿ ಪಿಯೂಷ್ ಗೋಯೆಲ್ ಮತ್ತು ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರರಾವ್ ನೇತೃತ್ವದಲ್ಲಿ ಗುರುವಾರ ಕೋರ್ ಕಮಿಟಿ ಸಭೆ ನಡೆದರೆ, ಶುಕ್ರವಾರ ಪರಿವರ್ತನಾ ಯಾತ್ರೆ ಕುರಿತು ವಿವಿಧ ಸಮಿತಿಗಳೊಂದಿಗೆ ಇಡಿ ದಿನ ಸಮಾಲೋಚನೆ ನಡೆಯಲಿದೆ. ಯಾತ್ರೆಗೆ ಸಂಬಂಧಿಸಿದಂತೆ ಈಗಾಗಲೇ ಮಾರ್ಗಸೂಚಿ ಮತ್ತು ಲಾಂಛನ ಅಂತಿಮ ಗೊಳಿಸಲಾಗಿದೆ. ಹೀಗಾಗಿ ನ. 2ರಿಂದ ಆರಂಭವಾಗುವ ಯಾತ್ರೆಯಲ್ಲಿ ಪಕ್ಷದ ರಾಜ್ಯ ಮುಖಂಡರು ತಂಡಗಳಾಗಿ ಪಾಲ್ಗೊಳ್ಳಲಿದ್ದು, ಯಾರ್ಯಾರು ಯಾವ ತಂಡದಲ್ಲಿರುತ್ತಾರೆ? ಯಾವಾಗ ಮತ್ತು ಎಲ್ಲಿ ಅವರು ಯಾತ್ರೆಯೊಂದಿಗೆ ಸೇರಿಕೊಳ್ಳಬೇಕೆಂಬ ವಿಚಾರಗಳನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ. ಅದೇ ರೀತಿ ಯಾತ್ರೆಯಲ್ಲಿ ಪಾಲ್ಗೊಳ್ಳಲಿರುವ ಕೇಂದ್ರ ಸಚಿವರು, ರಾಷ್ಟ್ರೀಯ ನಾಯಕರು, ಇತರೆ ರಾಜ್ಯಗಳ ಬಿಜೆಪಿ ಮುಖ್ಯಮಂತ್ರಿಗಳು ಯಾರು ಎಂಬ ಬಗ್ಗೆಯೂ ಚರ್ಚೆಯಾಗಲಿದೆ. ಪಟ್ಟಿ ಅಂತಿಮವಾದರೆ ಅದನ್ನು ಬಿಡುಗಡೆ ಮಾಡಲಾಗುವುದು ಎಂದೂ ಮೂಲಗಳು ಹೇಳಿವೆ.
ವಿಧಾನ ಪರಿಷತ್ ಚುನಾವಣೆ ಚರ್ಚೆ
ಗುರವಾರದ ಕೋರ್ ಕಮಿಟಿ ಸಭೆಯಲ್ಲಿ ಯಾತ್ರೆಯ ಸಿದ್ಧತೆಗಳ ಜತೆಗೆ ಮುಂದಿನ ವರ್ಷದ ಜೂನ್ ತಿಂಗಳಲ್ಲಿ ನಡೆಯಲಿರುವ ವಿಧಾನ ಪರಿಷತ್ ಶಿಕ್ಷಕರು ಮತ್ತು ಪದವೀಧರ ಕ್ಷೇತ್ರಗಳ 6 ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತಂತೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಪದವೀಧರ ಕ್ಷೇತ್ರಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳು ಪದ ವೀಧರ ಮತದಾರರನ್ನು ನೋಂದಣಿ ಮಾಡಬೇಕಿದ್ದು, ಪರಿವರ್ತನಾ ಯಾತ್ರೆಯಿಂದ ಇದಕ್ಕೆ ಕಾಲಾವಕಾಶ ದೊರೆಯದ ಕಾರಣ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಸಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಪ್ರಯತ್ನಿಸಬಹುದು ಎಂದು ಹೇಳಲಾಗಿದೆ.