ನವದೆಹಲಿ/ಜಮ್ಮು-ಕಾಶ್ಮೀರ: ಶಂಕಿತ ಉಗ್ರರು ನಡೆಸಿದ ಗ್ರೆನೇಡ್ ದಾಳಿಯಲ್ಲಿ ಗಾಯಗೊಂಡಿದ್ದ ಇಬ್ಬರು ನಾಗರಿಕರು ಸಾವನ್ನಪ್ಪಿರುವ ಘಟನೆ ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ನಡೆದಿದೆ.
ಹಾಕುರಾ ಗ್ರಾಮದಲ್ಲಿ ಸರ್ಕಾರಿ ಅಧಿಕಾರಿಗಳು ಭಾಗವಹಿಸಿದ್ದ ಕಾರ್ಯಕ್ರಮವೊಂದು ನಡೆಯುತ್ತಿರುವ ವೇಳೆ ಗ್ರೆನೇಡ್ ಹಾಗೂ ಗುಂಡಿನ ದಾಳಿ ನಡೆದಿರುವುದಾಗಿ ವರದಿ ತಿಳಿಸಿದೆ. ಸಾವನ್ನಪ್ಪಿದವರಲ್ಲಿ ಒಬ್ಬರನ್ನು ಗ್ರಾಮದ ಸರ್ ಪಂಚ್ ಎಂದು ಗುರುತಿಸಲಾಗಿದೆ.
ಎನ್ ಕೌಂಟರ್ ವಲಯದೊಳಗೆ ನಾಗರಿಕರು ಪ್ರವೇಶಿಸದಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಈಗಾಗಲೇ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದರು. ಎನ್ ಕೌಂಟರ್ ವಲಯದೊಳಕ್ಕೆ ಸ್ಫೋಟಕ ವಸ್ತುಗಳನ್ನು ಅಡಗಿಸಿ ಸ್ಫೋಟದ ಸಂಚು ನಡೆಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿತ್ತು.
ಶ್ರೀನಗರದ ಹಝರತ್ ಬಾಲ್ ಪ್ರದೇಶದ ಯೂನಿರ್ವಸಿಟಿ ಆಫ್ ಕಾಶ್ಮೀರದ ಗೇಟ್ ಸಮೀಪ ಗ್ರೆನೇಡ್ ದಾಳಿ ನಡೆಸಿದ ಮತ್ತೊಂದು ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ವರದಿ ವಿವರಿಸಿದೆ. ಮಂಗಳವಾರ ಮಧ್ಯಾಹ್ನ ಯೂನಿರ್ವಸಿಟಿಯ ಹೊರಭಾಗದಲ್ಲಿ ರಹಸ್ಯ ಸ್ಫೋಟಕಗಳು ಪತ್ತೆಯಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪಾರ್ಕಿಂಗ್ ಪ್ರದೇಶದಲ್ಲಿಯೂ ಸ್ಫೋಟ ಸಂಭವಿಸಿದ್ದು, ಎಲ್ಲಾ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಕೈಗೊಂಡಿರುವುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.