ಮಣಿಪಾಲ: ಚೀನದ ನೆರೆಯ ರಾಷ್ಟ್ರಗಳು ಅದರ ವಿರುದ್ಧ ತಿರುಗಿ ಬೀಳಲು ಪ್ರಾರಂಭಿಸಿವೆ. ಇದೀಗ ಜಪಾನ್ ಸರದಿ. ಸೆನ್ಕಾಕು ದ್ವೀಪದ ಬಳಿ ತಮ್ಮ ಗಡಿಯನ್ನು ಪ್ರವೇಶಿಸಿದ ಎರಡು ಚೀನೀ ಹಡಗುಗಳಿಗೆ ತತ್‌ಕ್ಷಣ ಮರಳುವಂತೆ ಜಪಾನ್ ಎಚ್ಚರಿಕೆ ನೀಡಿದೆ. ಇದರ ಬೆನ್ನಲ್ಲೇ ಚೀನದ ಹಡಗು ವಾಪಾಸಾಗಿದೆ ಎಂದು ವರದಿಯಾಗಿದೆ.
ಎನ್‌ಎಚ್‌ಕೆ ವರ್ಲ್ಡ್ ವರದಿಯ ಪ್ರಕಾರ ಚೀನದ ಮೂರು ಗಸ್ತು ಹಡಗುಗಳು ಜಪಾನ್‌ನ ಮೀನುಗಾರಿಕೆ ದೋಣಿಯನ್ನು ಅನುಸರಿಸುತ್ತಿದ್ದವು. ಈ ಸಂದರ್ಭ ಇವುಗಳಲ್ಲಿ ಎರಡು ಹಡಗುಗಳು ಜಪಾನ್‌ನ ಕಡಲ ಗಡಿಯನ್ನು ಪ್ರವೇಶಿಸಿದ್ದವು ಎನ್ನಲಾಗಿದೆ. ಈ ಹಡಗುಗಳು ಮುಂಜಾನೆಯಿಂದ ಮುಸ್ಸಂಜೆಯ ವರೆಗೆ ಜಪಾನ್‌ನ ಕಡಲ ಪ್ರದೇಶದಲ್ಲಿ ಉಳಿದುಕೊಂಡಿದ್ದವು. ಬಳಿಕ ಜಪಾನ್ ಕೋಸ್ಟ್ ಗಾರ್ಡ್ ಅವರನ್ನು ಹಿಂದಿರುಗುವಂತೆ ಸೂಚನೆ ನೀಡಿದ ಬಳಿಕ ಚೀನದ ಹಡಗುಗಳು ಹಿಂದಿರುಗಿದವು ಎಂದು ಹೇಳಿದೆ.
ಆಗಸ್ಟ್ 28ರ ಬಳಿಕ ಚೀನದ ಹಡಗುಗಳು ಜಪಾನ್ ಗಡಿ ಪ್ರವೇಶಿಸಿದ್ದು ಇದೇ ಮೊದಲು. ಈ ವರ್ಷ ಇಲ್ಲಿಯ ವರೆಗೆ 18 ಚೀನಾದ ಗಸ್ತು ಹಡಗುಗಳು ಜಪಾನಿನ ಕಡಲ ಗಡಿಯಲ್ಲಿ ನುಸುಳಿವೆ. ಚೀನದ ಹಡಗುಗಳ ಈ ಆಕ್ರಮಣಕಾರಿ ವರ್ತನೆಗಳ ದೃಷ್ಟಿಯಿಂದ ಜಪಾನ್ ತನ್ನ ಅಂತಾರಾಷ್ಟ್ರೀಯ ಸಾಗರ ಗಡಿಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಗಸ್ತು ತಿರುಗುತ್ತಿದೆ ಎಂದು ತಿಳಿದುಬಂದಿದೆ.
ದಕ್ಷಿಣ ಚೀನ ಸಮುದ್ರದಲ್ಲಿ ಮಲೇಷ್ಯಾ ಕೂಡ ಚೀನಕ್ಕೆ ಸವಾಲು ಹಾಕಿದೆ. ಚೀನದ 6 ಮೀನುಗಾರಿಕಾ ದೋಣಿಗಳನ್ನು ಮಲೇಷ್ಯಾದ ಕಡಲ ಜಾರಿ ಸಂಸ್ಥೆ (ಎಂಎಂಇಎ) ಶುಕ್ರವಾರ ವಶಪಡಿಸಿಕೊಂಡಿದೆ. ಈ ದೋಣಿಗಳು ಅಕ್ರಮವಾಗಿ ಮಲೇಷ್ಯಾದ ಕಡಲ ಗಡಿಯಲ್ಲಿರುವ ಜೊಹೋರ್ ಕೊಲ್ಲಿಗೆ ಪ್ರವೇಶಿಸಿದ್ದವು. ಇವುಗಳಲ್ಲಿ ಪ್ರಯಾಣಿಸುತ್ತಿದ್ದ 60 ಚೀನೀ ಪ್ರಜೆಗಳನ್ನೂ ವಶಕ್ಕೆ ಪಡೆದುಕೊಳ್ಳಲಾಗಿದೆ
ಸೆನ್ಕಾಕು ಅಥವಾ ದಾಯು ದ್ವೀಪವು ಜಪಾನ್‌ನ ನೈಋತ್ಯ ಪ್ರದೇಶದಲ್ಲಿದೆ. ಜಪಾನ್ ಚೀನದೊಂದಿಗಿನ ವಿವಾದಕ್ಕೆ ಇದು ಕಾರಣವಾಗಿದೆ. ಜಪಾನ್ ಪ್ರಸ್ತುತ ಇದರ ಹಕ್ಕನ್ನು ಹೊಂದಿದೆ. ಆದರೆ ಚೀನ ಇದರ ಮೇಲೆ ಹಕ್ಕು ಸಾಧಿಸಲು ಪ್ರಯತ್ನಿಸುತ್ತಿದೆ. ಇದು ದಕ್ಷಿಣ ಚೀನ ಸಮುದ್ರದ ಸಮೀಪದಲ್ಲಿದೆ. ದ್ವೀಪವು 12 ಮೈಲಿ ಅಂತಾರಾಷ್ಟ್ರೀಯ ವಿಮಾನ ಮಾರ್ಗವನ್ನು ಸಹ ಹೊಂದಿದೆ. ಆದರೆ ಚೀನ ಇದನ್ನು ಒಪ್ಪಿಕೊಳ್ಳದೇ ತನ್ನ ಕುತಂತ್ರವನ್ನೂ ಅಲ್ಲೂ ಮುಂದುವರೆಸಿವೆ. ಚೀನದ ವಾಯುಪಡೆಯು ಜಪಾನ್‌ನ ವಾಯುಪ್ರದೇಶಕ್ಕೆ ನುಸುಳುತ್ತಿರುತ್ತದೆ. ಈ ನಿಟ್ಟಿನಲ್ಲಿ ಜಪಾನಿನ ವಾಯುಪಡೆಯು ಯಾವಾಗಲೂ ಚೀನದ ಎದುರು ಎಚ್ಚರಿಕೆಯಂದಿರುತ್ತದೆ.
ಸೆನ್ಕಾಕು ದ್ವೀಪದ ಬಳಿ ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಚೀನ ಈ ಹಿಂದೆ ಕೆಲವು ಸಂದರ್ಭಗಳಲ್ಲಿ ಹೇಳಿದೆ. ಈ ದ್ವೀಪವು ಮೊದಲಿನಿಂದಲೂ ಚೀನದ ಭಾಗವಾಗಿದೆ. ನಮ್ಮ ಸಾರ್ವಭೌಮತ್ವವನ್ನು ರಕ್ಷಿಸಲು ನಾವು ದೃಢನಿಶ್ಚಯವನ್ನು ಹೊಂದಿದ್ದೇವೆ. ಇಲ್ಲಿ ನಮ್ಮ ಸೇನಾ ವಿಮಾನಗಳು ಕಾರ್ಯಚರಿಸುತ್ತಿರುತ್ತದೆ. ನಮ್ಮ ನೌಕಾಪಡೆಯು ನಿಯಮಿತವಾಗಿ ಗಸ್ತು ತಿರುಗುತ್ತಿದೆ. ಇದು ಯಾವುದೇ ರೀತಿಯಲ್ಲಿ ಅಂತಾರಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಲ್ಲ. ಇದರಿಂದ ಯಾವುದೇ ದೇಶಕ್ಕೆ ಯಾವುದೇ ಬೆದರಿಕೆ ಇಲ್ಲ ಎಂದು ಚೀನದ ವಿದೇಶಾಂಗ ವಕ್ತಾರ ಹೇಳಿದ್ದಾರೆ.