Advertisement

ಬಾವಿ ಸ್ವಚ್ಛತೆಗೆ ಇಳಿದ ಇಬ್ಬರು ಉಸಿರುಗಟ್ಟಿ ಸಾವು

09:25 PM Apr 30, 2019 | Team Udayavani |

ಬೆಂಗಳೂರು: ಹದಿನೈದು ಅಡಿ ಆಳದ ಬಾವಿ ಸ್ವಚ್ಛಗೊಳಿಸಲು ಇಳಿದಿದ್ದ ಇಬ್ಬರು ಉಸಿರುಗಟ್ಟಿ ಮೃತಪಟ್ಟ ಘಟನೆ ಕೆ.ಜಿ.ಹಳ್ಳಿಯ ಟ್ಯಾನರಿ ರಸ್ತೆಯಲ್ಲಿನ ಬಿಸ್ಮಿಲ್ಲಾ ಟೀ ಪಾಯಿಂಟ್‌ನಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.ಡಿ.ಜಿ.ಹಳ್ಳಿ ನಿವಾಸಿ ಗಫ‌ೂರ್‌ ಪಾಷ (45) ಮತ್ತು ಕೆ.ಜಿ.ಹಳ್ಳಿ ನಿವಾಸಿ ಅಫ್ತಾಬ್‌ ಪಾಷ (36) ಮೃತರು.

Advertisement

ಶನಿವಾರ ಬೆಳಗ್ಗೆ 11.30ಕ್ಕೆ ಘಟನೆ ನಡೆದಿದ್ದು, ಡಾ.ಬಿ.ಆರ್‌.ಅಂಬೇಡ್ಕರ್‌ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಮೃತರ ದೇಹಗಳನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಈ ಸಂಬಂಧ ಗಫ‌ೂರ್‌ ಪಾಷ ಪತ್ನಿ ನೀಡಿದ ದೂರಿನ ಆಧಾರದಲ್ಲಿ ಹೋಟೆಲ್‌ ಮಾಲೀಕ ನವೀದ್‌ ಅಹ್ಮದ್‌ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.

ಗಫ‌ೂರ್‌ ಪಾಷ ಬಿಸ್ಮಿಲ್ಲಾ ಟೀ ಪಾಯಿಂಟ್‌ನಲ್ಲೇ ಕೆಲಸ ಮಾಡುತ್ತಿದ್ದು, ಅಫ್ತಾಬ್‌ ಪಾಷ ವಾಹನ ಚಾಲನೆ ಹಾಗೂ ಇತರೆ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದರು. ಟೀ ಪಾಯಿಂಟ್‌ ಹಿಂಭಾಗದಲ್ಲಿ ಒಂದೂವರೆ ಮೀಟರ್‌ ಸುತ್ತಳತೆಯ 15 ಅಡಿ ಆಳದ ಬಾವಿ ಇದ್ದು, ಮೂರು ವರ್ಷಗಳಿಂದ ಸ್ವಚ್ಛಗೊಳಿಸಿರಲಿಲ್ಲ.

ಹೀಗಾಗಿ, ಸುಮಾರು ಮೂರು ಅಡಿಗೂ ಹೆಚ್ಚು ನೀರು ತುಂಬಿಕೊಂಡು ಕೆಟ್ಟ ವಾಸನೆ ಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಬಾವಿ ಸ್ವಚ್ಛಗೊಳಿಸಲು ಗಫ‌ೂರ್‌ ಹಾಗೂ ಅಫ್ತಾಬ್‌ಗ ಹೋಟೆಲ್‌ ಮಾಲೀಕ ನವೀದ್‌ ಅಹ್ಮದ್‌ 15 ದಿನಗಳಿಂದ ಒತ್ತಾಯ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಉಸಿರುಗಟ್ಟಿ ಸಾವು: ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಇಬ್ಬರೂ ಬಾವಿ ಸ್ವಚ್ಛಗೊಳಿಸಲು ಬಂದಿದ್ದು, ಮೊದಲಿಗೆ ಅಫ್ತಾಬ್‌ ಬಾವಿಗೆ ಇಳಿದಿದ್ದಾನೆ. ಆದರೆ, ಅಲ್ಲಿನ ದುರ್ವಾಸನೆಯಿಂದ ಉಸಿರಾಟಕ್ಕೆ ತೊಂದರೆಯಾಗಿ ರಕ್ಷಣೆಗೆ ಕೂಗಿಕೊಂಡಿದ್ದಾರೆ. ಆತಂಕಗೊಂಡ ಗಫ‌ೂರ್‌, ತಕ್ಷಣ ಬಾವಿಗಿಳಿದು ರಕ್ಷಣೆಗೆ ಮುಂದಾಗಿದ್ದು, ಇಬ್ಬರೂ ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Advertisement

ಇದನ್ನು ಗಮನಿಸಿದ ಹೋಟೆಲ್‌ ಸಿಬ್ಬಂದಿ ಪೊಲೀಸ್‌ ಸಹಾಯವಾಣಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದ ಕೆ.ಜಿ.ಹಳ್ಳಿ ಪೊಲೀಸರು ಅಗ್ನಿಶಾಮಕ ದಳ ಮತ್ತು ಸ್ಥಳೀಯರ ನೆರವಿನೊಂದಿಗೆ ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ. ಶವ ಪರೀಕ್ಷೆ ನಡೆಸಿದ ಡಾ.ಬಿ.ಆರ್‌.ಅಂಬೇಡ್ಕರ್‌ ಆಸ್ಪತ್ರೆ ವೈದ್ಯರು, ಬಾವಿಯಲ್ಲಿದ್ದ ವಿಷಾನಿಲ ಶ್ವಾಸಕೋಶ ಸೇರಿದ್ದರಿಂದ ಇಬ್ಬರೂ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

ಮಗನಿಗೆ ಒಳ್ಳೆ ಊಟ ಕೊಡಿಸಲು ಕೆಲಸಕ್ಕೆ ಹೋಗಿದ್ದರು: ಗಫ‌ೂರ್‌ ಪಾಷ ಮತ್ತು ಅಫ್ತಾಬ್‌ ಪಾಷ ಇಬ್ಬರೂ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದರು. ಅಫ್ತಾಬ್‌ಗ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳು ಇದ್ದಾರೆ. ಈ ಪೈಕಿ ಒಬ್ಬ ಮಗನನ್ನು ಹೆಗಡೆ ನಗರ ಸಮೀಪದ ಚೊಕ್ಕನಹಳ್ಳಿಯಲ್ಲಿರುವ ಮದರಸಾಗೆ ಸೇರಿಸಲಾಗಿದೆ.

ಶನಿವಾರ ಬೆಳಗ್ಗೆ ಪುತ್ರನನ್ನು ಮನೆಗೆ ಕರೆತರಬೇಕಿತ್ತು. ಆದರೆ, ಬಹಳ ದಿನಗಳ ನಂತರ ಬರುವ ಪುತ್ರನಿಗಾಗಿ ಮನೆಯಲ್ಲಿ ಒಳ್ಳೆ ಅಡುಗೆ ಮಾಡಿಸಬೇಕು ಹಾಗೂ ಹೊಸ ಬಟ್ಟೆ ಖರೀದಿಸಬೇಕು ಎಂದು ಅಫ್ತಾಬ್‌ ನಿರ್ಧರಿಸಿದ್ದರು. ಆದರೆ, ಹಣ ಇರಲಿಲ್ಲ.

ಹೀಗಾಗಿ ಬಾವಿ ಸ್ವಚ್ಛಗೊಳಿಸಲು ಒಪ್ಪಿಕೊಂಡಿದ್ದು, ಅದರಿಂದ ಬಂದ ಹಣದಲ್ಲಿ ಪುತ್ರನಿಗೆ ಹೊಸ ಬಟ್ಟೆ ಹಾಗೂ ಮನೆಯಲ್ಲಿ ಒಳ್ಳೆ ಅಡುಗೆ ಮಾಡಿಸುತ್ತೇನೆ ಎಂದು ಶನಿವಾರ ಬೆಳಗ್ಗೆ ಕೆಲಸಕ್ಕೆ ಹೋಗುವ ಮೊದಲು ಸ್ನೇಹಿತರು ಹಾಗೂ ಪತ್ನಿ ಬಳಿ ಹೇಳಿದ್ದರು ಎನ್ನಲಾಗಿದೆ.

ಗಫ‌ೂರ್‌ ಪಾಷಾಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದಾರೆ. ನಾಲ್ಕು ವರ್ಷಗಳಿಂದ ಬಿಸ್ಮಿಲ್ಲಾ ಟೀ ಪಾಯಿಂಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಪುತ್ರಿಯರಿಗು ಮದುವೆ ಮಾಡುವ ಸಿದ್ಧತೆಯಲ್ಲಿದ್ದರು.

ಹೋಟೆಲ್‌ ಮಾಲೀಕನ ನಿರ್ಲಕ್ಷ್ಯ: ಘಟನೆಗೆ ಹೋಟೆಲ್‌ ಮಾಲೀಕ ನವೀದ್‌ ಅಹ್ಮದ್‌ ನಿರ್ಲಕ್ಷ್ಯವೇ ಕಾರಣ. ಬಾವಿ ಸcಚ್ಛತೆಗೆ ಇಳಿಯುವ ಕೆಲಸಗಾರರಿಗೆ ಯಾವುದೇ ರಕ್ಷಣಾ ಸಲಕರಣೆಗಳನ್ನು ಕೊಟ್ಟಿಲ್ಲ. ಹೀಗಾಗಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದರು. ಹೋಟೆಲ್‌ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಂಡು, ನಮಗೆ ನ್ಯಾಯಕೊಡಿಸಬೇಕು ಎಂದು ಸಂಬಂಧಿಕರು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next