Advertisement

ಕೊಡಗು ಸಂತ್ರಸ್ತರಿಗೆ 2 ಬೆಡ್‌ ರೂಂ ಮನೆ: ಸರಕಾರ ಗ್ರೀನ್‌ ಸಿಗ್ನಲ್‌

02:50 AM Nov 30, 2018 | Team Udayavani |

ಮಡಿಕೇರಿ: ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದಾಗಿ 840 ಕುಟುಂಬಗಳನ್ನು ನಿರಾಶ್ರಿತರೆಂದು ಗುರ್ತಿಸಲಾಗಿದ್ದು, ಈ ಸಂತ್ರಸ್ತ ಕುಟುಂಬದವರಿಗೆ ಮನೆ ನಿರ್ಮಿಸಿಕೊಡುವ ನಿಟ್ಟಿನಲ್ಲಿ ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮ ವತಿಯಿಂದ 9.85 ಲಕ್ಷ ರೂ. ವೆಚ್ಚದಲ್ಲಿ ಎರಡು ಬೆಡ್‌ ರೂಂ ಒಳಗೊಂಡ ಮನೆ ನಿರ್ಮಿಸಲು ಸರ್ಕಾರ ಮುಂದಾಗಿದೆ. ಆ ನಿಟ್ಟಿನಲ್ಲಿ 840 ಮನೆಗಳಿಗೆ ಒಟ್ಟು 8,274 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಾಣಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ. ಸಂತ್ರಸ್ತ 840 ಕುಟುಂಬಗಳ ಪೈಕಿ ಪ್ರವರ್ಗ ಮತ್ತು ಪ್ರದೇಶವಾರು ಆಧರಿಸಿ ನಿಯಮಾನುಸಾರದ ಅರ್ಹ ಸಹಾಯಾನುದಾನ ಒಟ್ಟು ರೂ.1111 ಲಕ್ಷಗಳನ್ನು ಸಂಬಂಧಿಸಿದ ವಸತಿ ಯೋಜನೆಯಡಿ ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತದ ವತಿಯಿಂದ ಫ‌ಲಾನುಭವಿಗಳ ಲೆಕ್ಕದಲ್ಲಿ ಬಿಡುಗಡೆ ಮಾಡಿ ವೆಚ್ಚ ಮಾಡಲಾಗುತ್ತದೆ.

Advertisement

840 ಮನೆಗಳ ನಿರ್ಮಾಣದ ಅಂದಾಜು ವೆಚ್ಚ ರೂ.8,274 ಲಕ್ಷಗಳ ಪೈಕಿ ಸಹಾಯಾನುದಾನದ ಮೊತ್ತ ರೂ.1111 ಲಕ್ಷ ಹೊರತುಪಡಿಸಿ ಉಳಿಕೆ ಮೊತ್ತ ರೂ.7163 ಲಕ್ಷ ಗಳನ್ನು ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ಭರಿಸಿ, ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತದ ಸಂಸ್ಥೆಗೆ ತಕ್ಷಣವೇ ಬಿಡುಗಡೆ ಮಾಡಲಾಗುತ್ತದೆ. 840 ಮನೆಗಳನ್ನು ತಲಾ ರೂ.9.85 ಲಕ್ಷಗಳ ವೆಚ್ಚದಲ್ಲಿ ಒಟ್ಟಾರೆ ರೂ.8,274 ಲಕ್ಷಗಳ ವೆಚ್ಚದಲ್ಲಿ ಕರ್ನಾಟಕ ರಾಜ್ಯ ಹ್ಯಾಬಿಟೇಟ್‌ ಕೇಂದ್ರದ ಮೂಲಕ ನಿರ್ಮಿಸುವ ಕಾಮಗಾರಿಯನ್ನು ನೇರವಾಗಿ ಕೈಗೊಳ್ಳಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ, 1999 ರ ಕಲಂ 4ಜಿ ರಡಿ ವಿನಾಯ್ತಿ ನೀಡಿರುವುದರಿಂದ ಈ ಕಾಮಗಾರಿಯನ್ನು ಕರ್ನಾಟಕ ರಾಜ್ಯ ಹ್ಯಾಬಿಟೇಟ್‌ ಕೇಂದ್ರದ ಮೂಲಕ ಕೈಗೊಳ್ಳಲಾಗುತ್ತದೆ.

ಜಿಲ್ಲಾ ಉಸ್ತುವಾರಿ ಸಚಿವರಾದ ಸಾ.ರಾ.ಮಹೇಶ್‌ ಅವರ ಅಧ್ಯಕ್ಷತೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಸಂತ್ರಸ್ತರಿಗೆ ತುರ್ತು ಪುನರ್‌ ವಸತಿ ಕಲ್ಪಿಸಲು ತಿಳಿಸಲಾಗಿತ್ತು, ಅದರಂತೆ ಅಕ್ಟೋಬರ್‌, 17 ರಂದು ಮಾನ್ಯ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮಡಿಕೇರಿಗೆ ಭೇಟಿ ನೀಡಿ ಮಾದರಿ ಮನೆಗಳನ್ನು ವೀಕ್ಷಣೆ ಮಾಡಿದ ಸಂದರ್ಭದಲ್ಲಿ ನಿರಾಶ್ರಿತರಿಗೆ ಎರಡು ಬೆಡ್‌ ರೂಂ ಮನೆಗಳನ್ನು ನಿರ್ಮಿಸಲು ಸಲಹೆ ಮಾಡಿದ್ದರು. ಅದರಂತೆ ರಾಜೀವ್‌ ಗಾಂಧೀ ಗ್ರಾಮೀಣ ವಸತಿ ನಿಗಮವು ಸರ್ಕಾರಕ್ಕೆ ಅನುಮೋದನೆ ಕೋರಿ ಮನವಿ ಮಾಡಿತ್ತು.

ಅದರಂತೆ 840 ನಿರಾಶ್ರಿತರ ಪೈಕಿ ಪರಿಶಿಷ್ಟ ಜಾತಿ ಪ್ರವರ್ಗದ 92/ ಪರಿಶಿಷ್ಟ ಪಂಗಡ ಪ್ರವರ್ಗದ 88 ಮತ್ತು ಇತರೇ ಪ್ರವರ್ಗದ 660 ನಿರಾಶ್ರಿತರಿದ್ದು, ಇವರಲ್ಲಿ ನಗರ ಪ್ರದೇಶದ 225 ಮತ್ತು ಗ್ರಾಮೀಣ ಪ್ರದೇಶದ 615 ನಿರಾಶ್ರಿತರಿರುತ್ತಾರೆ. ನಗರ ಪ್ರದೇಶದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಒಟ್ಟು 16 ನಿರಾಶ್ರಿತರಿದ್ದು, ಅದೇ ಗ್ರಾಮೀಣ ಪ್ರದೇಶದ 164 ನಿರಾಶ್ರಿತರಿರುತ್ತಾರೆ. ವಿವಿಧ ವಸತಿ ಯೋಜನೆಯಡಿ ನಗರ ಪ್ರದೇಶದ ಪರಿಶಿಷ್ಟ ಜಾತಿ, ಪಂಗಡದ ಫ‌ಲಾನುಭವಿಗಳಿಗೆ ಪ್ರತಿ ಘಟಕಕ್ಕೆ ರೂ. 2 ಲಕ್ಷಗಳ ಸಹಾಯಾನುದಾನವನ್ನು ಮತ್ತು ಗ್ರಾಮೀಣ ಪ್ರದೇಶದ ಪರಿಶಿಷ್ಟ ಜಾತಿ, ಪಂಗಡದ ಫ‌ಲಾನುಭವಿಗಳಿಗೆ ಪ್ರತಿ ಘಟಕಕ್ಕೆ ರೂ.1.75 ಲಕ್ಷಗಳ ಸಹಾಯಾನುದಾನವನ್ನು ನೀಡಲು ಅವಕಾಶ ಇರುತ್ತದೆ.

ಇತರೇ ವರ್ಗದ ಫ‌ಲಾನುಭವಿಗಳಿಗೆ ಪ್ರತಿ ಘಟಕಕ್ಕೆ ರೂ.1.20 ಲಕ್ಷಗಳ ಸಹಾಯಾನುದಾನವನ್ನು ನೀಡಲು ಅವಕಾಶ ಇರುತ್ತದೆ. ಕರ್ನಾಟಕ ರಾಜ್ಯ ಹ್ಯಾಬಿಟೇಟ್‌ ಕೇಂದ್ರದವರು 2016-17ನೇ ಸಾಲಿನ ದರಪಟ್ಟಿಯಂತೆ 2 ಬೆಡ್‌ ರೂಂಗಳಿರುವ ಪ್ರತಿ ಮನೆಯನ್ನು ಅಂದಾಜು ರೂ.9.85 ಲಕ್ಷಗಳ ವೆಚ್ಚದಲ್ಲಿ ನಿರ್ಮಿಸಲು ಒಪ್ಪಿರುತ್ತಾರೆ. 840 ಮನೆಗಳನ್ನು ಪ್ರತಿ ಮನೆಗೆ ಅಂದಾಜು ರೂ.9.85 ಲಕ್ಷಗಳ ವೆಚ್ಚದಲ್ಲಿ ನಿರ್ಮಿಸಲು ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತವು ಪ್ರಸ್ತಾವನೆ ಸಲ್ಲಿಸಿದ್ದು, ಇದರ ಒಟ್ಟು ಅಂದಾಜು ವೆಚ್ಚವು ರೂ.8,274 ಲಕ್ಷಗಳಾಗುತ್ತವೆ. ಈ ಅಂದಾಜು ವೆಚ್ಚದಲ್ಲಿ ಸಹಾಯಾನುದಾನದ ಮೊತ್ತ ರೂ.1111 ಲಕ್ಷಗಳನ್ನು ಕಳೆದಲ್ಲಿ, ಬಾಕಿ ಮೊತ್ತ ರೂ.7,163 ಲಕ್ಷಗಳನ್ನು ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ಭರಿಸಲಾಗುತ್ತದೆ. 840 ಮನೆಗಳನ್ನು ಕರ್ನಾಟಕ ರಾಜ್ಯ ಹ್ಯಾಬಿಟೇಟ್‌ ಕೇಂದ್ರದ ವತಿಯಿಂದ ನಿರ್ಮಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ, 1999ರ ನಿಯಮ 4 ಜಿ ರಡಿ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next